ಜೂ.22ರಂದು ಉಸ್ತುವಾರಿ ಸಚಿವರು, ಶಾಸಕರ ಕಚೇರಿ ಎದುರು ಖಾಲಿ ಚೀಲ ಸುಟ್ಟು ಜನಾಗ್ರಹ ಆಂದೋಲನ ಪ್ರತಿಭಟನೆ

Update: 2021-06-21 13:03 GMT

ಬೆಂಗಳೂರು, ಜೂ.21: ಸಮಗ್ರ ಪ್ಯಾಕೇಜ್, ತುರ್ತು ಕ್ರಮಗಳಿಗೆ ಒತ್ತಾಯಿಸಿ ಜನಾಗ್ರಹ ಆಂದೋಲನ ಸಮಿತಿಯು ಜೂನ್ 22ರಂದು ಉಸ್ತುವಾರಿ ಮಂತ್ರಿ, ಶಾಸಕರ ಕಚೇರಿ ಎದುರು ಖಾಲಿ ಚೀಲಗಳನ್ನು ಸುಟ್ಟು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

''ಕೋವಿಡ್ 2ನೇ ಅಲೆ ಎದುರಿಸಲು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸುವ ಜನಸಾಮಾನ್ಯರ ದನಿಯಾಗಿ ಜನಾಗ್ರಹ ಆಂದೋಲನವು ರೂಪತಳೆದಿದೆ. ರಾಜ್ಯದ ನೂರಾರು ಗಣ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಸೇರಿ ಮುಖ್ಯಮಂತ್ರಿಗೆ ಮೂರು ಬಾರಿ ಪತ್ರ ಬರೆದಿದ್ದಾರೆ ಮತ್ತು ಎರಡು ಸುತ್ತಿನ ರಾಜ್ಯವ್ಯಾಪಿ ಪ್ರತಿಭಟನೆಗಳೂ ನಡೆದಿವೆ. ಜನಾಗ್ರಹ, ಜನಪರ ಸಂಘಟನೆಗಳು ಹಾಗೂ ಮಾಧ್ಯಮಗಳು ಮಾಡಿದ ಒತ್ತಡಗಳಿಂದಾಗಿ ಎರಡು ಪ್ಯಾಕೇಜುಗಳನ್ನು ಸರ್ಕಾರ ಘೋಷಿಸಿದೆ. ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಇವು ಏನಕ್ಕೂ ಸಾಲದ ಅರೆಮನಸ್ಸಿನ ಅರೆಬರೆ ಕ್ರಮಗಳಾಗಿವೆ'' ಎಂದು ಸಮಿತಿಯು ಟೀಕಿಸಿದೆ.

''ಕುಟುಂಬಗಳು ಕುಸಿದು ಕೂತಿವೆ, ಬಂಧುಗಳನ್ನು ಕಳೆದುಕೊಂಡ ಕುಟುಂಬಗಳು ಕಣ್ಣೀರಿನಲ್ಲಿ ಮುಳುಗಿವೆ. ಆರ್ಥಿಕತೆ ನೆಲಕಚ್ಚಿದೆ. ಅನೇಕ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಯುತ್ತಿದೆ. ದುಡಿಮೆ ಪ್ರಾರಂಭವಾಗುವ ಪರಿಸ್ಥಿತಿ ಸುಧಾರಿಸುವ ಮಾತು ದೂರವಿದೆ. ಅಲ್ಲದೆ ಮೂರನೇ ಅಲೆಯ ಕತ್ತಿ ನೆತ್ತಿಯ ಮೇಲೆ ತೂಗುತ್ತಿದೆ. ಆದರೆ ಸರ್ಕಾರ ಅದನ್ನು ದಿಟ್ಟವಾಗಿ ಎದುರಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ. ಇಡೀ ರಾಜ್ಯ ಒಕ್ಕೊರಲಿನೊಂದಿಗೆ ಸರ್ಕಾರಕ್ಕೆ ಕೇಳಿಸುವಂತೆ, ಸರ್ಕಾರ ಕಾರ್ಯಪ್ರವೃತ್ತವಾಗುವಂತೆ ಮಾಡಬೇಕಿದೆ. ಇದರಲ್ಲಿ ಜನ ಪ್ರತಿನಿಧಿಗಳ ಪಾತ್ರ ಮುಖ್ಯವಾಗಿದೆ. ಜನಸಾಮಾನ್ಯರು ಮಾತ್ರವಲ್ಲ ಜನಪ್ರತಿನಿಧಿಗಳಾಗಿ ಅವರೂ ಸಹ ಸರ್ಕಾರವನ್ನು ಒತ್ತಾಯಿಸಬೇಕಿದೆ. ಹಾಗಾಗಿ ಜೂನ್ 22 ರಂದು ರಾಜ್ಯವ್ಯಾಪಿಯಾಗಿ ಉಸ್ತುವಾರಿ ಸಚಿವರು ಮತ್ತು ಬಿಜೆಪಿ ಶಾಸಕರ ಕಚೇರಿಗಳ ಮುಂದೆ ಜನಾಗ್ರಹ ನಡೆಸುತ್ತಿದ್ದೇವೆ ಮತ್ತು ಹಸಿದ ಹೊಟ್ಟೆಗಳ ಸಂಕೇತವಾಗಿ ಖಾಲಿ ಚೀಲಗಳನ್ನು ಸುಟ್ಟು ಪ್ರತಿಭಟನೆ ನಡೆಸುತ್ತಿದ್ದೇವೆ'' ಎಂದು ಜನಾಗ್ರಹ ಆಂದೋಲನ ಸಮತಿಯು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News