ಶೀಘ್ರದಲ್ಲೆ ಮುಂದಿನ ರಾಜಕೀಯ ತೀರ್ಮಾನ ಪ್ರಕಟ: ಮಾಜಿ ಸಚಿವ ರಮೇಶ್ ಜಾರಕಿಹೊಳಿ

Update: 2021-06-26 13:05 GMT

ಬೆಳಗಾವಿ, ಜೂ. 26: `ಇನ್ನು ಎಂಟು-ಹತ್ತು ದಿನಗಳಲ್ಲಿ ನನ್ನ ಮುಂದಿನ ರಾಜಕೀಯ ತೀರ್ಮಾನವನ್ನು ಪ್ರಕಟಿಸುತ್ತೇನೆ' ಎಂದು ಮಾಜಿ ಸಚಿವ ಹಾಗೂ ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳುವ ಮೂಲಕ ರಾಜಕೀಯ ಸಂಚಲನ ಸೃಷ್ಟಿಸಿರುವುದಲ್ಲದೆ, ತೀವ್ರ ಕುತೂಹಲ ಮೂಡಿಸಿದ್ದಾರೆ.

ಶನಿವಾರ ಜಿಲ್ಲೆಯ ಅಥಣಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಇನ್ನೂ ಎಂಟತ್ತು ದಿನಗಳಲ್ಲಿ ನನ್ನ ರಾಜಕೀಯ ನಿರ್ಣಯ ತೆಗೆದುಕೊಳ್ಳುತ್ತೇನೆ. ಅಲ್ಲಿಯ ವರೆಗೆ ಯಾವುದೇ ರೀತಿ ಹೇಳಿಕೆಗಳನ್ನು ನಾನು ನೀಡುವುದಿಲ್ಲ. ಈ ಕುರಿತು ಹಿರಿಯರು ಖಾರವಾಗಿ ಹೇಳಿದ್ದಾರೆ. ಹೀಗಾಗಿ ನಾನು ಸದ್ಯ ಯಾವುದೇ ಹೇಳಿಕೆ ನೀಡುವುದಿಲ್ಲ. ನಿನ್ನೆ ನಾನು ನೀಡಿರುವ ಹೇಳಿಕೆಗಳಿಗೆ ಬದ್ಧನಿದ್ದೇನೆ' ಎಂದು ಸ್ಪಷ್ಟಪಡಿಸಿದರು.

ಮೈಸೂರಿನ ಸುತ್ತೂರು ಶ್ರೀಗಳ ಪೂರ್ವಾಶ್ರಮದ ಅವರ ತಾಯಿ ಸಾವನ್ನಪ್ಪಿದ ಕಾರಣ ನಿನ್ನೆ ಮಠಕ್ಕೆ ತೆರಳಿದ್ದೆ. ಅದರಲ್ಲಿ ಏನೂ ರಾಜಕೀಯ ಇಲ್ಲ. ಅಥಣಿಯಲ್ಲಿನ ಆರೆಸೆಸ್ಸ್ ಪ್ರಮುಖರ ಭೇಟಿಯಲ್ಲಿಯೂ ಯಾವುದೇ ವಿಶೇಷವಿಲ್ಲ. ಇಂದೂ ಕೋವಿಡ್ ಸೋಂಕಿನಿಂದ ಮೃತಪಟ್ಟ ಆಪ್ತರ ಮನೆಗೆ ಭೇಟಿ ನೀಡಿದ್ದೇನೆ. ಆದರೆ, ಯಾವುದೇ ರಾಜಕೀಯ ವಿಚಾರಕ್ಕೆ ನಾನು ಈಗ ತಲೆಕೆಡಿಸಿಕೊಂಡಿಲ್ಲ' ಎಂದು ರಮೇಶ್ ಜಾರಕಿಹೊಳಿ ವಿವರಣೆ ನೀಡಿದರು.

''ನನಗೆ ಸರಕಾರವನ್ನು ತೆಗೆದು, ಸರಕಾರವನ್ನು ಅಧಿಕಾರಕ್ಕೆ ತರುವ ಶಕ್ತಿ ಇದೆ. ಹೀಗಾಗಿ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದಿಲ್ಲ. ಬೇರೆಯವರಿಗೆ ಸಚಿವ ಸ್ಥಾನ ಕೊಡಿಸುವ ಶಕ್ತಿಯನ್ನು ನಮಗೆ ದೇವರು ನೀಡಿದ್ದಾನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ತೀರ್ಮಾನ ಮಾಡಿದ್ದು ಸತ್ಯ. ಆದರೆ, ಕೆಲ ಹಿರಿಯರ ಸಲಹೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಆ ನಿರ್ಧಾರವನ್ನು ಕೈಬಿಟ್ಟಿದ್ದೇನೆ'' ಎಂದು ರಮೇಶ್ ಜಾರಕಿಹೊಳಿ ನಿನ್ನೆಯಷ್ಟೇ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News