ದೇವಿಶೆಟ್ಟಿ ವರದಿ ಆಧರಿಸಿ ಶಾಲಾ ಚಟುವಟಿಕೆ ಬಗ್ಗೆ ನಿರ್ಧಾರ: ಸುರೇಶ್ ಕುಮಾರ್

Update: 2021-06-21 17:29 GMT

ಬೆಂಗಳೂರು, ಜೂ.21: ಕೋವಿಡ್ ಸಂಬಂಧ ಆರೋಗ್ಯ ತಜ್ಞ ಡಾ.ದೇವಿಶೆಟ್ಟಿ ವರದಿ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಶಾಲಾ ಚಟುವಟಿಕೆಗಳ ಕುರಿತಂತೆ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‍ ಕುಮಾರ್ ತಿಳಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ(ಮಂಗಳವಾರ) ಮುಖ್ಯಮಂತ್ರಿಗಳಿಗೆ ಸಲ್ಲಿ ಕೆಯಾಗಲಿದೆ ಎನ್ನಲಾಗುತ್ತಿರುವ ಡಾ.ದೇವಿಶೆಟ್ಟಿ ಅವರ ವರದಿಯಲ್ಲಿ ತರಗತಿ ಕಲಿಕೆಯ ಬಗ್ಗೆ ಉಲ್ಲೇಖವಿದೆ ಎಂದು ಮಾಧ್ಯಮಗಳಲ್ಲಿಯಷ್ಟೇ ನೋಡಿದ್ದೇನೆ. ಹಾಗಾಗಿ, ವರದಿ ತಮ್ಮ ಕೈಸೇರಿದ ಬಳಿಕವಷ್ಟೇ ಪ್ರತಿಕ್ರಿಯಿಸಲು ಸಾಧ್ಯ ಎಂದರು.

ಸರಕಾರಕ್ಕೆ ಶಾಲೆಗಳನ್ನು ತೆರೆಯಬೇಕೆಂಬ ಉತ್ಸುಕತೆ, ತರಗತಿ ಕಲಿಕೆ ಮುಖ್ಯವೆನ್ನುವುದು ಸಾಮಾನ್ಯ ಅಭಿಪ್ರಾಯವಾಗಿದ್ದರೂ ಹಲವಾರು ಅಂಶಗಳನ್ನು ಗಮನಿಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಡಾ.ದೇವಿಶೆಟ್ಟಿ ಅವರು ಸಲ್ಲಿಸಲಿರುವ ವರದಿಯನ್ನು ಪರಿಪೂರ್ಣವಾಗಿ ಗಮನಿಸಿ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ನುಡಿದರು.

ಅಲ್ಲದೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಡೆಸಿದ ಅಧ್ಯಯನದಲ್ಲಿ ಶಾಲೆಗಳು ನಡೆಯದ ಕಾರಣ ಶೇ.30ರಷ್ಟು ಮಕ್ಕಳು ಕಲಿಕೆಯಿಂದ ಹೊರಗುಳಿದು ಶೈಕ್ಷಣಿಕ ಚಟುವಟಿಕೆಗಳಿಂದ ಹೊರಗುಳಿದಿದ್ದಾರೆ ಎಂಬ ಅಂಶವು ಬಹಿರಂಗಗೊಂಡಿದೆ ಎಂದ ಅವರು, ಈ ಅಧ್ಯಯನ ವರದಿಯ ಬೆಳಕಿನಲ್ಲಿ ನಾವು ಈ ವರ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಹೆಚ್ಚಿನ ರೀತಿಯ ಗಮನಹರಿಸುವ ಸವಾಲು ನಮ್ಮ ಮುಂದಿದೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News