ಟಿಆರ್ ಪಿ ಹಗರಣ:ಚಾರ್ಜ್ ಶೀಟ್ ನಲ್ಲಿ ಅರ್ನಬ್ ಗೋಸ್ವಾಮಿ ಆರೋಪಿ ಎಂದು ಹೆಸರಿಸಿದ ಮುಂಬೈ ಪೊಲೀಸ್

Update: 2021-06-22 13:21 GMT
photo: twitter

ಹೊಸದಿಲ್ಲಿ: ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ) ಹಗರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಮಂಗಳವಾರ ಚಾರ್ಜ್‌ಶೀಟ್ ಸಲ್ಲಿಸಿದ್ದು, ಇದರಲ್ಲಿ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ.

ರಿಪಬ್ಲಿಕ್ ಟಿವಿಯ ಒಡೆತನ ಹೊಂದಿರುವ ಎ ಆರ್ ಜಿ ಔಟ್‌ಲಿಯರ್ ಮೀಡಿಯಾದ ಗೋಸ್ವಾಮಿ ಹಾಗೂ ಇತರ ನಾಲ್ವರಾದ ಸಿಒಒ ಪ್ರಿಯಾ ಮುಖರ್ಜಿ, ಶಿವೇಂದು  ಮುಲೇಲ್ಕರ್ ಹಾಗೂ ಶಿವ ಸುಂದರಂ ಅವರನ್ನು 1,800 ಪುಟಗಳ ಎರಡನೇ ಪೂರಕ ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿದೆ ಎಂದು Live Law ವರದಿ ಮಾಡಿದೆ.

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ರಿಪಬ್ಲಿಕ್ ಚಾನೆಲ್ ಹಗರಣದಲ್ಲಿ ಭಾಗಿಯಾಗಿದೆ ಎಂದು ಹೆಸರಿಸಿದ ನಂತರ ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದೆ.

ಅಕ್ಟೋಬರ್ 8, 2020 ರಂದು, ರಿಪಬ್ಲಿಕ್ ಟಿವಿ, ಬಾಕ್ಸ್ ಸಿನೆಮಾ ಹಾಗೂ  ಫಕ್ತ್  ಮರಾಠಿ ಚಾನೆಲ್ ಗಳನ್ನು ಒಳಗೊಂಡ ಟಿಆರ್ ಪಿ ವಂಚನೆ ಜಾಲಯನ್ನು ಭೇದಿಸಲಾಗಿತ್ತು  ಎಂದು ಸಿಂಗ್ ಹೇಳಿದ್ದರು. ಅವರ ಪ್ರಕಾರ, ಚಾನೆಲ್‌ಗಳು ತಮ್ಮ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಲು ಬಾರ್ಕ್ ನ  ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಪಾರ್ಥೋ ದಾಸ್‌ಗುಪ್ತಾ ಅವರಿಗೆ ಲಂಚ ನೀಡುತ್ತಿದ್ದವು. ಟಿಆರ್‌ಪಿಗಳನ್ನು ಕುಶಲತೆಯಿಂದ ನಿರ್ವಹಿಸುತ್ತಿದ್ದವು.

ಕೆಲವು ಟಿವಿ ಚಾನೆಲ್‌ಗಳು ಟಿಆರ್‌ಪಿ ಸಂಖ್ಯೆಯನ್ನು ತಿರುಚುತ್ತಿವೆ  ಎಂದು ಆರೋಪಿಸಿ ಬಾರ್ಕ್ ಸಂಸ್ಥೆಯು ಹನ್ಸಾ ರಿಸರ್ಚ್ ಗ್ರೂಪ್ ಮೂಲಕ ದೂರು ನೀಡಿದ ಬಳಿಕ ಕಳೆದ ವರ್ಷ ಟಿ ಆರ್ ಪಿ ತಿರುಚುವ ಹಗರಣ ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News