ಸ್ವೀಡನ್: ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯ ಅಂಗೀಕಾರ

Update: 2021-06-21 17:34 GMT
photo: twitter /@NewTimesRwanda

ಸ್ಟಾಕ್‌ಹೋಮ್ (ಸ್ವೀಡನ್), ಜೂ. 21: ಸ್ವೀಡನ್ ಪ್ರಧಾನಿ ಸ್ಟೀಫನ್ ಲೊಫ್‌ವೆನ್ ವಿರುದ್ಧದ ಅವಿಶ್ವಾಸ ನಿರ್ಣಯದ ಪರವಾಗಿ ದೇಶದ ಸಂಸತ್ತು ಸೋಮವಾರ ಮತ ಹಾಕಿದೆ. ಇದರೊಂದಿಗೆ ಸೋಶಿಯಲ್ ಡೆಮಾಕ್ರಟಿಕ್ ನಾಯಕನಿಗೆ ರಾಜೀನಾಮೆ ನೀಡಲು ಒಂದು ವಾರದ ಕಾಲಾವಕಾಶವನ್ನು ನೀಡಿದೆ. ಅದೇ ವೇಳೆ, ನೂತನ ಸರಕಾರವನ್ನು ರಚಿಸುವ ಅಥವಾ ಮಧ್ಯಂತರ ಚುನಾವಣೆ ನಡೆಸುವ ಜವಾಬ್ದಾರಿಯನ್ನು ಸ್ಪೀಕರ್‌ಗೆ ವಹಿಸಿದೆ.

ಹೊಸದಾಗಿ ನಿರ್ಮಿಸಲಾಗುವ ಅಪಾರ್ಟ್‌ಮೆಂಟ್‌ಗಳಿಗಾಗಿ ಬಾಡಿಗೆ ನಿಯಂತ್ರಣಗಳನ್ನು ಸಡಿಲಗೊಳಿಸುವ ವಿಚಾರದಲ್ಲಿ ಮಾಜಿ ಕಮ್ಯುನಿಸ್ಟ್ ಪಕ್ಷವಾಗಿರುವ ‘ಲೆಫ್ಟ್ ಪಾರ್ಟಿ’ಯು ಮಧ್ಯ-ಎಡ ಪಂಥೀಯ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡ ಬಳೀಕ ಈ ಬೆಳವಣಿಗೆ ಸಂಭವಿಸಿದೆ. ಹಾಗಾಗಿ, ಸ್ವೀಡನ್ ಡೆಮಾಕ್ರಟ್ಸ್ ಪಕ್ಷವು ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ.

ಅವಿಶ್ವಾಸ ನಿರ್ಣಯ ಅಂಗೀಕಾರಗೊಳ್ಳಲು 349 ಸದಸ್ಯಬಲದ ಸಂಸತ್‌ನಲ್ಲಿ 175 ಮತಗಳು ಬೇಕಾಗಿತ್ತು. ಅಂತಿಮವಾಗಿ ನಿರ್ಣಯದ ಪರವಾಗಿ 181 ಸಂಸದರು ಮತ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News