ಆನ್‍ಲೈನ್ ತರಗತಿಗೆ ನೆಟ್‍ವರ್ಕ್ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಸಿಎಂಗೆ ಸುರೇಶ್ ಕುಮಾರ್ ಮನವಿ

Update: 2021-06-21 14:03 GMT

ಬೆಂಗಳೂರು, ಜೂ.21: ಕೋವಿಡ್ ಸಂಬಂಧ ಶಾಲಾ ಕಾಲೇಜು ತರಗತಿಗಳು ಆನ್‍ಲೈನ್ ಮೂಲಕ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಯಾವುದೇ ಪ್ರದೇಶದಲ್ಲಿ ನೆಟ್‍ವರ್ಕ್ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

ಸೋಮವಾರ ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯದ ವಿವಿಧ ಭಾಗಗಳಲ್ಲಿ ಅಂತರ್ಜಾಲ (ನೆಟ್‍ವರ್ಕ್) ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿ ಸಮೂಹ ತೊಂದರೆಗೊಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ನೆಟ್‍ವರ್ಕ್ ದೊರೆಯದೇ ಗ್ರಾಮೀಣ ಪ್ರದೇಶದ ಮಕ್ಕಳು ಬೆಟ್ಟ ಗುಡ್ಡಗಳನ್ನು ಹತ್ತಿ ಕುಳಿತು ಆನ್‍ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಮಳೆಗಾಲವಾದ್ದರಿಂದ ಬೆಟ್ಟದ ಮೇಲೆ ಕುಳಿತು ಪಾಠದಲ್ಲಿ ತೊಡಗಿಸಿಕೊಂಡ ಮಕ್ಕಳನ್ನು ಮಳೆಯಿಂದ ರಕ್ಷಿಸಲು ಪೋಷಕರು ಛತ್ರಿ ಹಿಡಿದು ಮಳೆಯಲ್ಲಿ ನಿಂತುಕೊಂಡ ಫೋಟೋಗಳು ಪತ್ರಿಕೆಗಳಲ್ಲಿ ಮತ್ತು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ನೆಟ್‍ವರ್ಕ್ ಸಮಸ್ಯೆಗೆ ಕೊನೆ ಹಾಡಲು ನೆಟ್‍ವರ್ಕ್ ಆಪರೇಟರ್ ಗಳ ಸಭೆ ನಡೆಸಿ ಪರಿಹಾರ ರೂಪಿಸಬೇಕು ಎಂದ ಅವರು, ಇಂದಿನ ಸಂದರ್ಭವನ್ನು ಗಮನಿಸಿದರೆ ಈ ಕೋವಿಡ್ ಕಾಲಘಟ್ಟದಲ್ಲಿ ಆನ್‍ಲೈನ್ ತರಗತಿಗಳೇ ಸಾಮಾನ್ಯವಾಗಬಹುದಾಗಿದೆ. ಕೋವಿಡ್ ಪೂರ್ವದ ಸಹಜ ಸಾಮಾಜಿಕ ಸ್ಥಿತಿಗತಿಗಳು ಸದ್ಯಕ್ಕೆ ಹಿಂದಿರುಗಲು ಸಾಧ್ಯವಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ಈ ಹೊಸ ಸ್ಥಿತಿಗೆ ಹೊಂದಿಕೊಳ್ಳದೇ ಅನ್ಯ ದಾರಿಯಿಲ್ಲವಾದ್ದರಿಂದ ನಾವು ನೆಟ್‍ವರ್ಕ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲೇಬೇಕಿದೆ. ಇನ್ನು, ಈ ಸಮಸ್ಯೆ ಪರಿಹಾರವಾದರೆ ನಮ್ಮ ವಿದ್ಯಾರ್ಥಿಗಳ ಭವಿಷ್ಯ ಕಾಯುವ ಸರಕಾರದ ಜವಾಬ್ದಾರಿಯ ನಿರ್ವಹಣೆ ಪರಿಣಾಮಕಾರಿ ಆಗಲಿದೆ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News