ತಮಿಳುನಾಡು ಸರಕಾರ ರಚಿಸಲಿರುವ ಆರ್ಥಿಕ ಸಲಹಾ ಮಂಡಳಿಯಲ್ಲಿ ನೋಬೆಲ್ ಪ್ರಶಸ್ತಿ ವಿಜೇತೆ ಎಸ್ತರ್ ಡಫ್ಲೊ, ರಘುರಾಮ್ ರಾಜನ್

Update: 2021-06-21 08:22 GMT
ಎಸ್ತರ್ ಡಫ್ಲೊ / ರಘುರಾಮ್ ರಾಜನ್

ಚೆನ್ನೈ: ನೋಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞೆ, ಮೆಸಾಚುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಸ್ತರ್ ಡಫ್ಲೊ, ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ರಘುರಾಮ್ ರಾಜನ್,  ಕೇಂದ್ರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್, ಖ್ಯಾತ ಅರ್ಥಶಾಸ್ತ್ರಜ್ಞ ಜೀನ್ ಡ್ರೀಝ್ ಹಾಗೂ ಮಾಜಿ ಕೇಂದ್ರ ವಿತ್ತ ಕಾರ್ಯದರ್ಶಿ ಎಸ್ ನಾರಾಯಣ್ ಅವರನ್ನೊಳಗೊಂಡ ಆರ್ಥಿಕ ಸಲಹಾ ಮಂಡಳಿಯನ್ನು ತಮಿಳುನಾಡು ಸರಕಾರ ರಚಿಸಲಿದೆ ಎಂದು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಸೋಮವಾರ ತಿಳಿಸಿದ್ದಾರೆ.

ರಾಜ್ಯದ ಆರ್ಥಿಕ ಕ್ಷೇತ್ರಕ್ಕೆ ಪುನಶ್ಚೇತನ ನೀಡಿ ಆರ್ಥಿಕ ಪ್ರಗತಿ ವೇಗ ಪಡೆಯುವಂತಾಗಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಮಂಡಳಿಯನ್ನು ರಚಿಸಲಾಗುತ್ತಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ಈ ಮಂಡಳಿಯ ಶಿಫಾರಸಿನಂತೆ ಸರಕಾರ ರಾಜ್ಯದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲಿದೆ ಹಾಗೂ ಆರ್ಥಿಕ ಪ್ರಗತಿಯ ಲಾಭ ಸಮಾಜದ ಎಲ್ಲಾ ವರ್ಗಗಳನ್ನು ತಲುಪುವಂತೆ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ವಿಧಾನಸಭೆಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಜ್ಯಪಾಲರು ತಿಳಿಸಿದ್ದಾರೆ.

ರಾಜ್ಯದ ಆರ್ಥಿಕ ಸ್ಥಿತಿಗತಿಯ ಕುರಿತಂತೆ ಜನರು ತಿಳಿಯುವಂತಾಗಲು ಜುಲೈ ತಿಂಗಳಲ್ಲಿ ಶ್ವೇತಪತ್ರ ಬಿಡುಗಡೆಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರಕಾರ ಕೃಷಿಗೆ ಪ್ರತ್ಯೇಕ ವಾರ್ಷಿಕ ಬಜೆಟ್ ಮಂಡಿಸಲಿದ್ದು ಕೃಷಿ ಕ್ಷೇತ್ರದ ಉತ್ಪಾದನೆ ಹೆಚ್ಚಿಸಲು ಹಾಗೂ ರೈತರ ಕಲ್ಯಾಣದ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಆರ್ಥಿಕ ವರ್ಷ 2021-22ರಲ್ಲಿ ಆಹಾರ ಉತ್ಪಾದನೆಯ ಗುರಿಯಾದ 125 ಮೆಟ್ರಿಕ್ ಟನ್ ತಲುಪಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮೂರನೇ ಅಲೆ ಸಾಧ್ಯತೆಯ ಬಗ್ಗೆ ತಜ್ಞರ ಎಚ್ಚರಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು ಸಂಭಾವ್ಯ ಮೂರನೇ ಅಲೆಯ ವಿರುದ್ಧ  ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ತಮಿಳು ಮಾಧ್ಯಮದಲ್ಲಿ ಶಿಕ್ಷಣಕ್ಕೆ ಸರಕಾರ ಹೆಚ್ಚು ಒತ್ತು ನೀಡಲಿದೆ ಹಾಗೂ ಸರಕಾರಿ ಶಾಲೆಗಳಲ್ಲಿ ಕಲಿತವರಿಗೆ ಸರಕಾರಿ ಹುದ್ದೆಗಳಿಗೆ ನೇಮಕಾತಿಗಳ ವೇಳೆ ಆದ್ಯತೆ ನೀಡುವ ಉದ್ದೇಶ ಸರಕಾರಕ್ಕಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News