ಕೆನಡಾ ಶಾಲೆಗಳಲ್ಲಿ ಭಾರತದ ರೈತ ಪ್ರತಿಭಟನೆ ಕುರಿತ ಪಠ್ಯ ತೆಗೆದು ಹಾಕುವಂತೆ ಕಾನ್ಸುಲೇಟ್ ಜನರಲ್ ಪತ್ರ

Update: 2021-06-21 09:11 GMT
ಸಾಂದರ್ಭಿಕ ಚಿತ್ರ

ಟೊರಂಟೋ: ಕೆನಡಾ ರಾಜಧಾನಿ ಟೊರಂಟೋದಲ್ಲಿರುವ ಭಾರತೀಯ ಕಾನ್ಸುಲೇಟ್ ಅಲ್ಲಿನ ಒಂಟಾರಿಯೋ ಪ್ರಾಂತ್ಯದ ಸರಕಾರಕ್ಕೆ ಮೂರು ತಿಂಗಳ ಹಿಂದೆ ಬರೆದ ಪತ್ರವೊಂದು ಈಗ ಸುದ್ದಿಯಾಗಿದೆ. ಅಲ್ಲಿನ ಶಾಲಾ ಪಠ್ಯದಲ್ಲಿ ಭಾರತದಲ್ಲಿ ನೂತನ ಕೃಷಿ ಕಾಯಿದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗಳ ಕುರಿತಂತೆ ಇರುವ "ಸುಳ್ಳು ಮತ್ತು ದ್ವೇಷಪೂರಿತ'' ವಿಚಾರವನ್ನು ತೆಗೆದು ಹಾಕುವಂತೆ ಪತ್ರದಲ್ಲಿ ಸೂಚಿಸಲಾಗಿದೆ.

ಪೀಲ್, ಟೊರಂಟೋ ಮತ್ತು ಯಾರ್ಕ್ ಜಿಲ್ಲೆಗಳ ಕೆಲ ಶಾಲೆಗಳ ಕಲಿಕಾ ವಿಷಯದಲ್ಲಿ "ಸುಳ್ಳು ಮಾಹಿತಿ'' ಆಧರಿಸಿ 'ಧ್ರುವೀಕೃತ ವಿಚಾರಗಳಿವೆ' ಹಾಗೂ ಇದು "ಭಾರತದ ವಿರುದ್ಧ ದ್ವೇಷ ಸೃಷ್ಟಿಸುತ್ತಿದೆ,'' ಎಂದು ಕಾನ್ಸುಲೇಟ್ ಜನರಲ್ ಅವರು ಮಾರ್ಚ್ 11ರಂದು ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.

"ಈ ವಿಚಾರ ಬಹಳ ಗಂಭೀರವಾಗಿದೆ ಹಾಗೂ ಭಾರತ ಮತ್ತು ಕೆನಡಾ ನಡುವಿನ ಸ್ನೇಹ ಸಂಬಂಧಗಳನ್ನು ಹಾಳುಗೆಡಹಲು ಮಾಡಿರುವ ಸಂಚು ಎಂದು ನಂಬಿದೆ,'' ಎಂದು ಪತ್ರದಲ್ಲಿ ವಿವರಿಸಲಾಗಿದ್ದು ಈ ಪತ್ರವೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇಂತಹ ವಿಷಯವನ್ನು ಕಲಿಸುವ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಹೆತ್ತವರು ಭಾರತೀಯ ಕಾನ್ಸುಲೇಟ್ ಅನ್ನು ಸಂಪರ್ಕಿಸಿದ ನಂತರ ಈ ಪತ್ರ ಬರೆಯಲಾಗಿತ್ತೆನ್ನಲಾಗಿದೆ. ಇಂತಹ ವಿಷಯ ಶಾಲೆಯಲ್ಲಿ ಕಲಿಸಲಾಗುತ್ತಿರುವುದರಿಂದ ತಮ್ಮ ಮಕ್ಕಳು ನಿಂದನೆ ಮತ್ತು ಕಿರುಕುಳಕ್ಕೊಳಗಾಗುತ್ತಿದ್ದಾರೆ ಎಂದು ಹಲವು ಹೆತ್ತವರು ಆರೋಪಿಸಿದ್ದಾರೆನ್ನಲಾಗಿದೆ.

ಕಾನ್ಸುಲೇಟ್ ಜನರಲ್ ಬರೆದ ಪತ್ರವನ್ನು ಪೀಲ್ ಡಿಸ್ಟ್ರಿಕ್ಟ್ ಸ್ಕೂಲ್ ಬೋರ್ಡ್ ನಿಂದ ಮಾಹಿತಿ ಹಕ್ಕು ಮನವಿಯ ಮುಖಾಂತರ  ವಲ್ರ್ಡ್ ಸಿಖ್ ಆರ್ಗನೈಝೇಶನ್ ಪಡೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News