ಶಿವಮೊಗ್ಗ ವಿಮಾನ ನಿಲ್ದಾಣದ ವಿನ್ಯಾಸ ಬದಲಿಸಲು ಕಾಂಗ್ರೆಸ್ ಆಗ್ರಹ

Update: 2021-06-21 13:12 GMT

ಬೆಂಗಳೂರು, ಜೂ. 21: `ರಾಜಕೀಯ ಪಕ್ಷದ ಚಿಹ್ನೆಯ ಪ್ರಚಾರಕ್ಕೆ ಸಾರ್ವಜನಿಕ ಹಣ ಮತ್ತು ಜಾಗ ಬಳಕೆ ಮಾಡುವುದು ಸರಿಯಲ್ಲ. ಈ ಹಿಂದಿನ ಪ್ರಕರಣಗಳಲ್ಲಿ ಹೈಕೋರ್ಟ್ ಹಾಗೂ ಚುನಾವಣಾ ಆಯೋಗ ಇದನ್ನು ವಿರೋಧಿಸಿವೆ. ಹೀಗಾಗಿ ಕೇಂದ್ರ-ರಾಜ್ಯ ಸರಕಾರಗಳು ಶಿವಮೊಗ್ಗ ವಿಮಾನ ನಿಲ್ದಾಣದ ವಿನ್ಯಾಸವನ್ನು ಕೂಡಲೇ ಬದಲಿಸಬೇಕು' ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಸೋಮವಾರ ಇಲ್ಲಿನ ಕ್ವೀನ್ಸ್ ರಸ್ತೆಯಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ವಕ್ತಾರ ಬ್ರಿಜೆಶ್ ಕಾಳಪ್ಪ ಮಾತನಾಡಿ, ಶಿವಮೊಗ್ಗ ವಿಮಾನ ನಿಲ್ದಾಣದ ವಿನ್ಯಾಸ ಕಮಲದ ಆಕಾರದಲ್ಲಿದೆ. ಕಮಲ ಯಾವ ಪಕ್ಷದ ಚಿಹ್ನೆ ಎಂದು ಎಲ್ಲರಿಗೂ ಗೊತ್ತಿದೆ. ಪಕ್ಷದ ಚಿಹ್ನೆಗೆ ಪ್ರಚಾರ ನೀಡಲು ಸರಕಾರದ ಹಣ ಬಳಕೆ ಮಾಡುವುದು ಸಲ್ಲ. ಈ ವಿಚಾರವಾಗಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಈ ವಿನ್ಯಾಸ ನಿರ್ಮಾಣ ಕೂಡಲೇ ನಿಲ್ಲಿಸಬೇಕು ಹಾಗೂ ಇದನ್ನು ಬದಲಿಸಬೇಕು. ಸರಕಾರದ ಹಣದಲ್ಲಿ ನಿಮ್ಮ ಪಕ್ಷದ ಪ್ರಚಾರ ಸಾಧ್ಯವಿಲ್ಲ ಎಂದರು.

ಭದ್ರಾ ಮೇಲ್ದಂಡೆ ಯೋಜನೆ ವಿಚಾರವಾಗಿ ಆರೋಪ ಮಾಡಿರುವುದು ಕಾಂಗ್ರೆಸ್ ಪಕ್ಷದವರಲ್ಲ, ಈ ಟೆಂಡರ್ ಕರೆಯುವ ಸಂದರ್ಭದಲ್ಲಿ ಅವ್ಯವಹಾರ ನಡೆದಿದೆ ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ. ಆದರೆ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ, ಹೀಗಾಗಿ ತನಿಖೆ ಅಗತ್ಯವಿಲ್ಲ ಎಂದಿದ್ದಾರೆ. ಪರಿಷತ್ ಸದಸ್ಯರೇ ಈ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಜಂಟಿ ಸದನ ಸಮಿತಿ ರಚಿಸಬೇಕೆಂಬುದು ಕಾಂಗ್ರೆಸ್ ಆಗ್ರಹವಾಗಿದೆ ಎಂದು ತಿಳಿಸಿದರು.

ಫೋನ್ ಕದ್ದಾಲಿಕೆ ವಿಚಾರವಾಗಿ ಶಾಸಕ ಅರವಿಂದ್ ಬೆಲ್ಲದ್ ಆರೋಪಿಸಿದ್ದಾರೆ. ಈ ಪ್ರಕರಣವನ್ನು ಬೊಮ್ಮಾಯಿ ಅವರು ನಗರ ಪೊಲೀಸ್ ಆಯುಕ್ತರಿಗೆ ವಹಿಸಿದ್ದಾರೆ. ಈ ಹಿಂದೆ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ನನಗೆ 2019ರ ನವೆಂಬರ್ 28ರಂದು ನೋಟಿಸ್ ಜಾರಿ ಮಾಡಿ 16 ತಾಸುಗಳ ಕಾಲ ವಿಚಾರಣೆ ನಡೆಸಿತ್ತು. ಆಗ ನಾನು ಕೇಂದ್ರ ಅಥವಾ ರಾಜ್ಯ ಸರಕಾರದ ಯಾವುದೇ ಹುದ್ದೆಯಲ್ಲಿರಲಿಲ್ಲ. ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ವಿಚಾರಣೆಗೆ ಒಳಪಡಿಸಿತ್ತು. ಈಗಲೂ ಅದರ ವಿಚಾರಣೆ ನಡೆಯುತ್ತಲೇ ಇದೆ. ಆಗ ಕುಮಾರಸ್ವಾಮಿ ಅವರ ವಿಚಾರಣೆ ನಡೆದಿದೆಯಾದರೆ, ಈಗ ಯಡಿಯೂರಪ್ಪನವರ ವಿಚಾರಣೆ ಯಾಕಿಲ್ಲ? ಈ ವಿಚಾರಣೆಯನ್ನು ಸಿಬಿಐಗೆ ಯಾಕೆ ವಹಿಸಿಲ್ಲ? ಆಗ ಸಿಕ್ಕಸಿಕ್ಕವರ ವಿಚಾರಣೆ ಮಾಡುತ್ತಿದ್ದ ಸಿಬಿಐ, ಈಗ ಯಾಕೆ ಮಾಡುತ್ತಿಲ್ಲ? ಹೀಗಾಗಿ ಈ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಹ್ಯಾರಿಸ್ ಮಾತನಾಡಿ, 2005ರ ಕಾಯ್ದೆ ಅನ್ವಯ ವಿಪತ್ತು ನಿರ್ವಹಣಾ ನಿಧಿಯ ಹಣವನ್ನು ಈ ವಿಪತ್ತು ನಿರ್ವಹಣೆಗಾಗಿ ಬಳಸಿಕೊಳ್ಳಬೇಕು. ಈ ಸಮಯದಲ್ಲಿ ಅದನ್ನು ಬಳಸಿಕೊಳ್ಳದಿದ್ದರೆ ಮತ್ತೆ ಯಾವಾಗ ಬಳಸಿಕೊಳ್ಳಲಾಗುತ್ತದೆ? ಕೇಂದ್ರ ಸರಕಾರ ಸಂಪನ್ಮೂಲದ ಕೊರತೆ ನೆಪ ಹೇಳಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‍ನಲ್ಲಿ ತಿಳಿಸಿದೆ. ಈ ಸರಕಾರಕ್ಕೆ ಸಂಪನ್ಮೂಲ ಕ್ರೋಢೀಕರಿಸುವ ಯೋಗ್ಯತೆ ಇಲ್ಲ ಎಂದಾದರೆ ಇವರಿಗೆ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News