ಬಿಎಸ್ಸಿ ಕೃಷಿ ಸೀಟುಗಳ ಪ್ರಮಾಣ ಶೇ.50ಕ್ಕೆ ಹೆಚ್ಚಿಸಲು ಸಚಿವ ಸಂಪುಟ ಒಪ್ಪಿಗೆ

Update: 2021-06-21 16:50 GMT

ಬೆಂಗಳೂರು, ಜೂ. 21: `ಡಿಪ್ಲೊಮಾ ಇನ್ ಅಗ್ರಿಕಲ್ಚರ್ ಹಾಗೂ ಬಿಎಸ್ಸಿ ಕೃಷಿಯಲ್ಲಿ ರೈತರ ಮಕ್ಕಳಿಗೆ ಈ ಮೊದಲು ನೀಡಲಾಗುತ್ತಿದ್ದ ಮೀಸಲಾತಿ ಪ್ರಮಾಣ ಶೇ.40ರಿಂದ 50ಕ್ಕೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವ ತೀರ್ಮಾನ ಮಾಡಲಾಗಿದೆ

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, `ಬೆಳಗಾವಿ ರಾಣಿ ಚೆನ್ನಮ್ಮ ವಿವಿಗೆ ಇಲ್ಲಿನ ಹಿರೇಬಾಗೇವಾಡಿಯಲ್ಲಿ 126 ಎಕರೆ ಜಾಗ ಆಡಳಿತ ಕಟ್ಟಡ, ಗ್ರಂಥಾಲಯ ನಿರ್ಮಾಣಕ್ಕೆ 110 ಕೋಟಿ ರೂ. ಹಣ ನೀಡಲು ಸಚಿವ ಸಂಪುಟ ಆಡಳಿತಾತ್ಮಕ ಒಪ್ಪಿಗೆ ನೀಡಿದೆ' ಎಂದು ಹೇಳಿದರು.

2021-22ನೆ ಸಾಲಿಗೆ ಶಾಲಾ ಮಕ್ಕಳಿಗೆ ಸಮವಸ್ತ್ರ ಖರೀದಿಗೆ 83 ಕೋಟಿ ರೂ.ನೀಡಲು ಒಪ್ಪಿಗೆ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಆಸ್ಪತ್ರೆ ಮೇಲ್ದರ್ಜೆಗೇರಿಸಲು 32 ಕೋಟಿ ರೂ.ಗೆ ಅನುಮೋದನೆ. ಅಲ್ಲದೆ, ಗೃಹ ಇಲಾಖೆಯಿಂದ ಹೊಸದಾಗಿ 100 ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, 200 ಕೋಟಿ ರೂ. ಒದಗಿಸಲಾಗಿದೆ. 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ನಿರ್ಧಾರ ಮಾಡಲಾಗಿದೆ' ಎಂದು ಅವರು ತಿಳಿಸಿದರು.

ಸಾದಿಲ್ವಾರು ನಿಧಿಯನ್ನು 500 ಕೋಟಿ ರೂ.ಗಳಿಂದ 2,500 ಕೋಟಿ ರೂ. ಹೆಚ್ಚಳಕ್ಕೆ ತೀರ್ಮಾನ ಮಾಡಲಾಗಿದೆ. ಬೀದರ್ ಜಿಲ್ಲೆಯ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕೇಂದ್ರಿಕೃತ ಗ್ರಂಥಾಲಯ ಹಾಗೂ ಪರೀಕ್ಷಾ ಕೊಠಡಿಗಳ ನಿರ್ಮಾಣಕ್ಕೆ 10.77 ಕೋಟಿ ರೂ.ಪರಿಷ್ಕೃತ ಅಂದಾಜು ಮೊತ್ತಕ್ಕೆ ಒಪ್ಪಿಗೆ ನೀಡಲಾಗಿದೆ. ಹಾಸನ ವಿಮಾನ ನಿಲ್ದಾಣಕ್ಕೆ ಒಟ್ಟು 193.65 ಕೋಟಿ ರೂ. ನೀಡಲು ಅನುಮೋದನೆ ನೀಡಲಾಗಿದೆ' ಎಂದರು.

ಭಟ್ಕಳ ಹಾಗೂ ಚಳ್ಳಕೆರೆ ಪಟ್ಟಣಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಪರಿಷ್ಕೃತ ಅಂದಾಜು ಮೊತ್ತಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಹಾಸನ ಜಿಲ್ಲೆಯ ಗಂಡಸಿ ಮತು ಬಾಣಾವರ 307.19 ಕೋಟಿ ರೂ., ಮೈಸೂರಿನ ಮೂಡಾದಲ್ಲಿ 107 ಲೇಔಟ್‍ನಲ್ಲಿ ಅವರದೇ ಆದ ಹಣದಲ್ಲಿ ಅಭಿವೃದ್ಧಿಗೆ ಸೂಚನೆ ನೀಡಿದ್ದು, ಆ ಪ್ರದೇಶಗಳಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ 193.33 ಕೋಟಿ ರೂ. ಹಣ ಒದಗಿಸಲು ಸಮ್ಮತಿಸಲಾಗಿದೆ' ಎಂದು ಅವರು ತಿಳಿಸಿದರು.

ಜಲ ನೀತಿಗೆ ಸಂಪುಟ ಉಪ ಸಮಿತಿ: `ರಾಜ್ಯದಲ್ಲಿರುವ ನೀರಿನ ಬಳಕೆ ಕುರಿತು, ನೀರು ನಿರ್ವಹಣೆ, ಕೃಷಿ, ಕೈಗಾರಿಕೆ, ಕುಡಿಯುವ ನೀರಿಗೆ ಆದ್ಯತೆ ನೀಡಬೇಕೆನ್ನುವ ದೃಷ್ಟಿಯಿಂದ ಜಲನೀತಿ ರೂಪಿಸುವ ಸಂಬಂಧ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲು ನಿರ್ಧರಿಸಿದೆ. ಅಲ್ಲದೆ, ರಾಜ್ಯದಲ್ಲಿ ಜಲಾಶಯಗಳ ದುರಸ್ತಿಗೆ 1,500 ಕೋಟಿ ರೂ. ಯೋಜನೆಗೆ ಒಪ್ಪಿಗೆ ನೀಡಿದ್ದು, ಆ ಪೈಕಿ ವಿಶ್ವಬ್ಯಾಂಕ್ 1,050 ಕೋಟಿ ರೂ.ನೆರವು ನೀಡಲಿದೆ' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ರೇಣುಕಾಚಾರ್ಯ ಕೊಡುಗೆ: `ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಕ್ಷೇತ್ರದಲ್ಲಿ ತುಂಗಭದ್ರಾ ಜಲಾಶಯದಿಂದ ಗೋವಿನಕೋಯಿ, ಹನುಮಸಾಗರ ಏತ ನೀರಾವರಿ ಯೋಜನೆಯಡಿ 415 ಕೋಟಿ ರೂ.ವೆಚ್ಚದಲ್ಲಿ 94 ಕೆರೆ ತುಂಬಿಸುವ ಯೋಜನೆ ಹಾಗೂ ಹೊನ್ನಾಳಿಯ ಸಾಸಿವೆಹಳ್ಳಿ ಏತ ನೀರಾವರಿಗೆ ಹೆಚ್ಚುವರಿ 167 ಕೋಟಿ ರೂ.ಅನುಮೋದನೆ ನೀಡಲಾಗಿದೆ. ಆ ಮೂಲಕ 'ನಾಯಕತ್ವ ಬದಲಾವಣೆ' ವಿಚಾರದಲ್ಲಿ ಸಿಎಂ ಪರವಾಗಿ ನಿಂತಿದ್ದ ರೇಣುಕಾಚಾರ್ಯರಿಗೆ ಸಿಎಂ ಯಡಿಯೂರಪ್ಪ ಕೊಡುಗೆ ನೀಡಿದ್ದಾರೆ ಎಂದೇ ಹೇಳಲಾಗುತ್ತಿದೆ.

ಕೋವಿಡ್ ಮೂರನೆ ಅಲೆ ಮುನ್ಸೂಚನೆ ಸಂಬಂಧ ಡಾ.ದೇವಿಶೆಟ್ಟಿ ನೇತೃತ್ವದ ತಜ್ಞರ ಸಮಿತಿ ವರದಿ ನೀಡಿದ ಬಳಿಕ ಸೋಂಕಿನ ನಿಯಂತ್ರಣಕ್ಕೆ ಸರಕಾರ ಅಗತ್ಯ ಸಿದ್ದತೆಗೆ ಕ್ರಮ ವಹಿಸಲಿದೆ. ಮಾಜಿ ಸಚಿವ ಹಾಗೂ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಸಂಬಂಧಿಸಿದಂತೆ ನನಗೆ ಗೊತ್ತಿಲ್ಲ. ಸಂಪುಟ ಸಭೆಯಲ್ಲಿಯೂ ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಅಲ್ಲದೆ, ವಿಧಾನ ಮಂಡಲ ಅಧಿವೇಶನ ಕರೆಯುವ ಬಗ್ಗೆಯೂ ಚರ್ಚಿಸಿಲ್ಲ'

-ಬಸವರಾಜ ಬೊಮ್ಮಾಯಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News