ಕಾಶ್ಮೀರ: ಗಾಯಗಳಿಗೆ ಮದ್ದು ಹಚ್ಚುವ ಕೆಲಸ ನಡೆಯಲಿ

Update: 2021-06-24 05:32 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯೂ ಸೇರಿದಂತೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಪುನಾರಂಭಿಸುವ ಬಗ್ಗೆ ಸಮಾಲೋಚನೆ ನಡೆಸಲು ಪ್ರಧಾನಿ ಮೋದಿ ಜೂನ್ 24ರಂದು ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ. ರಾಷ್ಟ್ರೀಯ ಪಕ್ಷಗಳು ಮಾತ್ರವಲ್ಲದೆ ಸರ್ವ ಪಕ್ಷ ಸಭೆಯಲ್ಲಿ ಪಾಲ್ಗೊಳ್ಳಲು ಗುಪ್ಕರ್ ಒಕ್ಕೂಟವೂ ಸಮ್ಮತಿ ಸೂಚಿಸಿದೆ. ಕೇಂದ್ರ ಸರಕಾರ ಎರಡು ವರ್ಷಗಳ ಹಿಂದೆ ತೆಗೆದುಕೊಂಡ ತೀರ್ಮಾನದಿಂದಾಗಿ ಎಷ್ಟರ ಮಟ್ಟಿಗೆ ಕಾಶ್ಮೀರ ಭಾರತಕ್ಕೆ ಹತ್ತಿರವಾಗಿದೆ ಎನ್ನುವುದನ್ನು ಪರಾಮರ್ಶೆಗೆ ಒಳಪಡಿಸಲು ಈ ಸರ್ವಪಕ್ಷ ಸಭೆ ವೇದಿಕೆಯಾಗಲಿದೆ. ಕಳೆದ ಎರಡು ವರ್ಷಗಳಿಂದ ಕಾಶ್ಮೀರ ಸಂಪೂರ್ಣ ಲಾಕ್‌ಡೌನ್ ಸ್ಥಿತಿಯಲ್ಲಿದೆ ಮತ್ತು ಕಾಶ್ಮೀರ ಹೊರತುಪಡಿಸಿ ಇಡೀ ಭಾರತ ಈ ‘ಲಾಕ್‌ಡೌನ್’ನ್ನು ಸಂಭ್ರಮಿಸಿದೆ. 370ನೇ ವಿಧಿಯಡಿಯಲ್ಲಿರುವ ವಿಶೇಷ ಸ್ಥಾನಮಾನವನ್ನು ಕಿತ್ತುಕೊಳ್ಳುವ ಮೂಲಕ ಕಾಶ್ಮೀರವನ್ನು ಭಾರತದೊಂದಿಗೆ ಅಧಿಕೃತವಾಗಿ ವಿಲೀನಗೊಳಿಸಲಾಯಿತು ಎಂದು ಭಾರತದ ಬಹುತೇಕ ಜನರು ಬಲವಾಗಿ ನಂಬಿದ್ದಾರೆ. ಇದನ್ನು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಸಾಧನೆಯ ಪಟ್ಟಿಗೆ ಈಗಾಗಲೇ ಸೇರಿಸಲಾಗಿದೆ. ಆದರೆ ಇಡೀ ಕಾಶ್ಮೀರವನ್ನು ಸೇನೆಯ ಕೋವಿಯ ಮೊನೆಯಲ್ಲಿ ಮುನ್ನಡೆಸಲು ಸಾಧ್ಯವಿಲ್ಲ ಎನ್ನುವುದು ಮೋದಿ ಬಳಗಕ್ಕೂ ಅರ್ಥವಾದಂತಿದೆ.

ಈಗಾಗಲೇ ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಲ್ಲಿದೆ. ಅಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ವಿಶ್ವಸಂಸ್ಥೆಯೂ ಸೇರಿದಂತೆ ಮಾನವ ಹಕ್ಕು ಸಂಘಟನೆಗಳು ತಮ್ಮ ಆತಂಕಗಳನ್ನು ವ್ಯಕ್ತಪಡಿಸಿವೆ. ಕಾಶ್ಮೀರದ ಎಲ್ಲ ಪ್ರಜಾಸತ್ತಾತ್ಮಕ ಸ್ಥಾನಮಾನಗಳನ್ನು ಕಿತ್ತುಕೊಂಡ ಬಳಿಕ, ಸೇನೆಯು ಹಗಲು ರಾತ್ರಿ ಕಾವಲು ಕಾಯುತ್ತಿದೆ. ಶತ್ರು ದೇಶಗಳ ಗಡಿಯಲ್ಲಿಯೂ ಇಷ್ಟೊಂದು ಪ್ರಮಾಣದಲ್ಲಿ ಸೇನೆಯನ್ನು ನೆಲೆಗೊಳಿಸಿಲ್ಲ ಎಂದ ಮೇಲೆ, ಕಾಶ್ಮೀರ ಸಂಪೂರ್ಣವಾಗಿ ಭಾರತದೊಂದಿಗೆ ವಿಲೀನವಾಗಿದೆ ಎನ್ನುವ ಮಾತಿನಲ್ಲಿ ಅರ್ಥವೇನಿದೆ? ಕಾಶ್ಮೀರವನ್ನು ಸಂಪೂರ್ಣ ಭಾರತದ ಜೊತೆಗೆ ಸೇರಿಸಿಕೊಳ್ಳಲಾಗಿದೆ ಎಂದಾದರೆ, ಅಲ್ಲಿ ಸೇನೆಯ ಸಂಖ್ಯೆಯಲ್ಲಿ ಇಳಿಕೆಯಾಗಬೇಕಾಗಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಭಾರತದ ರಾಜಕೀಯ ನಾಯಕರೇ ಕಾಶ್ಮೀರದಲ್ಲಿ ಮುಕ್ತವಾಗಿ ಓಡಾಡುವಂತಹ ಸ್ಥಿತಿಯಿಲ್ಲ.

ಕಾಶ್ಮೀರಕ್ಕೆ ಕಾಲಿಡದಂತೆ ಕಳೆದ ಎರಡು ವರ್ಷಗಳಿಂದ ಇವರನ್ನೆಲ್ಲ ಯಾವ ಕಾರಣಕ್ಕೆ ತಡೆಯಲಾಗಿದೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕಾಶ್ಮೀರದಲ್ಲಿ ಉಗ್ರರ ಹಿಂಸಾಚಾರ ಮುಂದುವರಿದಿದೆ. ಜನರೊಳಗೆ ಅಸಮಾಧಾನ ಕುದಿಯುತ್ತಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಇದರ ಕುರಿತಂತೆ ಎರಡು ಮಾತಿಲ್ಲ. ಆದರೆ ಎಲ್ಲಿಯವರೆಗೆ ಕಾಶ್ಮೀರದಲ್ಲಿ ಪ್ರಜಾಸತ್ತಾತ್ಮಕ ವಾತಾವರಣ ಪಸರಿಸುವುದಿಲ್ಲವೋ ಅಲ್ಲಿಯವರೆಗೆ ಕಾಶ್ಮೀರ ಭೌಗೋಳಿಕವಾಗಿಯಷ್ಟೇ ಭಾರತಕ್ಕೆ ಸೇರಿರುತ್ತದೆ. ಮಾನಸಿಕವಾಗಿ ಭಾರತದೊಂದಿಗೆ ಅಂತರ ಬಿಗಡಾಯಿಸುತ್ತಾ ಹೋಗುತ್ತದೆ. ಜೂ. 24ರಂದು ನಡೆಯಲಿರುವ ಸರ್ವ ಪಕ್ಷ ಸಭೆಯಲ್ಲಿ ಮೇಲಿನ ಎಲ್ಲ ವಿಷಯಗಳು ಚರ್ಚೆಗೆ ಬರಲಿವೆ. ಆದರೆ ಈ ಸಭೆ ಎಷ್ಟರ ಮಟ್ಟಿಗೆ ಯಶಸ್ವಿಯಾದೀತು ಎನ್ನುವ ಬಗ್ಗೆ ಅನುಮಾನಗಳಿವೆ.

ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸರಕಾರ ಕಾಶ್ಮೀರದ ವಿಷಯದಲ್ಲಿ ಸರ್ವಪಕ್ಷ ಸಭೆಯನ್ನು ಕರೆದಿದೆ. ಕೇಂದ್ರ ಸರಕಾರ ಕಾಶ್ಮೀರದ ಜನರ ಜೊತೆಗೆ ಯಾವ ರೀತಿಯಲ್ಲೂ ಸಮಾಲೋಚನೆ ನಡೆಸದೇ ಏಕ ಮುಖವಾಗಿ ನಿರ್ಧಾರವನ್ನು ತೆಗೆದುಕೊಂಡ ಕುರಿತಂತೆ ಗುಪ್ಕರ್ ಒಕ್ಕೂಟಕ್ಕೆ ಅಸಮಾಧಾನವಿದೆ. ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವುದಷ್ಟೇ ಅಲ್ಲ, 370ನೇ ವಿಧಿಯನ್ನು ಮರುಸ್ಥಾಪಿಸಬೇಕು ಎಂದೂ ಗುಪ್ಕರ್ ಒಕ್ಕೂಟ ಬೇಡಿಕೆ ಮುಂದಿಟ್ಟಿದೆ. ಈ ಬೇಡಿಕೆಗೆ ಕೇಂದ್ರ ಸರಕಾರದ ಸ್ಪಂದನ ಋಣಾತ್ಮಕವಾಗಿರುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. 370ನೇ ವಿಧಿಯ ಸ್ಥಾಪನೆಗೆ ಒಂದು ಹಿನ್ನೆಲೆಯಿದೆ. ಜಮ್ಮು-ಕಾಶ್ಮೀರ ವಿಲೀನಗೊಳ್ಳುವ ಸಂದರ್ಭದಲ್ಲಿ ರಾಜಾ ಹರಿಸಿಂಗ್ ತನ್ನ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ. ಆದರೆ ಕಾಶ್ಮೀರದ ಜನರು ರಾಜಾ ಹರಿಸಿಂಗ್ ವಿರುದ್ಧ ಒಂದು ಆಂದೋಲನವನ್ನೇ ಆರಂಭಿಸಿದರು. ಕಾಶ್ಮೀರ-ಭಾರತಕ್ಕೆ ಸೇರ್ಪಡೆಗೊಳ್ಳುವಲ್ಲಿ ಶೇಖ್ ಅಬ್ದುಲ್ಲಾ ಅವರ ಪಾತ್ರವನ್ನು ಭಾರತ ಎಂದಿಗೂ ಮರೆಯಬಾರದು. ಹಾಗೆಯೇ, 370ನೇ ವಿಧಿಯ ಕೆಲವು ನಿಬಂಧನೆಗಳು ಮತ್ತು ಶರತ್ತುಗಳನ್ನು ಮುಂದಿಟ್ಟು ಜಮ್ಮು-ಕಾಶ್ಮೀರವು ಭಾರತದೊಂದಿಗೆ ವಿಲೀನಗೊಂಡಿತು. ಒಂದು ವೇಳೆ 370ನೇ ವಿಧಿಯನ್ನು ಹಿಂದೆಗೆಯುವುದೇ ಆಗಿದ್ದರೂ ಕಾಶ್ಮೀರದ ಜನರೊಂದಿಗೆ, ಅವರನ್ನು ಪ್ರತಿನಿಧಿಸುವ ಜನನಾಯಕರೊಂದಿಗೆ ಸಮಾಲೋಚಿಸಿ, ಮನವೊಲಿಸಿ ಹಿಂದೆಗೆಯಬೇಕಾಗುತ್ತದೆ. ಇಂದು ಭಾರತ ನಮಗೆ ವಂಚಿಸಿದೆ ಎನ್ನುವ ಮನೋಭಾವ ಕಾಶ್ಮೀರಿಗಳಲ್ಲಿದೆ. ಆ ಅಸಮಾಧಾನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಯಾವ ಕ್ರಮವನ್ನು ತೆಗೆದುಕೊಳ್ಳುತ್ತದೆ ಎನ್ನುವ ಆಧಾರದಲ್ಲಿ ಸಭೆಯ ಯಶಸ್ಸು ನಿಂತಿದೆ.

ಇಷ್ಟಕ್ಕೂ ವಿಶೇಷ ಸ್ಥಾನಮಾನವನ್ನು ಈ ದೇಶದಲ್ಲಿ ಕಾಶ್ಮೀರಕ್ಕಷ್ಟೇ ನೀಡಿರುವುದಲ್ಲ. ಈಶಾನ್ಯದ ಹಲವು ರಾಜ್ಯಗಳಿಗೆ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ. ಕೆಲವು ರಾಜ್ಯಗಳನ್ನು ಮೇಲೆತ್ತುವ ನಿಟ್ಟಿನಲ್ಲಿ ಈ ವಿಶೇಷ ಸ್ಥಾನಮಾನಗಳು ಬಹಳಷ್ಟು ಕೆಲಸ ಮಾಡುತ್ತವೆ. ಕಾಶ್ಮೀರವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುವ ಮಹತ್ತರ ಉದ್ದೇಶ ಸರಕಾರದ ಮುಂದಿದೆ. ಸೇನೆಯ ನೆರಳಿನಲ್ಲಿ ಈ ಅಭಿವೃದ್ಧಿ ಸಾಧ್ಯವಿಲ್ಲ. ಸೇನೆಯನ್ನು ತೋರಿಸಿ ಅಲ್ಲಿ ಉಗ್ರವಾದಿಗಳು, ಪ್ರತ್ಯೇಕವಾದಿಗಳು ಕಾಶ್ಮೀರಿಗಳನ್ನು ದಾರಿತಪ್ಪಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚುವುದು ಅಲ್ಲಿನ ಉಗ್ರವಾದಿಗಳು, ಪ್ರತ್ಯೇಕತಾವಾದಿಗಳಿಗೆ ಅಗತ್ಯ. ಅಲ್ಲಿ ಶಾಂತಿ ನೆಲೆಸಿದಷ್ಟು, ಅಭಿವೃದ್ಧಿಯ ಕೆಲಸ ನಡೆದಷ್ಟೂ ಉಗ್ರವಾದಿಗಳಿಗೆ ಹಿನ್ನಡೆಯಾಗುತ್ತದೆ.

ಆದುದರಿಂದ, ಭೌಗೋಳಿಕವಾಗಿ ಕಾಶ್ಮೀರವನ್ನು ತನ್ನದಾಗಿಸುವ ಆತುರದಲ್ಲಿ, ಕಾಶ್ಮೀರಿಯತ್‌ಗೆ ಗಾಯಗಳನ್ನು ಮಾಡಬಾರದು ಅಥವಾ ಈಗಾಗಲೇ ಅಂತಹ ಗಾಯಗಳು ಆಗಿದ್ದಿದ್ದರೆ ಅದಕ್ಕೆ ಮದ್ದು ಹಚ್ಚುವ ಕೆಲಸ ನಡೆಯಬೇಕು. ಈ ಕೆಲಸ ನಡೆಯಬೇಕಾದರೆ ಜಮ್ಮು-ಕಾಶ್ಮೀರದಲ್ಲಿ ಪ್ರಜಾಸತ್ತಾತ್ಮಕ ಚಟುವಟಿಕೆಗಳು ಗರಿಗೆದರಬೇಕು. ಇದಕ್ಕಾಗಿ ಅಲ್ಲಿನ ಜನ ನಾಯಕರೊಂದಿಗೆ ಮಾತುಕತೆ ನಡೆಸಿ, ಅವರ ಮನವೊಲಿಸುವ ಒಂದೇ ಒಂದು ದಾರಿ ಕೇಂದ್ರ ಸರಕಾರದ ಮುಂದಿದೆ. ಆದುದರಿಂದ ಮೊದಲು ಕಾಶ್ಮೀರದ ನಾಯಕರ ಮಾತುಗಳನ್ನು, ಒಳಬೇಗುದಿಗಳನ್ನು ಸಹನೆಯಿಂದ ಆಲಿಸುವ ಕೆಲಸ ಕೇಂದ್ರದಿಂದ ನಡೆಯಬೇಕು. ತಾಳ್ಮೆ, ವಿವೇಕದ ಕೈಗೆ ಬುದ್ಧಿಕೊಟ್ಟಲ್ಲಿ ಕಾಶ್ಮೀರದ ಕುರಿತಂತೆ ಪರಿಹಾರದ ದಾರಿಗಳು ವಿಶಾಲವಾಗುತ್ತಾ ಹೋಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News