ನಕಲಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದ ತೃಣಮೂಲ ಸಂಸದೆ ಮಿಮಿ ಚಕ್ರವರ್ತಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

Update: 2021-06-26 12:09 GMT

ಕೊಲ್ಕತ್ತಾ : ನಾಲ್ಕು ದಿನಗಳ ಹಿಂದೆ ನಕಲಿ ಐಎಎಸ್ ಅಧಿಕಾರಿಯೊಬ್ಬ ಆಯೋಜಿಸಿದ್ದ  ಕೋವಿಡ್ ಲಸಿಕಾ ಶಿಬಿರದಲ್ಲಿ ಲಸಿಕೆ ಪಡೆದುಕೊಂಡಿದ್ದ ತೃಣಮೂಲ ಕಾಂಗ್ರೆಸ್ ಪಕ್ಷ ಸಂಸದೆ ಮಿಮಿ ಚಕ್ರವರ್ತಿ ಅನಾರೋಗ್ಯಕ್ಕೀಡಾಗಿ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಪಶ್ಚಿಮ ಬಂಗಾಳದ ಜಾದವಪುರ್ ಕ್ಷೇತ್ರ ಸಂಸದೆಯಾಗಿರುವ ಮಿಮಿ ಅವರ ಅನಾರೋಗ್ಯಕ್ಕೆ ಅವರು ತೆಗೆದುಕೊಂಡಿದ್ದ ನಕಲಿ ಲಸಿಕೆ ಕಾರಣ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಆಕೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ.

ಮಿಮಿ ಅವರು ಡೀಹೈಡ್ರೇಶನ್, ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ ಹಾಗೂ ಆಕೆಯ ರಕ್ತದೊತ್ತಡ ಕೂಡ ಕುಸಿದಿದೆ ಆದರೆ ಆಕೆಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ನಟಿಗೆ ಪಿತ್ತಕೋಶದ ಮತ್ತು ಲಿವರ್ ಸಂಬಂಧಿ ಸಮಸ್ಯೆಗಳಿವೆ ಎಂದು ಈ ಹಿಂದೆಯೇ ಪತ್ತೆಯಾಗಿತ್ತು.

ಮಿಮಿ ಚಕ್ರವರ್ತಿ ಸಹಿತ ಸಾವಿರಾರು ಮಂದಿಗೆ ಕೊಲ್ಕತ್ತಾದಲ್ಲಿ ಲಸಿಕೆ ನೀಡಿಕೆ ಕಾರ್ಯದ ಉಸ್ತುವಾರಿ ವಹಿಸಿಕೊಂಡಿದ್ದ ಹಾಗೂ ತಾನೊಬ್ಬ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದ ದೇಬಾಂಜನ್ ದೇಬ್ ಎಂಬಾತನನ್ನು ಬುಧವಾರವೇ ಬಂಧಿಸಲಾಗಿದೆ. ಆತ ಆಯೋಜಿಸಿದ್ದ ಶಿಬಿರವೊಂದರಲ್ಲಿ ಮಿಮಿ ಲಸಿಕೆ ಪಡೆದುಕೊಂಡಿದ್ದರು. ಕೊಲ್ಕತ್ತಾ ನಗರಪಾಲಿಕೆ ಈ ಲಸಿಕೆ ಶಿಬಿರ ನಡೆಸುತ್ತಿದೆ ಎಂದು ಆತ ಹೇಳಿದ್ದ ಹಾಗೂ ಲಸಿಕೆ ಪಡೆದು ಇತರರನ್ನು ಹುರಿದುಂಬಿಸಲು ಕೋರಿದ್ದ ಎಂದು ಮಿಮಿ ಹೇಳಿದ್ದರು.

ಆದರೆ ಲಸಿಕೆ ಪಡೆದ ನಂತರ ಕೋವಿನ್ ಆ್ಯಪ್‍ನಲ್ಲಿ ದೃಢೀಕರಣ ಸಂದೇಶ ಬಾರದೇ ಇದ್ದುದರಿಂದ ಮಿಮಿ ಅವರಿಗೆ ಸಂಶಯ ಉಂಟಾಗಿತ್ತು.

ಆರೋಪಿಯು ಜನರಿಗೆ ಅಮಿಕಸಿನ್ ಎಂಬ ಆಂಟಿಬಯೋಟಿಕ್ ಅನ್ನು ಲಸಿಕೆ ಎಂಬ ಹೆಸರಿನಲ್ಲಿ ನೀಡಿದ್ದನೆಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News