ವಲಸೆ ಕಾರ್ಮಿಕರ ಮಕ್ಕಳಿಗೆ ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ

Update: 2021-06-21 17:28 GMT

ಬೆಂಗಳೂರು, ಜೂ.21: ರಾಜ್ಯದ ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಯಲ್ಲಿ ಎಸೆಸೆಲ್ಸಿ ಓದುತ್ತಿರುವ ವಲಸೆ ಕಾರ್ಮಿಕ ಮಕ್ಕಳನ್ನು ಸಂಪರ್ಕಿಸಿ ಅವರು ಮೂಲ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಬದಲಾಗಿ ತಾವು ವಾಸಿಸುವ ಜಿಲ್ಲೆ, ತಾಲೂಕಿನ ಯಾವ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಇಚ್ಛಿಸಿದ್ದರೆ ಅವರ ಮಾಹಿತಿ ಪಡೆದು ಶಾಲಾ ಲಾಗಿನ್‍ನಲ್ಲಿ ನಮೂದಿಸಬೇಕೆಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೂಚಿಸಿದೆ.

ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಯಲ್ಲಿನ ವಲಸೆ ಕಾರ್ಮಿಕರ ಮಕ್ಕಳು, ವಸತಿ ಶಾಲೆಗಳ ಹಾಗೂ ಹಾಸ್ಟೆಲ್‍ಗಳ ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ವಿವರ, ಅವರು ಪರೀಕ್ಷೆ ಬರೆಯುವ ಪರೀಕ್ಷಾ ಕೇಂದ್ರಗಳನ್ನು ಪರೀಕ್ಷಾ ಮಂಡಳಿಯ ಜಾಲತಾಣ https://sslc.karnataka.gov.in/ನ ಶಾಲಾ ಲಾಗಿನ್‍ನಲ್ಲಿ ದಾಖಲಿಸಬೇಕು.

ಈಗಾಗಲೇ ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಂಡಿರುವ ತಂತ್ರಾಂಶದ ಯೂಸರ್ ನೇಮ್ ಹಾಗೂ ಪಾಸ್‍ವಾರ್ಡ್‍ನ್ನು ಬಳಸಿ ಕೇಂದ್ರ ಬದಲಾವಣೆಯ ಮಾಹಿತಿಯನ್ನು ಕೀಲೀಕರಿಸಲು ಬಳಸುವುದು. ತಂತ್ರಾಂಶದಲ್ಲಿ ವಲಸೆ ಕಾರ್ಮಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಇಚ್ಛಿಸುವ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ವಲಸೆ ಕಾರ್ಮಿಕರ ಎಸೆಸೆಲ್ಸಿ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಳ್ಳುವ ಪರೀಕ್ಷಾ ಕೇಂದ್ರದಲ್ಲಿ ಆಸನಗಳು ಲಭ್ಯವಿಲ್ಲದಿದ್ದಲ್ಲಿ ಸಮೀಪದ ಬೇರೆ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಒಮ್ಮೆ ಹೊಸ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡ ನಂತರ ಮತ್ತೊಮ್ಮೆ ಬದಲಾವಣೆಗೆ ಅವಕಾಶವಿರುವುದಿಲ್ಲ.

ವಿದ್ಯಾರ್ಥಿಗಳು ಬದಲಾದ ಪರೀಕ್ಷಾಕೇಂದ್ರವು ನಮೂದಾಗಿರುವ ಪ್ರವೇಶ ಪತ್ರವನ್ನು ತಾವು ಅಭ್ಯಾಸ ಮಾಡಿದ ಶಾಲೆ/ಬದಲಾದ ಪರೀಕ್ಷಾ ಕೇಂದ್ರವಿರುವ ಬ್ಲಾಕ್‍ನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪಡೆಯಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News