ಕೊಡಗು: ಜು.15ರೊಳಗೆ ಸೂಕ್ಷ್ಮ ಪ್ರದೇಶದ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಡಿಸಿ ಸೂಚನೆ

Update: 2021-06-21 17:47 GMT

ಮಡಿಕೇರಿ, ಜೂ.21: ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಗುರುತಿಸಲಾಗಿರುವ ಸೂಕ್ಷ್ಮ ಪ್ರದೇಶದ ಜನರನ್ನು ಕಾಳಜಿ ಕೇಂದ್ರಕ್ಕೆ ಜುಲೈ, 15 ರೊಳಗೆ ಸ್ಥಳಾಂತರಿಸಲು ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಇದುವರೆಗೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು. ಈಗಾಗಲೇ ಮುಂಗಾರು ಆರಂಭವಾಗಿದ್ದು, ಕಳೆದ ವಾರ ಹೆಚ್ಚಿನ ಮಳೆಯಾಗಿದೆ. ಹಾಗೆಯೇ ಕಳೆದ ಮೂರು ವರ್ಷದಲ್ಲಿ ಆಗಸ್ಟ್ ಮೊದಲ ಮತ್ತು ಎರಡನೇ ವಾರದಲ್ಲಿ ಧಾರಾಕಾರ ಮಳೆಯಾಗಿ ಅವಘಡಗಳು ಸಂಭವಿಸಿರುವುದರಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದರು.

ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ತೆರೆಯುವುದರ ಜೊತೆಗೆ, ಕಾಳಜಿ ಕೇಂದ್ರದಲ್ಲಿ ಶೌಚಾಲಯ, ಸ್ನಾನದ ಮನೆ, ಬಿಸಿ ನೀರು ಮತ್ತಿತರ ಮೂಲ ಸೌಲಭ್ಯಗಳು ಇದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು. ಕಾಳಜಿ ಕೇಂದ್ರ ಸಂಬಂಧಿಸಿದಂತೆ ಶಾಲಾ ಕಾಲೇಜು, ಸಮುದಾಯ ಭವನ, ಕಲ್ಯಾಣ ಮಂಟಪಗಳು ಹೀಗೆ ಹಲವು ಕಾಳಜಿ ಕೇಂದ್ರಗಳನ್ನು ಗುರುತಿಸಬೇಕು. ಯಾವುದೇ ಕಾಳಜಿ ಕೇಂದ್ರದಲ್ಲಿ 100 ಜನರಿಗಿಂತ ಹೆಚ್ಚು ಇರಬಾರದು. ಆ ನಿಟ್ಟಿನಲ್ಲಿ ಗಮನಹರಿಸುವಂತೆ ಜಿಲ್ಲಾಧಿಕಾರಿ ಅವರು ಹೇಳಿದರು.

ಕೋವಿಡ್-19 ಹಿನ್ನೆಲೆ ಸೂಕ್ಷ್ಮ ಪ್ರದೇಶದಿಂದ ಸ್ಥಳಾಂತರವಾಗುವ ಕುಟುಂಬದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಪಡೆದಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಪಡೆಯಬೇಕು. ಪಡೆಯದಿದ್ದಲ್ಲಿ ಲಸಿಕೆ ಕೊಡಿಸಬೇಕು. ಆ ನಿಟ್ಟಿನಲ್ಲಿ ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ಈಗಾಗಲೇ ಹೋಬಳಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ  ಸ್ಥಳೀಯವಾಗಿಯೂ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲು ಕ್ರಮವಹಿಸಬೇಕು. ಇದರಿಂದ ಕಾಳಜಿ ಕೇಂದ್ರಗಳಲ್ಲಿ ಹೆಚ್ಚಿನ ಗಮನಹರಿಸಲು ಸಹಕಾರಿಯಾಗಲಿದೆ. ಆ ದಿಸೆಯಲ್ಲಿ ತಹಶೀಲ್ದಾರರು ಮತ್ತು ನೋಡಲ್ ಅಧಿಕಾರಿಗಳು ಚರ್ಚಿಸಿ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದರು.

ಭಾಗಮಂಡಲ, ಗರ್ವಾಲೆ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸಂಪರ್ಕ ಸಿಗುತ್ತಿಲ್ಲ ಎಂಬ ಮಾಹಿತಿ ಇದ್ದು, ಈ ಪ್ರದೇಶಗಳಲ್ಲಿ ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸಂಪರ್ಕ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸೀಮೆಎಣ್ಣೆ ವಿತರಣೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಗೆಯೇ ಕಂದಾಯ ಸಚಿವರ ಗಮನಕ್ಕೆ ತರಲಾಗಿದೆ. ಪ್ರಾಕೃತಿಕ ವಿಕೋಪದಿಂದ ಬೆಳೆ ಹಾನಿಯಾದಲ್ಲಿ ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರು ಹೇಳಿದರು.

ಭಾರಿ ಮಳೆ- ಗಾಳಿಗೆ ವಿದ್ಯುತ್ ಮಾರ್ಗಕ್ಕೆ ತೊಂದರೆಯಾದಲ್ಲಿ ಸರಿಪಡಿಸುವ ಕೆಲಸವಾಗಬೇಕು. ಅದಕ್ಕಿಂತ ಮೊದಲು ವಿದ್ಯುತ್ ಮಾರ್ಗಗಳ ಸುಸ್ಥಿತಿ ಬಗ್ಗೆ ಗಮನಹರಿಸಬೇಕು ಎಂದು ಸೆಸ್ಕ್ ಇಂಜಿನಿಯರ್ ಗೆ ನಿರ್ದೇಶನ ನೀಡಿದರು. 

ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗಳು ಪ್ರಾಕೃತಿಕ ವಿಕೋಪ ಎದುರಿಸಲು ಹಿಟಾಚಿ, ಜೆಸಿಬಿ ಜೊತೆಗೆ ವಾಹನ ಚಾಲಕರು ಇರಬೇಕು. ಜಿಲ್ಲೆಯ 17 ಕಡೆಗಳಲ್ಲಿ ಗೋಶಾಲೆ ತೆರೆದು ಸೂಕ್ಷ್ಮ ಪ್ರದೇಶದ ಜಾನುವಾರುಗಳನ್ನು ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಸೂಕ್ಷ್ಮ ಪ್ರದೇಶದ ಜನರನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಕಾಳಜಿ ಕೇಂದ್ರ ತೆರೆಯಬೇಕು ಎಂದು ಅವರು ಸಲಹೆ ಮಾಡಿದರು.

ಕಾಳಜಿ ಕೇಂದ್ರದಲ್ಲಿ ಶೌಚಾಲಯ, ಸ್ನಾನದ ಮನೆ, ಬಿಸಿ ನೀರು, ವಿದ್ಯುತ್ ಸಂಪರ್ಕ, ಹೀಗೆ ಅಗತ್ಯ ಮೂಲ ಸೌಲಭ್ಯಗಳು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಅವರು ನಿರ್ದೇಶನ ನೀಡಿದರು.

ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣೆ ಯೋಜನೆ ತಯಾರಿಸಲಾಗಿದ್ದು, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ, ಅಧಿಕಾರಿಗಳು ಸೇರಿದಂತೆ ಸ್ಥಳೀಯ ವಾಲೆಂಟರ್ ಗಳನ್ನು ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಸಹಕಾರ ಪಡೆಯಬೇಕು. ಹಾರಂಗಿ ಜಲಾಶಯದಿಂದ ನೀರು ಬಿಡುಗಡೆ ಸಂಬಂಧಿಸಿದಂತೆ ಮೊದಲೇ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.

ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಮತ್ತಷ್ಟು ಎಚ್ಚರ ವಹಿಸಬೇಕಿದೆ. ಒಂದು ವಾರದಿಂದ 10ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ಎಲ್ಲೆಲ್ಲಿ ಕಂಡು ಬಂದಿದೆ ಎಂದು ಮಾಹಿತಿ ನೀಡುವಂತೆ ಅವರು ಸೂಚಿಸಿದರು.

ತಹಶೀಲ್ದಾರರಾದ ಮಹೇಶ್, ಗೋವಿಂದರಾಜು, ಯೋಗಾನಂದ, ನೋಡಲ್ ಅಧಿಕಾರಿಗಳಾದ ನಟರಾಜು, ವಿರೂಪಾಕ್ಷ, ರಾಜಶೇಖರ, ರಾಜೇಂದ್ರ ಕುಮಾರ್, ಶಶಿಧರ, ಶ್ರೀನಿವಾಸ್, ಶಿವಕುಮಾರ್, ಗುರುಶಾಂತಪ್ಪ, ತಮ್ಮಯ್ಯ, ಲಿಂಗರಾಜು, ಕೆ.ಟಿ.ದರ್ಶನ್, ಕೃಷ್ಣಪ್ರಸಾದ್ ಇತರರು ತಮ್ಮ ಹೋಬಳಿ ವ್ಯಾಪ್ತಿಯಲ್ಲಿ ಪರಿಹಾರ ಕೇಂದ್ರ ತೆರೆಯುವ ಬಗ್ಗೆ ಮಾಹಿತಿ ನೀಡಿದರು.

ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್, ಲೋಕೋಪಯೋಗಿ ಇಲಾಖೆ ಇಇ ನಾಗರಾಜು, ಹಾರಂಗಿ ಜಲಾಶಯ ಅಧೀಕ್ಷಕ ಎಂಜಿನಿಯರ್ ಚೆನ್ನಕೇಶವ, ಅನಿಲ್ ಬಗಟಿ ಅವರು ಹಲವು ಮಾಹಿತಿ ನೀಡಿದರು. ನಾನಾ ಇಲಾಖೆ ಅಧಿಕಾರಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News