ಲಾಕ್‍ಡೌನ್ ಸಡಿಲಿಕೆ: ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳ ಜನರು ನಿರಾಳ

Update: 2021-06-21 16:39 GMT

ಬೆಂಗಳೂರು, ಜೂ.21: ಕೋವಿಡ್ ಸಂಬಂಧ ಜಾರಿಗೊಳಿಸಿದ್ದ ಲಾಕ್‍ಡೌನ್ ನಿಯಮಗಳನ್ನು ಸಡಿಲಿಕೆ ಮಾಡಿ ರಾಜ್ಯ ಸರಕಾರ ಹೊಸ ಆದೇಶ ಹೊರಡಿಸಿದ ಪರಿಣಾಮ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳ ಜನರು ನಿರಾಳವಾಗಿದ್ದಾರೆ.

ಎರಡನೇ ಹಂತದಲ್ಲಿ ಅನ್‍ಲಾಕ್ ಹಿನ್ನೆಲೆ ಸೋಮವಾರ ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಎರಡು ತಿಂಗಳ ಬಳಿಕ ಜನಜೀವನ ಸಹಜಸ್ಥಿತಿಗೆ ಮರಳಿದೆ. ಹಲವು ಭಾಗಗಳಲ್ಲಿ ಬಿಎಂಟಿಸಿ, ಕೆಎಸ್ಸಾರ್ಟಿಸಿ ಸೇರಿದಂತೆ ನಾಲ್ಕು ವಿಭಾಗದ ಸರಕಾರಿ ಬಸ್‍ಗಳ ಸಂಚಾರ ಆರಂಭಗೊಂಡಿದ್ದು, ನಗರ ಸಾರಿಗೆ ಸೇರಿದಂತೆ ಜಿಲ್ಲೆ, ಹೊರ ಜಿಲ್ಲೆಗಳಿಗೆ ಬಸ್‍ಗಳು ಸಂಚಾರ ಪುನರಾರಂಭಗೊಂಡಿತು.

ಇನ್ನು, ಅಂಗಡಿಗಳು, ಹೋಟೆಲ್, ರೆಸ್ಟೋರೆಂಟ್‍ಗಳು ಬಾಗಿಲು ತೆರೆದು ವ್ಯಾಪಾರ ವಹಿವಾಟು ಆರಂಭಿಸಿದವು. ಆದರೆ, ಕೆಲ ಜಿಲ್ಲೆಗಳ ಹೆಸರು ರವಿವಾರದ ಅನ್‍ಲಾಕ್ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲದೇ ಇದ್ದ ಕಾರಣ ಗೊಂದಲಕ್ಕೊಳಗಾಗಿದ್ದ ಚಿನ್ನಾಭರಣ, ಬಟ್ಟೆ ಅಂಗಡಿಗಳು, ಶೋರೂಂಗಳು, ಮಾಲ್‍ಗಳು ಬಾಗಿಲು ಬಂದ್ ಮಾಡಿದ್ದ ದೃಶ್ಯವೂ ಕಂಡಿತು.

ಉಳಿದಂತೆ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಜನಜಂಗುಳಿ ಕಂಡುಬಂದಿತು. ಪ್ರಮುಖ ವೃತ್ತಗಳಲ್ಲಿ ಸಂಚಾರ ದಟ್ಟಣೆ ಅಧಿಕವಾಗಿತ್ತು. ಬೀದಿ ಬದಿ ವ್ಯಾಪಾರಸ್ಥರ ಸಂಖ್ಯೆಯೂ ಮೊದಲಿನಂತೆ ಇತ್ತು. ಬೆಂಗಳೂರಿನಲ್ಲಿ ಟ್ಯಾಕ್ಸಿ, ಆಟೊ ಸಂಚಾರವೂ ಹೆಚ್ಚಿನ ಸಂಖ್ಯೆಯಲ್ಲಿತ್ತು.

ಕೋವಿಡ್ ಸೋಂಕಿನ ಪ್ರಮಾಣ ಶೇ.5ಕ್ಕಿಂತ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದ್ದು, ಸೋಮವಾರದಿಂದಲೇ ಅನ್ವಯವಾಗುವಂತೆ ಹಗಲಿನ ವೇಳೆ ಎಲ್ಲ ರೀತಿಯ ವ್ಯಾಪಾರ, ವಹಿವಾಟಿಗೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ, ಜು.5ರ ವರೆಗೆ ಸಂಜೆ 5ರಿಂದ ಮರುದಿನ ಬೆಳಗ್ಗೆ 6ರ ವರೆಗೆ ಅಂದರೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ.

ಮೆಟ್ರೋ ಆರಂಭ

ಕಳೆದ ಎರಡು ತಿಂಗಳು ಸ್ಥಗಿತಗೊಂಡಿದ್ದ ಮೆಟ್ರೊ ರೈಲುಗಳ ಸಂಚಾರ ಸೋಮವಾರ ಬೆಳಗ್ಗೆ 7ರಿಂದಲೇ ಆರಂಭವಾಯಿತು. ಹಸಿರು ಮತ್ತು ನೇರಳೆ ಮಾರ್ಗಗಳೆರಡಲ್ಲೂ ನಿರೀಕ್ಷಿಸಿದಷ್ಟು ಪ್ರಯಾಣಿಕರು ಇರಲಿಲ್ಲ. ಮೆಜೆಸ್ಟಿಕ್ ನಿಲ್ದಾಣ ಹೊರತು ಪಡಿಸಿ, ಉಳಿದ ನಿಲ್ದಾಣಗಳಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರಿದ್ದರು.

ಇನ್ನು, ಬಿಎಂಟಿಸಿ ಬಸ್‍ಗಳೂ ಸೋಮವಾರದಿಂದ ರಸ್ತೆಗಿಳಿದವು. ಒಟ್ಟು 3154 ಬಸ್ಸುಗಳು ಸಂಚಾರ ಮಾಡಿದ್ದು, ಆಸನ ಸಾಮರ್ಥ್ಯದಷ್ಟೇ ಪ್ರಯಾಣಿಕರು ಬಸ್ ಏರಲು ಅವಕಾಶ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News