2 ತಿಂಗಳಲ್ಲಿ ನ್ಯಾಯ ಸಿಗದಿದ್ದರೆ ಕುಟುಂಬಸ್ಥರಿಂದ ದಯಾಮರಣಕ್ಕೆ ಅರ್ಜಿ: ಅನ್ವರ್ ಸಹೋದರ ಮುಹಮ್ಮದ್ ಕಬೀರ್

Update: 2021-06-21 16:28 GMT
ಮುಹಮ್ಮದ್ ಅನ್ವರ್

ಚಿಕ್ಕಮಗಳೂರು, ಜೂ.21: ತನ್ನ ಸಹೋದರ ಮುಹಮ್ಮದ್ ಅನ್ವರ್ ಅವರ ಹತ್ಯೆಯಾಗಿ ಜೂ.21ಕ್ಕೆ 3 ವರ್ಷ ಕಳೆದಿದ್ದರೂ ಇದುವರೆಗೂ ಪೊಲೀಸರು ಆರೋಪಿಗಳ ಬಗ್ಗೆ ಸಣ್ಣ ಸುಳಿವನ್ನೂ ಪತ್ತೆ ಮಾಡಿಲ್ಲ. ಅನ್ವರ್ ಅವರನ್ನು ಕಳೆದುಕೊಂಡಿರುವ ನನ್ನ ಕುಟುಂಬಕ್ಕೆ ಪೊಲೀಸರಿಂದಾಗಲೀ, ಸರಕಾರದಿಂದಾಗಲೀ ನ್ಯಾಯ ಸಿಗದಂತಾಗಿದೆ. ಮುಂದಿನ 2 ತಿಂಗಳಲ್ಲಿ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಕುಟುಂಬದ ಎಲ್ಲ ಸದಸ್ಯರು ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸುವುದಾಗಿ ಹತ್ಯೆಗೀಡಾಗಿರುವ ಮುಹಮ್ಮದ್ ಅನ್ವರ್ ಸಹೋದರ ಮುಹಮ್ಮದ್ ಕಬೀರ್ ಅಳಲು ತೋಡಿಕೊಂಡಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಣ್ಣನ ಕೊಲೆಯಾಗಿ ಜೂ.21ಕ್ಕೆ ಮೂರು ವರ್ಷ ಆಗಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಇದುವರೆಗೂ ಹತ್ಯೆ ಆರೋಪಿಗಳ ಬಗ್ಗೆ ಸಣ್ಣದೊಂದು ಸುಳಿವನ್ನೂ ಪತ್ತೆ ಹಚ್ಚಿಲ್ಲ. ತನಿಖೆ ಯಾವ ಹಂತದಲ್ಲಿದೆ ಎಂಬುದನ್ನೂ ತಿಳಿಸುತ್ತಿಲ್ಲ. 2018, ಜೂ.21ರಂದು ರಾತ್ರಿ 9-10ರ ಸಮಯದಲ್ಲಿ ಮುಹಮ್ಮದ್ ಅನ್ವರ್ ಅವರನ್ನು ದುಷ್ಕರ್ಮಿಗಳು ಗೌರಿಕಾಲುವೆ ಬಳಿ ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು. ಈ ವೇಳೆ ಅಣ್ಣಾಮಲೈ ಎಸ್ಪಿ ಆಗಿದ್ದರು. ಹತ್ಯೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಅವರು 40 ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದರು. ತನಿಖೆಯ ಹಂತದಲ್ಲೇ ಅವರನ್ನು ಮಾನಸ ಸರೋವರಕ್ಕೆ ಕರ್ತವ್ಯಕ್ಕೆ ನಿಯೋಜಿಸಿದ್ದರಿಂದ ತನಿಖೆಯನ್ನು ಅವರು ಪೂರ್ಣಗೊಳಿಸಲಿಲ್ಲ ಎಂದರು.

ನಂತರ ಎಸ್ಪಿ ಆಗಿ ಬಂದ ಹರೀಶ್ ಪಾಂಡೆ ಅವರು ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿದ ತಂಡದಲ್ಲಿದ್ದವರು. 2 ತಿಂಗಳಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದ ಎಸ್ಪಿ ಹರೀಶ್ ಪಾಂಡೆ ಅವರಿಂದಲೂ ಅನ್ವರ್ ಹತ್ಯೆ ಪ್ರಕರಣ ಬೇಧಿಸಲಾಗಲಿಲ್ಲ. ಬಳಿಕ ಹರೀಶ್ ಪಾಂಡೆ ಅವರನ್ನೂ ವರ್ಗಾವಣೆ ಮಾಡಲಾಯಿತು ಎಂದ ಅವರು, ಈ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿ ತನಿಖೆಗೆ ಒಪ್ಪಿಸುವುದಕ್ಕೂ ಮುನ್ನ ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಸುಮಾರು 7 ಮಂದಿ ತನಿಖಾಧಿಕಾರಿಗಳು ಬದಲಾವಣೆ ಆಗಿದ್ದಾರೆ. ಇದರಿಂದಲೇ ತನಿಖೆ ಹಾದಿ ತಪ್ಪುವಂತಾಯಿತು ಎಂದು ಕಬೀರ್ ಆರೋಪಿಸಿದರು.

ಪೊಲೀಸರ ವೈಫಲ್ಯದ ಬಳಿಕ ಸರಕಾರ ಅನ್ವರ್ ಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ಕಳೆದ ಒಂದೂವರೆ ವರ್ಷದಿಂದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ತಂಡದವರಿಂದಲೂ ಈ ಪ್ರಕರಣವನ್ನು ಬೇಧಿಸಲು ಸಾಧ್ಯವಾಗಿಲ್ಲ. ಪ್ರಕರಣದ ತನಿಖೆ ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ ಎಂದ ಅವರು, ಅನ್ವರ್ ಕೊಲೆ ಸಂದರ್ಭದಲ್ಲಿ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಸಮ್ಮಿಶ್ರ ಸರಕಾರದಿಂದಲೂ ನನ್ನ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಹಾಲಿ ಬಿಜೆಪಿ ಸರಕಾರದಿಂದಲೂ ನಮಗೆ ನ್ಯಾಯ ಸಿಗುತ್ತಿಲ್ಲ. ಸಿಎಂ ಯಡಿಯೂರಪ್ಪ ಅವರ ಬಳಿ ಈ ಘಟನೆ ಸಂಬಂಧ ಎಸ್‍ಐಟಿ ತನಿಖೆಗೆ ಮನವಿ ಮಾಡಿದ್ದೆವು. ಸಿಎಂ ತನಿಖೆಯನ್ನು ಎಸ್‍ಐಟಿಗೆ ವಹಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಏನಾಯಿತೋ ಗೊತ್ತಿಲ್ಲ. ತನಿಖೆಯನ್ನು ಸಿಐಡಿಗೆ ನೀಡಿದ್ದು, ಸಿಐಡಿಯವರೂ ಕೈಚೆಲ್ಲಿ ಕುಳಿತಿದ್ದಾರೆ ಎಂದು ಕಬೀರ್ ಆರೋಪಿಸಿದರು.

ಅನ್ವರ್ ಹತ್ಯೆ ಪ್ರಕರಣದ ತನಿಖೆಯ ಎಲ್ಲ ಹಂತದಲ್ಲೂ ದಿಕ್ಕು ತಪ್ಪಿಸಲಾಗುತ್ತಿದೆ. ಪೊಲೀಸರು ಬೆಂಗಳೂರಿನಂತಹ ಮಹಾನಗರದಲ್ಲಿ ನಡೆಯುವ ಭಾರೀ ಜಟಿಲ ಪ್ರಕರಣಗಳನ್ನು ಬೇದಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆ ಆರೋಪಿಗಳನ್ನೂ ಪತ್ತೆ ಹಚ್ಚುವಲ್ಲಿ ರಾಜ್ಯದ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಹತ್ಯೆ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳಿದ್ದರೂ ಚಿಕ್ಕಮಗಳೂರಿನಂತಹ ಸಣ್ಣ ನಗರದಲ್ಲಿ ನಡೆದ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಹಾಗೂ ಸಿಐಡಿಗೆ ಇನ್ನೂ ಸಾಧ್ಯವಾಗದಿರುವ ಹಿನ್ನೆಲೆ ಏನೆಂದು ತಿಳಿಯುತ್ತಿಲ್ಲ ಎಂದ ಅವರು, ಎಸ್ಪಿ ಅಣ್ಣಾಮಲೈ ತನಿಖೆ ನಡೆಸುತ್ತಿದ್ದ ವೇಳೆ ಪ್ರಕರಣದಲ್ಲಿ ದೊಡ್ಡ ವ್ಯಕ್ತಿ ಕೈವಾಡವಿದೆ ಎಂದು ನನಗೆ ತಿಳಿಸಿದ್ದರು. ಎಸ್ಪಿ ಹರೀಶ್ ಪಾಂಡೆ ಅವರು ಹತ್ಯೆಯಲ್ಲಿ ಭಾರೀ ಡೀಲ್ ನಡೆದಿದೆ ಎಂದಿದ್ದರು. ಇಷ್ಟು ಮಾಹಿತಿ ಸಂಗ್ರಹಿಸಿದ್ದ ಪೊಲೀಸರಿಗೆ ಆರೋಪಿಗಳನ್ನು ಇನ್ನೂ ಬಂಧಿಸಲು ಸಾಧ್ಯವಾಗದಿರಲು ಇರುವ ಕಾರಣ ಏನು? ಎಂದು ಕಬೀರ್ ಪ್ರಶ್ನಿಸಿದರು.

ಅನ್ವರ್ ಅವರನ್ನು ಕಳೆದುಕೊಂಡಿರುವ ನನ್ನ ಕುಟುಂಬ ದಿಕ್ಕು ಕಾಣದಂತಾಗಿದೆ. ಕೊಲೆ ಏಕೆ ಮಾಡಲಾಯಿತು, ಯಾರು ಮಾಡಿದರು ಎಂಬುದು ತಿಳಿಯದೇ ಅದೇ ಚಿಂತೆಯಲ್ಲಿ ನನ್ನ ತಂದೆ ನಿಧನರಾಗಿದ್ದಾರೆ. ತಾಯಿ ಇದೇ ಚಿಂತೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅನ್ವರ್ ಪತ್ನಿ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ, ಮಕ್ಕಳು ಅನಾಥರಾಗಿದ್ದಾರೆ. ನನ್ನನ್ನೂ ಹತ್ಯೆ ಮಾಡುತ್ತಾರೇನೋ ಎಂಬ ಭೀತಿಯಿಂದ ಮನೆಯಿಂದ ಹೊರಬರಲೂ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡ ಕಬೀರ್, ಅನ್ವರ್ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರಿಂದ ಚಿಕ್ಕಮಗಳೂರಿನಲ್ಲಿ ನಮ್ಮ ಸಮುದಾಯದವರೂ ನಮ್ಮ ಬೆಂಬಲಕ್ಕೆ ಬರುತ್ತಿಲ್ಲ. ಬಿಜೆಪಿ ಪಕ್ಷದವರೂ ನನ್ನ ಕುಟುಂಬದ ನೆರವಿಗೆ ಬರುತ್ತಿಲ್ಲ. ಪ್ರಕರಣದ ತನಿಖೆಯನ್ನು ಉದ್ದೇಶಪೂರ್ವಕವಾಗಿ ದಿಕ್ಕು ತಪ್ಪಿಸುವ ಹುನ್ನಾರ ನಡೆಯುತ್ತಿರುವ ಶಂಕೆ ನನ್ನ ಕುಟುಂಬಕ್ಕೆ ವ್ಯಕ್ತವಾಗುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಹತ್ಯೆ ಆರೋಪಿಗಳು ಮತ್ತು ಹತ್ಯೆಗೆ ಸಂಚು ಮಾಡಿದವರನ್ನು ಪತ್ತೆ ಹಚ್ಚಿ ಶಿಕ್ಷೆ ಗುರಿಪಡಿಸಬೇಕು. ತಪ್ಪಿದಲ್ಲಿ ನನ್ನ ಇಡೀ ಕುಟುಂಬದವರು ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅನ್ವರ್ ಹಿರಿಯ ಸಹೋದರ ಆರೂಲ್ ಬಶೀರ್, ಅನ್ವರ್ ಮಗ ಕುಲಾಲ್ ಉಪಸ್ಥಿತರಿದ್ದರು.

ಅನ್ವರ್ ಹತ್ಯೆ ಪ್ರಕರಣ ಸಂಬಂಧ ವ್ಯಕ್ತಿಯೋರ್ವನ ಬ್ರೈನ್ ಮ್ಯಾಪಿಂಗ್ ಮಾಡಿಸುವುದಾಗಿ ಎಸ್ಪಿಯಾಗಿದ್ದ ಹರೀಶ್ ಪಾಂಡೆ ತಿಳಿಸಿದ್ದರು. ಈ ಸಂಬಂಧ ಎಲ್ಲ ಸಿದ್ಧತೆಗಳನ್ನು ಮಾಡುತ್ತಿರುವುದಾಗಿಯೂ ಅವರು ತಿಳಿಸಿದ್ದರು. ಆದರೆ ಅವರ ವರ್ಗಾವಣೆ ಬಳಿಕ ಯಾರನ್ನೂ ಬ್ರೈನ್ ಮ್ಯಾಪಿಂಗ್ ಮಾಡಿಸಿಲ್ಲ. ಯಾರನ್ನು ಬ್ರೈನ್ ಮ್ಯಾಪಿಂಗ್‍ಗೆ ಒಳಪಡಿಸುತ್ತಿರುವುದಾಗಿಯೂ ಅವರು ತಿಳಿಸಿರಲಿಲ್ಲ. ಅನ್ವರ್ ಹತ್ಯೆ ಪ್ರಕರಣದಲ್ಲಿ ಯಾವುದೋ ದೊಡ್ಡ ಶಕ್ತಿ, ಪ್ರಭಾವಿಗಳಿರುವ ಕಾರಣಕ್ಕೆ ಪ್ರಕರಣದ ತನಿಖೆಯನ್ನು ದಿಕ್ಕು ತಪ್ಪಿಸಲಾಗುತ್ತಿದೆ.

- ಮುಹಮ್ಮದ್ ಕಬೀರ್, ಹತ್ಯೆಯಾದ ಅನ್ವರ್ ಸಹೋದರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News