ಮೈಸೂರಿಗೆ ಜೂ.28ರಿಂದ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭ

Update: 2021-06-26 11:12 GMT

ಬೆಂಗಳೂರು, ಜೂ. 26: `ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿದ್ದು, ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಮೈಸೂರಿಗೆ ನಾಳೆ(ಜೂ.28) ಬೆಳಗ್ಗೆ 6ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಬಸ್ ಸಂಚಾರ ಆರಂಭಿಸಲಾಗುವುದು' ಎಂದು ಕೆಎಸ್ಸಾರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.

ಲಾಕ್‍ಡೌನ್ ನಿರ್ಬಂಧದ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ಮೈಸೂರಿಗೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಇರಲಿಲ್ಲ. ಇದೀಗ ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.10ಕ್ಕಿಂತ ಕಡಿಮೆಯಾಗಿದ್ದು, ಕೋವಿಡ್ ನಿರ್ಬಂಧವನ್ನು ಸರಕಾರ ಸಡಿಲಿಸಿದೆ. ಹೀಗಾಗಿ ಪ್ರಯಾಣಿಕರ ಬೇಡಿಕೆಯನ್ನು ಆಧರಿಸಿ ಶೇ.50ರಷ್ಟು ಆಸನ ಸಾಮರ್ಥ್ಯದೊಂದಿಗೆ ಸೋಮವಾರದಿಂದ ಬಸ್‍ಗಳ ಕಾರ್ಯಾಚರಣೆ ಮಾಡಲಿವೆ ಎಂದು ತಿಳಿಸಲಾಗಿದೆ.

ಸಾರ್ವಜನಿಕ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದರ ಜೊತೆಗೆ ಸರಕಾರದ ಮಾರ್ಗಸೂಚಿ ಪಾಲಿಸುವ ಮೂಲಕ ಕೋವಿಡ್ ಸೋಂಕು ಹರಡದಂತೆ ತಡೆಗಟ್ಟಬೇಕು ಎಂದು ಕೆಎಸ್ಸಾರ್ಟಿಸಿ ಪ್ರಕಟಣೆಯಲ್ಲಿ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News