ಸಾರಿಗೆ ಇಲಾಖೆಗೆ 4 ಸಾವಿರ ಕೋಟಿ ರೂ. ನಷ್ಟ: ಸಾರಿಗೆ ಸಚಿವ ಲಕ್ಷ್ಮಣ ಸವದಿ

Update: 2021-06-26 11:29 GMT

ಬೆಳಗಾವಿ, ಜೂ. 26: `ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಒಂದು ವರ್ಷದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಸೇರಿದಂತೆ ಸಾರಿಗೆ ಇಲಾಖೆಗೆ ಒಟ್ಟು 4 ಸಾವಿರ ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ. ಇದರ ಜೊತೆಗೆ ಅತಿವೃಷ್ಟಿಯೂ ಸಾರಿಗೆ ಇಲಾಖೆಯನ್ನು ಕಷ್ಟಕ್ಕೆ ಸಿಲುಕಿಸಿದೆ' ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 'ಸಾರಿಗೆ ಇಲಾಖೆಯ ಕಾರ್ಯಚರಣೆ ಕುಂಠಿತ ಆಗಿದೆ. ಅತಿವೃಷ್ಟಿ ಹಾಗೂ ಕೊರೋನ ಸೋಂಕಿನ ಸಮಸ್ಯೆ, ಇಲಾಖೆ ಸಿಬ್ಬಂದಿ ಮುಷ್ಕರ ಬಳಿಕ, ಸುದೀರ್ಘಾವಧಿ ಲಾಕ್‍ಡೌನ್ ಘೋಷಣೆ ಹಿನ್ನೆಲೆಯಲ್ಲಿ ಸರಕಾರಕ್ಕೆ ಹೆಚ್ಚು ನಷ್ಟ ಸಾರಿಗೆ ಇಲಾಖೆಯಿಂದಲೇ ಆಗಿದೆ. ಆದರೂ, 2,600 ಕೋಟಿ ರೂ. ಮೊತ್ತದ ಸಂಬಳ ನೀಡಲಾಗಿದೆ' ಎಂದು ತಿಳಿಸಿದರು.

'ಕೋವಿಡ್ ನಿರ್ಬಂಧದ ಹಿನ್ನೆಲೆಯಲ್ಲಿ ಶೇ.50ರಷ್ಟು ಪ್ರಯಾಣಿಕರು ಸಾರಿಗೆ ವಾಹನಗಳಲ್ಲಿ ಸಂಚರಿಸಲು ಅವಕಾಶವಿದ್ದು, ಈಗ ಬರುವ ಆದಾಯ ಇಂಧನಕ್ಕೂ ಸಾಕಾಗುತ್ತಿಲ್ಲ. ಇನ್ನೂ ಮೂರು-ನಾಲ್ಕು ತಿಂಗಳು ಹೆಚ್ಚಿನ ಪ್ರಯಾಣಿಕರು ಸಂಚರಿಸಲು ಅವಕಾಶವಿಲ್ಲ. ಸರಕಾರಕ್ಕೆ ನಷ್ಟವಾದರೂ ಜನರ ಆರೋಗ್ಯವೇ ನಮಗೆ ಮುಖ್ಯ. ಹೀಗಾಗಿ ಪ್ರಯಾಣಿಕರ ಸುರಕ್ಷತೆಯನ್ನು ಆಧರಿಸಿ ಸಾರಿಗೆ ಬಸ್ ಸಂಚಾರಕ್ಕೆ ಕ್ರಮ ವಹಿಸಲಾಗಿದೆ' ಎಂದು ಅವರು ಹೇಳಿದರು.

ಸರಕಾರದ ಏಳಿಗೆ ಸಹಿಸದ ಕೆಲಪಟ್ಟಭದ್ರ ಹಿತಾಸಕ್ತಿಗಳ ಸಾರಿಗೆ ಸಂಸ್ಥೆಯಲ್ಲಿ ಮತ್ತೆ ಮುಷ್ಕರಕ್ಕೆ ಹುನ್ನಾರ ನಡೆಸಿವೆ. ಮುಂದಿನ ದಿನಗಳಲ್ಲಿ ಇದರ ಹಿಂದೆ ಯಾರು ಇದ್ದಾರೆಂಬುದು ಗೊತ್ತಾಗಲಿದೆ. ಸಾರಿಗೆ ಸಂಸ್ಥೆ ಸಿಬ್ಬಂದಿ ಹೊರಗಿನ ಹಿತಕ್ಕೆ ಮಣಿಯದೆ ಸಂಕಷ್ಟದ ಸಂದರ್ಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾರ್ವಜನಿಕರ ಸೇವೆಗೆ ಸನ್ನದ್ದರಾಗಬೇಕು ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಮಹಾರಾಷ್ಟ್ರ ರಾಜ್ಯದಲ್ಲಿ ಡೆಲ್ಟಾ ಫ್ಲಸ್ ಎಂಬ ರೂಪಾಂತರಿ ಕೊರೋನ ಪ್ರಕರಣ ಪತ್ತೆ ಆಗುತ್ತಿದೆ. ಅಂತರ ರಾಜ್ಯ ಸಾರಿಗೆ ಸಂಚಾರವನ್ನು ಆರಂಭಿಸಲಾಗಿದೆ. ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ. ವರದಿ ಇಲ್ಲದೆ ರಾಜ್ಯಕ್ಕೆ ಪ್ರವೇಶ ನೀಡುವುದಿಲ್ಲ. ರಾಜ್ಯದ ಗಡಿ ಜಿಲ್ಲೆಗಳಾದ ಬೀದರ್, ಕಲಬುರಗಿ ಹಾಗೂ ಬೆಳಗಾವಿ ಮಹಾರಾಷ್ಟ್ರ ರಾಜ್ಯದೊಂದಿಗೆ ಸಂಪರ್ಕ ಇರುವುದರಿಂದ ನಿಗಾ ವಹಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News