ಲೈಂಗಿಕ ಅಲ್ಪಸಂಖ್ಯಾತರಿಗೆ ಶೇ.1ರಷ್ಟು ಮೀಸಲಾತಿ, ತ್ವರಿತ ಅನುಷ್ಠಾನಕ್ಕೆ ಆಗ್ರಹ

Update: 2021-06-26 16:54 GMT

ಬೆಂಗಳೂರು, ಜೂ. 26: `ಸರಕಾರಿ ಉದ್ಯೋಗದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಶೇ.1ರಷ್ಟು ಮೀಸಲಾತಿ ನೀಡಲು ರಾಜ್ಯ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಅದನ್ನು ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ಸರಕಾರ ಕ್ರಮ ವಹಿಸಬೇಕು' ಎಂದು ರೀಚ್ ಲಾಯರ್ ಸಂಸ್ಥೆ ಸಂಸ್ಥಾಪಕ ಹಾಗೂ ಹೈಕೋರ್ಟ್‍ನ ಹಿರಿಯ ವಕೀಲ ಬಿ.ಟಿ.ವೆಂಕಟೇಶ್ ಆಗ್ರಹಿಸಿದ್ದಾರೆ.

`2014ರ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ತೀರ್ಪಿನ ಅನ್ವಯ ಮತ್ತು ಸುಪ್ರೀಂಕೋರ್ಟ್ ಸೂಚನೆ ಅನುಸಾರ ರಾಜ್ಯ ಸರಕಾರ ಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗದಲ್ಲಿ ಮೀಸಲಾತಿ ಒದಗಿಸುವ ಕಾನೂನು ಅನುಷ್ಠಾನಕ್ಕೆ ತಂದರೆ ದೇಶದಲ್ಲೆ ಮಾದರಿಯಾಗಲಿದೆ. ಮಾತ್ರವಲ್ಲ, ಮಾನವ ಹಕ್ಕುಗಳನ್ನು ಎತ್ತಿ ಹಿಡಿದಂತೆ ಆಗುತ್ತದೆ. ಜೊತೆಗೆ ಲೈಂಗಿಕ ಅಲ್ಪಸಂಖ್ಯಾತರ ಬಹುದಿನ ಬೇಡಿಕೆ ಈಡೇರಿಸಿದಂತೆ ಆಗುತ್ತದೆ' ಎಂದು ಅವರು ಗಮನ ಸೆಳೆದಿದ್ದಾರೆ.

`ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಡಾ.ಸಿ.ಎಸ್. ದ್ವಾರಕಾನಾಥ್ ಈ ಹಿಂದೆ ಶಿಫಾರಸ್ಸು ಮಾಡಿದ್ದರು. ಸರಕಾರದ ನೀತಿ-ನಿರ್ಣಯಗಳಲ್ಲಿ ಇವರನ್ನು ಪರಿಗಣಿಸಬೇಕೆಂದು ಆ ಸಮುದಾಯದ ಹಲವು ಸಂಘಟನೆಗಳು ಬಹಳ ದಿನಗಳಿಂದ ಹೋರಾಟವನ್ನು ನಡೆಸುತ್ತಿದ್ದಾರೆ' ಎಂದು ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News