ಬಿಜೆಪಿಯ ಬೇಜವಾಬ್ದಾರಿಯ ರಣತಂತ್ರ: ಪ್ರತ್ಯೇಕ ರಾಜ್ಯಕ್ಕೆ ಆಗ್ರಹದ ಬಗ್ಗೆ ಟಿಎಂಸಿ ಪ್ರತಿಕ್ರಿಯೆ

Update: 2021-06-21 17:29 GMT

ಕೋಲ್ಕತಾ, ಜೂ.21: ಪಶ್ಚಿಮ ಬಂಗಾಳದ ಪಶ್ಚಿಮ ಭಾಗದಲ್ಲಿರುವ ಅರಣ್ಯಪ್ರದೇಶ ಜಂಗಲ್‌ಮಹಲ್‌ಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನಕ್ಕೆ ಆಗ್ರಹಿಸಿ ಚಳವಳಿ ಆರಂಭವಾಗಿದೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆಡಳಿತಾರೂಢ ಟಿಎಂಸಿ, ರಾಜ್ಯದಲ್ಲಿ ಅಧಿಕಾರ ಪಡೆಯಲು ವಿಫಲವಾದ ಬಳಿಕ ಬಿಜೆಪಿ ಹೊಸದೊಂದು ಸಮಸ್ಯೆಯ ಬೀಜ ಬಿತ್ತುತ್ತಿದೆ ಎಂದು ಆರೋಪಿಸಿದೆ.

ಪುರೂಲಿಯಾ, ಬಂಕುರಾ ಮತ್ತು ಝರಗ್ರಾಮ ವ್ಯಾಪ್ತಿಯಲ್ಲಿರುವ ಜಂಗಲ್‌ಮಹಲ್‌ಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕೆಂಬ ಕೂಗು ಆರಂಭವಾಗಿದೆ. ಈ ಆಗ್ರಹದ ಬಿಸಿ ಬೀರ್‌ಭೂಮಿ, ಬರ್ದ್ವಾನ್, ಅರ್ಸಾನ್‌ಸೋಲ್, ಪೂರ್ವ ಮತ್ತು ಪಶ್ಚಿಮ ಮಿಡ್ನಾಪೋರ್ ಜಿಲ್ಲೆಗಳಿಗೂ ವ್ಯಾಪಿಸಿದೆ ಎಂದು ಬಿಜೆಪಿ ಸಂಸದ ಸೌಮಿತ್ರ ಖಾನ್ ಹೇಳಿಕೆ ನೀಡಿದ್ದರು.

ಇದು ಬಿಜೆಪಿಯ ಬೇಜವಾಬ್ದಾರಿಯ ರಣತಂತ್ರವಾಗಿದೆ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಪ್ರತಿಕ್ರಿಯಿಸಿದ್ದಾರೆ. ಉತ್ತರ ಬಂಗಾಳಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕೆಂದು ಬಿಜೆಪಿಯ ಹಲವು ಮುಖಂಡರು ಪ್ರತಿಪಾದಿಸಿದ್ದರು. ಜೂನ್ 15ರಂದು ಬಿಜೆಪಿ ಸಂಸದ ಜಾನ್ ಬಾರ್ಲ ನೇತೃತ್ವದಲ್ಲಿ ನಡೆದಿದ್ದ ಪಕ್ಷದ ಸಂಸದರ ಸಭೆಯಲ್ಲೂ ಕೆಲವು ಬಿಜೆಪಿ ಸಂಸದರು ಈ ಬಗ್ಗೆ ಆಗ್ರಹಿಸಿ ವಿವಾದಕ್ಕೆ ನಾಂದಿ ಹಾಡಿದ್ದರು. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಪ.ಬಂಗಾಳದ ಯಾವುದೇ ಭಾಗವು ಸ್ವಾತಂತ್ರ್ಯ ಕಳೆದುಕೊಂಡು ಕೇಂದ್ರದ ಕೈಗೊಂಬೆಯಾಗುವುದಕ್ಕೆ ’ ತಾನು ಅವಕಾಶ ನೀಡುವುದಿಲ್ಲ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News