ಜಾಗತಿಕ ಎಫ್ ಡಿಐ ಕುಸಿತದಿಂದ ಬಡದೇಶಗಳಿಗೆ ತೊಂದರೆ: ವಿಶ್ವಸಂಸ್ಥೆ

Update: 2021-06-22 18:49 GMT

ವಿಶ್ವಸಂಸ್ಥೆ,ಜೂ.22: ಕೋವಿಡ್-19 ಬಿಕ್ಕಟ್ಟು ಜಾಗತಿಕ ವಿದೇಶಿ ನೇರ ಹೂಡಿಕೆ (ಎಫ್ಡಿಐ)ಯಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿದೆ. 2019ರಲ್ಲ್ಲಿ 1.5 ಲಕ್ಷ ಕೋಟಿ ಡಾ.ಗಳಷ್ಟಿದ್ದ ಹೂಡಿಕೆಯ ಹರಿವು 2020ರಲ್ಲಿ ಮೂರನೇ ಒಂದು ಭಾಗದಷ್ಟು ಇಳಿಕೆಯಾಗಿದ್ದು,1 ಲಕ್ಷ ಕೋಟಿ ಡಾ.ಗೆ ಕುಸಿದಿದೆ ಎಂದು ವ್ಯಾಪಾರ ಮತ್ತು ಅಭಿವೃದ್ಧಿ ಕುರಿತು ಸಂಯುಕ್ತ ರಾಷ್ಟ್ರ ಸಮ್ಮೇಳನ (ಅಂಕ್ಟಾಡ್)ವು ತನ್ನ ನೂತನ ವಿಶ್ವ ಹೂಡಿಕೆ ವರದಿ 2021ರಲ್ಲಿ ಎಚ್ಚರಿಕೆ ನೀಡಿದೆ.


ಕನಿಷ್ಠ ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ದುರ್ಬಲ ಆರ್ಥಿಕತೆಯ ದೇಶಗಳಿಗೆ ವಿದೇಶಿ ಹೂಡಿಕೆ ನಿಧಿಗಳ ಲಭ್ಯತೆಯನ್ನು ಖಚಿತಪಡಿಸುವಲ್ಲಿ ಸಾಧಿಸಲಾಗಿದ್ದ ಪ್ರಗತಿಗೆ ಕೊರೋನವೈರಸ್ ಸಾಂಕ್ರಾಮಿಕವು ಹಿನ್ನಡೆಯನ್ನುಂಟು ಮಾಡಿದೆ ಎಂದು ವರದಿಯು ತಿಳಿಸಿದೆ.
 
ಅಂತರರಾಷ್ಟ್ರೀಯ ಹೂಡಿಕೆಗಳು ವಿಶ್ವದ ಬಡದೇಶಗಳಲ್ಲಿ ಸುಸ್ಥಿರ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದಿರುವುದರಿಂದ ಇದು ಕಳವಳಕಾರಿ ವಿಷಯವಾಗಿದೆ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರು ವರದಿಯ ಮುನ್ನುಡಿಯಲ್ಲಿ ಹೇಳಿದ್ದಾರೆ.

ಅಭಿವೃದ್ಧಿಗೊಂಡ ದೇಶಗಳಲ್ಲಿ ಎಫ್ಡಿಐ ಕುಸಿತವು ಅತ್ಯಂತ ತೀವ್ರವಾಗಿದ್ದು,ಅದು ಶೇ.58ರಷ್ಟು ಇಳಿಕೆಯಾಗಿದೆ. ಕೊರೋನವೈರಸ್ ನಿರ್ಬಂಧಗಳು ಮತ್ತು ಲಾಕ್ಡೌನ್ಗಳಿಂದಾಗಿ ಆರ್ಥಿಕತೆಗಳು ಕುಸಿದಿರುವುದರಿಂದ ಯುರೋಪ್ನಲ್ಲಿ ಎಫ್ಡಿಐ ಹರಿವು ಶೇ.80ರಷ್ಟು ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಉತ್ತರ ಅಮೆರಿಕದಲ್ಲಿ ಶೇ.42ರಷ್ಟು ಕುಸಿತ ಕಂಡು ಬಂದಿದೆ ಎಂದು ವರದಿಯು ತಿಳಿಸಿದೆ.

ಏಷ್ಯಾದಲ್ಲಿ ಚೇತರಿಕೆಯ ಹಿನ್ನೆಲೆಯಲ್ಲಿ ಅಭಿವೃದ್ಧಿಶೀಲ ದೇಶಗಳಲ್ಲಿ ಎಫ್ಡಿಐಗಳ ಹರಿವು ಶೇ.8ರಷ್ಟು ಕಡಿಮೆ ಪ್ರಮಾಣದಲ್ಲಿ ಕುಸಿದಿದೆ. ವಾಸ್ತವದಲ್ಲಿ ಚೀನಾದಲ್ಲಿ ಹೂಡಿಕೆಗಳಲ್ಲಿ ಶೇ.6ರಷ್ಟು ಏರಿಕೆಯಾಗಿದೆ ಎಂದು ವರದಿಯು ಹೇಳಿದೆ.

ಅಭಿವೃದ್ಧಿಶೀಲ ದೇಶಗಳಲ್ಲಿ ಹೊಸದಾಗಿ ಪ್ರಕಟಿಸಲಾದ ಹಸಿರುಕ್ಷೇತ್ರ ಯೋಜನೆಗಳ ಸಂಖ್ಯೆ ಶೇ.42ರಷ್ಟು ಮತ್ತು ಅಂತರರಾಷ್ಟ್ರೀಯ ಯೋಜನೆ ಹಣಕಾಸು ವ್ಯವಹಾರಗಳ ಸಂಖ್ಯೆ ಶೇ.14ರಷ್ಟು ಇಳಿಕೆಯಾಗಿದೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News