ಕುಂಭ ಮೇಳ: ನಕಲಿ ಕೋವಿಡ್ ಪರೀಕ್ಷೆ ಹಗರಣ; ಕೇಸು ರದ್ದುಗೊಳಿವಂತೆ ಕೋರಿ 2 ಲ್ಯಾಬ್ ಗಳಿಂದ ಹೈಕೋರ್ಟ್ ಗೆ ಮನವಿ

Update: 2021-06-22 17:36 GMT

ಡೆಹ್ರಾಡೂನ್, ಜೂ. 22: ಉತ್ತರಾಖಂಡದಲ್ಲಿ ಎಪ್ರಿಲ್ ನಲ್ಲಿ ನಡೆದ ಕುಂಭಮೇಳದ ಸಂದರ್ಭ ನಕಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಿದೆ ಎಂದು ಆರೋಪಿಸಲಾದ ಎರಡು ಲ್ಯಾಬ್ ಗಳು ತಮ್ಮ ವಿರುದ್ಧ ದಾಖಲಿಸಲಾದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿವೆ. 

ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಸಾಂಕ್ರಾಮಿಕ ರೋಗ ಕಾಯ್ದೆ ಕಲಂ ಅಡಿಯಲ್ಲಿ ರೋಗ ಹರಡುವಿಕೆ, ವಂಚನೆ, ಕ್ರಿಮಿನಲ್ ಪಿತೂರಿ ಹಾಗೂ ನಿರ್ಲಕ್ಷ ಆರೋಪಿಸಿ ದಿಲ್ಲಿ ಮೂಲದ ಲಾಲ್ಚಂದಾನಿ ಲ್ಯಾಬ್ಸ್ ಹಾಗೂ ನಲ್ವಾ ಲ್ಯಾಬ್ಸ್ ವಿರುದ್ಧ ಹರ್ಯಾಣದ ಹಿಸಾರ್ ಜಿಲ್ಲೆಯಲ್ಲಿ ಪೊಲೀಸರು ಕಳೆದ ವಾರ ಪ್ರಕರಣ ದಾಖಲಿಸಿದ್ದರು. ಪರೀಕ್ಷೆಯ ಸಂಯೋಜನೆ ಹಾಗೂ ಸುಗಮಗೊಳಿಸಲು ಈ ಲ್ಯಾಬ್ಸ್ ಗಳೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದ ನೋಯ್ಡ ಮೂಲದ ಮ್ಯಾಕ್ಸ್ ಕಾರ್ಪೋರೇಟ್ ಸರ್ವೀಸಸ್ ವಿರುದ್ಧ ಕೂಡ ಪ್ರಕರಣ ದಾಖಲಿಸಲಾಗಿತ್ತು. 

ಕುಂಭಮೇಳದ ಸಂದರ್ಭ ಈ ಲ್ಯಾಬ್ಗಳು 1 ಲಕ್ಷ ನಕಲಿ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸಿವೆ ಎಂದು ಹೇಳಲಾಗಿದೆ. ಆದರೆ, ಮ್ಯಾಕ್ಸ್ ಕಾರ್ಪೋರೇಟ್ ಸರ್ವೀಸಸ್ನೊಂದಿಗೆ ತಿಳಿವಳಿಕಾ ಪತ್ರಕ್ಕೆ ಸಹಿ ಹಾಕಿದ ಬಳಿಕ ಎಪ್ರಿಲ್ 1ರಿಂದ ಎಪ್ರಿಲ್ 26ರ ನಡುವೆ ಕೇವಲ 12 ಸಾವಿರ ಪರೀಕ್ಷೆಗಳನ್ನು ಮಾತ್ರ ಮಾಡಲಾಗಿದೆ ಎಂದು ಲಾಲ್ಚಂದಾನಿ ಲ್ಯಾಬ್ ಉತ್ತರಾಖಂಡ ಉಚ್ಚ ನ್ಯಾಯಾಲಯಕ್ಕೆ ಸೋಮವಾರ ತಿಳಿಸಿದೆ. 

ಕೋಟಿಗಟ್ಟಲೆ ಹಣವನ್ನು ದುರುಪಯೋಗ ಮಾಡಲಾಗಿದೆ ಎಂಬ ಆರೋಪವನ್ನು ಕೂಡ ಲ್ಯಾಬ್ ನಿರಾಕರಿಸಿದೆ. ‘‘ಲ್ಯಾಬ್ಗಳು ಕೇವಲ 206 ರೂಪಾಯಿಗೆ ಪ್ರತಿ ಪರೀಕ್ಷೆ ನಡೆಸಿತ್ತು. ಈ ಎಲ್ಲಾ ಪರೀಕ್ಷೆಗಳ ಒಟ್ಟು ಮೊತ್ತ ಸುಮಾರು 24.74 ಲಕ್ಷ ರೂಪಾಯಿ. ಮಾಧ್ಯಮಗಳು ವರದಿ ಮಾಡಿದಂತೆ ಕೋಟ್ಯಂತರ ರೂಪಾಯಿ ಅಲ್ಲ’’ ಎಂದು ಲ್ಯಾಬ್ ತನ್ನ ಮನವಿಯಲ್ಲಿ ಹೇಳಿದೆ. ಈ ನಡುವೆ ನಲ್ವಾ ಲ್ಯಾಬ್, ಗುತ್ತಿಗೆಗಾಗಿ ಮ್ಯಾಕ್ಸ್ನಿಂದ ಯಾವುದೇ ಪಾವತಿ ಸ್ವೀಕರಿಸಿಲ್ಲ ಎಂದು ಪ್ರತಿಪಾದಿಸಿದೆ. ಅಲ್ಲದೆ ಕುಂಭಮೇಳದಲ್ಲಿ ಕೋವಿಡ್ ಪರೀಕ್ಷೆಗೆ ತಂತ್ರಜ್ಞರನ್ನು ಕಳುಹಿಸಿರುವುದನ್ನು ನಿರಾಕರಿಸಿದೆ.
 
‘‘ಯಾವುದೇ ತಾಂತ್ರಿಕ ಬೆಂಬಲ ನೀಡುವಂತೆ ಅಥವಾ ಯಾವುದೇ ತರಬೇತಿಗೆ ನಮ್ಮ ಯಾವುದೇ ತಂತ್ರಜ್ಞರನ್ನು ಕಳುಹಿಸಿಕೊಡುವಂತೆ ಮ್ಯಾಕ್ಸ್ ಕಾರ್ಪೋರೇಟ್ ಸರ್ವೀಸಸ್ ಎಂದೂ ಮನವಿ ಮಾಡಿಲ್ಲ’’ ಎಂದು ಲ್ಯಾಬ್ ಪರ ವಕೀಲ ಪರೀಕ್ಷಿತ್ ಸೈನಿ ಹೇಳಿದ್ದಾರೆ ಎಂದು ದಿನಪತ್ರಿಕೆಯೊಂದಿಗೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News