ರಾಷ್ಟ್ರೀಯ ಶಿಕ್ಷಣ ನೀತಿಗಾಗಿ ಫೋಕಸ್ ಗ್ರೂಪ್ ರಚನೆ: ಶಿಕ್ಷಣ ಸಚಿವ ಸುರೇಶ್ ಕುಮಾರ್

Update: 2021-06-21 15:15 GMT

ಬೆಂಗಳೂರು, ಜೂ.21: ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೊಳಿಸುತ್ತಿರುವ ಹಿನ್ನೆಲೆ ಫೋಕಸ್ ಗ್ರೂಪ್ ರಚನೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯದ ಪ್ರಗತಿ ಪರಾಮರ್ಶನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುತ್ತಿರುವ ಈ ಸಂದರ್ಭದಲ್ಲಿ ಬದಲಾಗುತ್ತಿರುವ ನೀತಿಗೆ ಅನುಗುಣವಾಗಿ ತರಗತಿವಾರು ಬೋಧನೆ ಸಂಬಂಧದಲ್ಲಿ ರೂಪುರೇಷೆ ಸಿದ್ಧಪಡಿಸಲು ಫೋಕಸ್ ಗ್ರೂಪ್‍ಗಳನ್ನು ರಚಿಸಲು ಸೂಚಿಸಲಾಗಿದೆ ಎಂದರು.

ಅಲ್ಲದೆ, ಇದಕ್ಕಾಗಿ ಸೂಕ್ತ ತಾಂತ್ರಿಕ ವೇದಿಕೆಯನ್ನು ರೂಪಿಸಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಡಿಎಸ್‍ಇಆರ್‍ಟಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ಈ ಕುರಿತ ಪ್ರಸ್ತಾವನೆಯನ್ನು ತಮ್ಮ ಅನುಮೋದನೆಗೆ ಮಂಡಿಸಬೇಕೆಂದು ಎಂದು ಸುರೇಶ್ ಕುಮಾರ್ ಸೂಚಿಸಿದರು.

ಇನ್ನು, ನಮ್ಮ ಶಿಕ್ಷಕ ತರಬೇತಿ ಸಂಸ್ಥೆಗಳು ಬಲಿಷ್ಠಗೊಳ್ಳಬೇಕಾಗಿದ್ದು, ಆ ನಿಟ್ಟಿನಲ್ಲಿ ಡಿಎಸ್‍ಇಆರ್‍ಟಿ ಸೇರಿದಂತೆ ಸಂಶೋಧನಾ ಹಾಗೂ ತರಬೇತಿ ಸಂಸ್ಥೆಗಳು ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಹೆಚ್ಚಿನ ಗಮನಹರಿಸಬೇಕು ಎಂದ ಅವರು, ಗುಣಾತ್ಮಕ ಶಿಕ್ಷಣದ ಪರಿಕಲ್ಪನೆ ಸಾಕಾರವಾಗಬೇಕಾದಲ್ಲಿ ತರಬೇತಿ ಪ್ರಕ್ರಿಯೆ ವಸ್ತುನಿಷ್ಠವಾಗಬೇಕಿದೆ. ತರಬೇತಿ ಮೌಲ್ಯಮಾಪನ ವ್ಯವಸ್ಥೆ ಬಲಗೊಳ್ಳಬೇಕಿದೆ ಎಂದು ವಿವರಿಸಿದರು.

ಶಿಕ್ಷಣ ಗುಣಮಟ್ಟ ಸುಧಾರಣೆಯ ಹಿನ್ನೆಲೆಯಲ್ಲಿ ಈ ತರಬೇತಿಯ ಫಲಿತಾಂಶ ಶಾಲಾ ತರಗತಿಯಲ್ಲಿ ಪ್ರತಿಫಲನಗೊಂಡು ನಮ್ಮ ಮಕ್ಕಳು ಅದರ ಪ್ರಯೋಜನವನ್ನು ಪಡೆಯುವಂತಾಗಬೇಕು. ಈ ತರಬೇತಿಯ ಅನುಪಾಲನಾ ವ್ಯವಸ್ಥೆ ಮೇಲಿಂದ ಮೇಲೆ ನಡೆಯುವಂತಹ ವ್ಯವಸ್ಥೆ ರೂಪುಗೊಳ್ಳಲು ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.

ಜು.1ರಿಂದ ಪಾಠ: ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವ ಇದೇ ಜು.1ರಿಂದ ದೂರದರ್ಶನದ ಚಂದನಾ ವಾಹಿನಿ ಮೂಲಕ ಒಂದರಿಂದ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಪ್ರತಿದಿನ ವಿಡಿಯೋ ಪಾಠಗಳನ್ನು ಪ್ರಸಾರ ಮಾಡಲಾಗುವುದು. ಈ ಸಂದರ್ಭದಲ್ಲಿ ಕನ್ನಡ, ಇಂಗ್ಲಿಷ್ ಮತ್ತು ಉರ್ದು ಮಾಧ್ಯಮದ ಪಾಠಗಳು ಪ್ರಸಾರವಾಗಲಿವೆ. ಈ ತರಗತಿಗಳು ಬೆಳಗಿನ 8 ಗಂಟೆಯಿಂದ ಸಂಜೆ 4ರವರೆಗೆ ನಡೆಯಲಿದ್ದು, ತರಗತಿವಾರು ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಮರಾಠಿ ಮಾಧ್ಯಮದ ಪಾಠಗಳನ್ನು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಅದೇ ರೀತಿ, 2021-22ನೆ ಸಾಲಿನಲ್ಲಿ ಭೌತಿಕ ತರಬೇತಿಗಳು ಪ್ರಾರಂಭವಾದಲ್ಲಿ ಶಿಕ್ಷಕರು ನಿರ್ವಹಿಸಬೇಕಾದ ಬೋಧನೆ ಹಾಗೂ ಮೌಲ್ಯಮಾಪನ ಕ್ರಮದ ಖಚಿತವಾದ ರೂಪುರೇಷೆಗಳನ್ನು ನಾವು ಹೊಂದಿರಬೇಕೆಂದು ಅವರು ಸಲಹೆ ನೀಡಿದರು.

ಅಧ್ಯಯನ: ಕೊರೋನ ಸಾಂಕ್ರಾಮಿಕವು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಿದ ಕಾರಣ ಈ ಸಂದರ್ಭದಲ್ಲಿ ಮಕ್ಕಳು ತೊಡಗಿಸಿಕೊಂಡ ಚಟುವಟಿಕೆಗಳು ಹಾಗೂ ಅವರು ಪಡೆದ ಕೌಶಲ್ಯಗಳನ್ನು ಅರಿಯಲು ಡಿಎಸ್‍ಇಆರ್‍ಟಿ ಕೈಗೊಂಡ ಸಮೀಕ್ಷೆಯ ಅಧ್ಯಯನ ವರದಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ಅವರು, ಶೇ.30 ರಷ್ಟು ಮಕ್ಕಳು ಶೈಕ್ಷಣಿಕ ಚಟುವಟಿಕೆಯಿಂದ ವಂಚಿತರಾಗಿರುವುದು ಕಂಡುಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.

ಈ ಅಧ್ಯಯನ ವರದಿಯ ಬೆಳಕಿನಲ್ಲಿ ನಾವು ಈ ವರ್ಷ ಮಕ್ಕಳೂ ಶಿಕ್ಷಣದಿಂದ ವಂಚಿತರಾಗದಂತೆ ಹೆಚ್ಚಿನ ರೀತಿಯ ಗಮನಹರಿಸುವ ಸವಾಲು ನಮ್ಮ ಮುಂದಿದೆ. ಅದಕ್ಕಾಗಿ ಶಿಕ್ಷಕರು ತಮ್ಮ ಶಾಲೆಯ ಮಕ್ಕಳು ಕಲಿಕಾ ನಿರಂತರತೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಶ್ರಮಿಸಬೇಕಿದೆ. ನಮ್ಮ ಯಾವುದೇ ನೀತಿಗಳು ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗದೇ ಪ್ರತಿಯೊಬ್ಬರೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಶ್ರಮಿಸಬೇಕಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಸೇತುಬಂಧ ಶಿಕ್ಷಣ

ಜು.1ರಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕಲಿಕಾಂಶಗಳನ್ನು ಗುರುತಿಸಲಾಗಿದ್ದು, 30 ದಿನಗಳ ಸೇತುಬಂಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಪಟ್ಟಿ ಮಾಡಿದಂತಹ ಕಲಿಕಾಂಶಗಳಿಗೆ ಪೂರಕವಾಗಿ ಚಟುವಟಿಕಯಾಧಾರಿತ ಬೋಧನಾ ಪ್ರಕ್ರಿಯೆಯನ್ನು ನಿರ್ವಹಿಸಲಾಗುತ್ತದೆ. ಇದಕ್ಕಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News