ಸಮಗ್ರ ಆರ್ಥಿಕ ಪ್ಯಾಕೇಜ್ ಘೋಷಿಸಲು ಒತ್ತಾಯ: ಜನಾಗ್ರಹ ಆಂದೋಲನ ವತಿಯಿಂದ ರಾಜ್ಯಾದ್ಯಂತ ಧರಣಿ

Update: 2021-06-22 15:08 GMT

ಬೆಂಗಳೂರು, ಜೂ.22: ಕೋವಿಡ್ ಹಾಗೂ ಲಾಕ್‍ಡೌನ್‍ನಿಂದಾಗಿ ಸಂತ್ರಸ್ತಗೊಂಡಿರುವ ರಾಜ್ಯದ ಜನತೆಗೆ ಸಮಗ್ರವಾದ ಆರ್ಥಿಕ ಪ್ಯಾಕೇಜ್ ಹಾಗೂ ಕೋವಿಡ್ ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ಆಗ್ರಹಿಸಿ ಜನಾಗ್ರಹ ಆಂದೋಲನ ವತಿಯಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಶಾಸಕರ, ಸಚಿವರ ನಿವಾಸದೆದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರಿನ ವಿಜಯನಗರದಲ್ಲಿರುವ ಸಚಿವ ವಿ.ಸೋಮಣ್ಣ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ ಜನಾಗ್ರಹ ಮುಖಂಡರು, ಕೋವಿಡ್‍ನಿಂದಾಗಿ ರಾಜ್ಯದ ಬಹುತೇಕ ಜನತೆ ಉದ್ಯೋಗ ಹಾಗೂ ಕೋವಿಡ್‍ನಿಂದ ಕುಟುಂಬಸ್ಥರನ್ನು ಕಳೆದುಕೊಂಡಿದ್ದಾರೆ. ಇಂತಹ ಭೀಕರವಾದ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಜನತೆಯ ನೆರವಿಗೆ ಬರಬೇಕಾದದ್ದು ಆದ್ಯ ಕರ್ತವ್ಯವೆಂದು ಒತ್ತಾಯಿಸಿದ್ದಾರೆ.

ಬಡಜನರಿಗೆ ಸಮಗ್ರ ಆರ್ಥಿಕ ಪ್ಯಾಕೇಜ್‍ಗಾಗಿ ಕಳೆದ ಮೂರು ತಿಂಗಳಿನಿಂದ ಇದುವರೆಗೂ ನಾಲ್ಕು ಪ್ರತಿಭಟನೆಗಳನ್ನು ನಡೆಸಿದ್ದು, ಮುಖ್ಯಮಂತ್ರಿಗಳಿಗೆ ಮೂರು ಪತ್ರಗಳನ್ನು ಬರೆದಿದೆ. ಈಗಲಾದರೂ ಸರಕಾರ ಎಚ್ಚೆತ್ತು ಜನರ ನೆರವಿಗೆ ಧಾವಿಸಬೇಕೆಂದು ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ಆಗ್ರಹಿಸಿದ್ದಾರೆ.

ಸರಕಾರ ಕೇವಲ ಕಣ್ಣೊರೆಸುವ ಕೆಲಸ ಮಾಡುತ್ತಿದೆ. ಒಂದು ಸಾವಿರ ಜನರಿದ್ದರೆ ಕೇವಲ 20 ಜನರಿಗೆ ಸೌಲಭ್ಯ ಕೊಟ್ಟರೆ ಸಾಲದು. ನ್ಯಾಯಯುತವಾಗಿ ನೊಂದವರಿಗೆ ಪರಿಹಾರ ನೀಡಬೇಕು. ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕು. ಇದನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮತ್ತಷ್ಟು ತೀವ್ರಗೊಳಿಸುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ಸಂಕಷ್ಟದ ಕಾಲದಲ್ಲೂ ಪೆಟ್ರೋಲ್, ಎಣ್ಣೆ ಮತ್ತು ದವಸಧಾನ್ಯಗಳ ಬೆಲೆ ಏರಿಸಲಾಗುತ್ತಿದೆ. ಈ ಸರಕಾರಕ್ಕೆ ಕನಿಷ್ಠ ಮಾನವೀಯತೆ ಇಲ್ಲವೆ. ಲಸಿಕೆ ವಿಷಯದಲ್ಲಿಯೂ ಭ್ರಷ್ಟಾಚಾರಕ್ಕೆ ಕೈಹಾಕಿದೆ. ಇದನ್ನು ಕೂಡಲೇ ನಿಲ್ಲಿಸಿ ಜನಪರವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಮಾತನಾಡಿ, ನಾವು ಇದುವರೆಗೆ ಮೂರು ಸುತ್ತಿನಲ್ಲಿ ಹೋರಾಟ ನಡೆಸಿದ್ದೇವೆ. ಇಂದು ನಾಲ್ಕನೇ ಬಾರಿ ಹೋರಾಟಕ್ಕಿಳಿದಿದ್ದೇವೆ. ಏಕೆಂದರೆ ಸರಕಾರ ಕೋವಿಡ್‍ನ್ನು ಇಂದಿಗೂ ಗಂಭೀರವಾಗಿ ಪರಿಗಣಿಸಿಲ್ಲ. ತಜ್ಞರು ಎರಡನೇ ಅಲೆ ಬಗ್ಗೆ ಎಚ್ಚರಿಸಿದ್ದರೂ ಸಹ ಸರಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂಬುದಕ್ಕೆ ನೆಲಮಂಗಲದಲ್ಲಿದ್ದ 10,000 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ನ್ನು ಮುಚ್ಚಿದ್ದೆ ಸಾಕ್ಷಿ ಎಂದು ಕಿಡಿಕಾರಿದರು.

ರಾಜ್ಯಾದ್ಯಂತ ಹಲವಾರು ಶಾಸಕರ ಮನೆ ಮುಂದೆ ಖಾಲಿ ಚೀಲಗಳನ್ನು ಸುಟ್ಟು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿ ಶಾಸಕರ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಸುಮಾರು 100 ಜನರು ಭಾಗವಹಿಸಿದ್ದರು. ಕಾರ್ಕಳ ಶಾಸಕರ ಕಚೇರಿ ಬಳಿ ಪ್ರತಿಭಟನೆಗಾಗಿ ಪ್ರತಿಭಟನಾಕಾರರು ಸಾಗುತ್ತಿದ್ದಾಗ, ಪೊಲೀಸರು ತಡೆದ ಕಾರಣ ಶಾಸಕರ ಕಚೇರಿಗೆ ಸಮೀಪದಲ್ಲೇ ದಾರಿ ಮಧ್ಯೆ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರ ನಡುವೆ ಮಾತಿನ ಚಕಮಕಿ ನಡೆಯಿತು.

ಬೆಳಗಾವಿ ಜಿಲ್ಲೆಯಲ್ಲಿ ಜನಾಗ್ರಹ ಆಂದೋಲನ ವತಿಯಿಂದ ಖಾಲಿ ಚೀಲವನ್ನು ಸುಟ್ಟು ಪ್ರತಿಭಟನೆ ನಡೆಸಲಾಯಿತು ಮತ್ತು ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಭಾರತೀಯ ಕೃಷಿಯ ಸಮಾಜದ ರಾಜ್ಯಾಧ್ಯಕ್ಷರಾದ ಸಿದ್ದಗೌಡ ಮೋದಗಿ, ಕರ್ನಾಟಕ ಜನಶಕ್ತಿಯ ರವಿ ಪಾಟೀಲ್, ರಮೇಶ್ ವಾಲಿ, ವಿಠ್ಠಲ್ ಬಂಗೂಡಿ, ಶಂಕರ್ ಮುಗುಳಿ, ಪ್ರಕಾಶ್ ಕಾಗಿ, ಯಾಸಿನ್ ಮಕಂದರ್ ಮತ್ತಿತರರಿದ್ದರು.

ತುಮಕೂರು ನಗರ ಶಾಸಕರ ಜ್ಯೋತಿ ಗಣೇಶ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಲಾಯಿತು. ಇದೇ ರೀತಿಯಲ್ಲಿ ಶಿವಮೊಗ್ಗ, ವಿಜಯಪುರ, ವಿಜಯನಗರ, ಮಂಡ್ಯ, ಚಿತ್ರದುರ್ಗ ಸೇರಿದಂತೆ ರಾಜ್ಯದ ನೂರಾರು ಕಡೆ ಸಚಿವರು, ಶಾಸಕರ ಮನೆ ಮುಂದೆ ಪ್ರತಿಭಟನೆಗಳು ನಡೆದಿವೆ.

ಜನಪರ ಸಂಘಟನೆಗಳ ಒತ್ತಾಯದಿಂದಾಗಿ ಅಸಂಘಟಿತ ಕಾರ್ಮಿಕರಿಗೆ 2 ಸಾವಿರ ರೂ. ಕೊಡುವುದು, ಒಂದಷ್ಟು ರೇಷನ್ ಕಿಟ್ ಕೊಡುವ ಅರೆ ಬರೆ ಕೆಲಸಗಳನ್ನು ಸರಕಾರ ಮಾಡುತ್ತಿದೆ. ಆದರೆ, ಈಗ ಮೂರನೇ ಅಲೆ ಬರುವ ಅಪಾಯವಿದೆ. ಅದು ಮಕ್ಕಳನ್ನು ಬಾಧಿಸುವ ಸಾಧ್ಯತೆಯಿದೆ. ಈಗ ಏನು ಮಾಡೋಣ? ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಜನರು ಏನು ಮಾಡಬೇಕು? ಇಂತಹ ಸಮಯದಲ್ಲಿ ಏಕೆ ಕಾರ್ಪೋರೇಟ್ ಕುಳಗಳ, ಶ್ರೀಮಂತರ ಮೇಲೆ ತೆರಿಗೆ ಹಾಕುತ್ತಿಲ್ಲ? ಕೇಂದ್ರ ಸರಕಾರ ನಮ್ಮ ಪಾಲಿನ ಜಿಎಸ್ಟಿ, ಅನುದಾನದ ಹಣ ಕೊಡುತ್ತಿಲ್ಲವೆಂದು ರಾಜ್ಯ ಸರಕಾರ ಯಾಕೆ ಕೇಳುತ್ತಿಲ್ಲ.

-ನೂರ್ ಶ್ರೀಧರ್, ರಾಜ್ಯಾಧ್ಯಕ್ಷ, ಕರ್ನಾಟಕ ಜನಶಕ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News