ಈ ಐದು ಪ್ರಾಥಮಿಕ ಮುನ್ನೆಚ್ಚರಿಕೆಗಳು ನಿಮ್ಮನ್ನು ನಕಲಿ ಲಸಿಕೆ ವಂಚಕರಿಂದ ರಕ್ಷಿಸಬಲ್ಲವು

Update: 2021-06-27 11:29 GMT

ಮುಂಬೈ ಮತ್ತು ಕೋಲ್ಕತಾಗಳಲ್ಲಿ ತನಿಖಾ ಸಂಸ್ಥೆಗಳು ಹಲವಾರು ನಕಲಿ ಕೋವಿಡ್ ಲಸಿಕೆ ಶಿಬಿರಗಳನ್ನು ಬಯಲಿಗೆಳೆದಿವೆ. ಇಂತಹ ನಕಲಿ ಶಿಬಿರಗಳು ದೇಶದ ಇತರ ಭಾಗಗಳಲ್ಲಿಯೂ ಅಮಾಯಕರನ್ನು ವಂಚಿಸುವ ಹೆಚ್ಚಿನ ಸಾಧ್ಯತೆಗಳಿವೆ. ಮುಂಬೈ ಮತ್ತು ಕೋಲ್ಕತಾಗಳಲ್ಲಿ ಹಲವಾರು ಹೌಸಿಂಗ್ ಸೊಸೈಟಿಗಳನ್ನು ಗುರಿಯಾಗಿಸಿಕೊಂಡು ಈ ವಂಚನೆ ನಡೆದಿದೆ. ಹೌಸಿಂಗ್ ಸೊಸೈಟಿಗಳು ತಮ್ಮ ನಿವಾಸಿಗಳ ಅನುಕೂಲಕ್ಕಾಗಿ ಲಸಿಕೆ ಶಿಬಿರಗಳನ್ನು ನಡೆಸಲು ಅವಕಾಶ ನೀಡುತ್ತವೆ.

ಇಂದು ಅಪಾರ್ಟ್ ಮೆಂಟ್ ಗಳು ಸಣ್ಣಪುಟ್ಟ ನಗರಗಳಲ್ಲಿಯೂ ತಲೆಯೆತ್ತುತ್ತಿವೆ ಮತ್ತು ವಂಚಕರ ಕಣ್ಣು ಇವುಗಳ ಮೇಲೂ ಬೀಳಬಹುದು. ಬಹಳಷ್ಟು ಜನರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಲು ಕಾತುರರಾಗಿದ್ದು, ಇಂತಹ ನಕಲಿ ಲಸಿಕೆ ಘಟನೆಗಳನ್ನು ತಡೆಯಲು ಅವರು ಕೆಲವು ಪ್ರಾಥಮಿಕ ಮುನ್ನೆಚ್ಚರಿಕೆಗಳನ್ನು ವಹಿಸುವುದು ಅಗತ್ಯವಾಗಿದೆ. ನಕಲಿ ಲಸಿಕೆ ವಂಚಕರಿಂದ ಜನರನ್ನು ರಕ್ಷಿಸಬಲ್ಲ ಅಂತಹ ಕೆಲವು ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿಯಿಲ್ಲಿದೆ.....

 *► ಖಾಸಗಿ ಲಸಿಕೆ ಶಿಬಿರದಲ್ಲಿ ಲಸಿಕೆಯನ್ನು ಹಾಕಿಸಿಕೊಳ್ಳುವ ತಮ್ಮ ಯೋಜನೆಯ ಬಗ್ಗೆ ಹೌಸಿಂಗ್ ಸೊಸೈಟಿ ಸದಸ್ಯರು ಮತ್ತು ಅಪಾರ್ಟ್ಮೆಂಟ್ಗಳಲ್ಲಿ ವಾಸವಿರುವ ಜವಾಬ್ದಾರಿಯುತ ವ್ಯಕ್ತಿಗಳು ಸ್ಥಳೀಯ ಮುನ್ಸಿಪಲ್ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮುನ್ಸಿಪಲ್ ಅಥವಾ ಸ್ಥಳೀಯ ಆರೋಗ್ಯ ಅಧಿಕಾರಿಗಳು ಅನುಮೋದಿಸದಿದ್ದರೆ ಇಂತಹ ಶಿಬಿರಗಳು ಸೊಸೈಟಿಯ ಆವರಣದಲ್ಲಿ ತಮ್ಮ ಲಸಿಕೆ ನೀಡಿಕೆ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಕೂಡದು.

*► ಸಾಧ್ಯವಿದ್ದರೆ ಹೌಸಿಂಗ್ ಸೊಸೈಟಿಗಳು ಅಥವಾ ಕಾರ್ಪೊರೇಟ್ ಕಂಪನಿಗಳು ತಮ್ಮ ಆವರಣದಲ್ಲಿ ಲಸಿಕೆ ನೀಡಿಕೆ ಕೇಂದ್ರವನ್ನು ತೆರೆಯಲು ಖಾಸಗಿ ಆಸ್ಪತ್ರೆಗಳೊಂದಿಗೆ ನೇರವಾಗಿ ಒಪ್ಪಂದ ಮಾಡಿಕೊಳ್ಳಬೇಕು. ಇದರಿಂದ ಖಾಸಗಿ ಆಸ್ಪತ್ರೆಗಳೊಂದಿಗೆ ಗುರುತಿಸಿಕೊಂಡಿದ್ದೇವೆ ಎಂದು ಪರಿಚಯಿಸಿಕೊಳ್ಳುವ ವಂಚಕರು ಖಾಸಗಿ ಆಸ್ಪತ್ರೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರನ್ನು ವಂಚಿಸಲು ಅವಕಾಶ ದೊರೆಯುವುದಿಲ್ಲ.

*►  ವ್ಯಕ್ತಿಗತವಾಗಿ ಎಲ್ಲ ಫಲಾನುಭವಿಗಳು ತಮ್ಮ ವೈಯಕ್ತಿಕ ವಿವರಗಳು ಕೋವಿನ್ ಪೋರ್ಟಲ್ನಲ್ಲಿ ನೋಂದಾವಣೆಯಾಗಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಕೋವಿನ್ ವ್ಯಾಕ್ಸಿನ್ ಪೋರ್ಟಲ್ನಲ್ಲಿ ನೋಂದಣಿಯಾಗಿರದ ಕೇಂದ್ರದಲ್ಲಿ ಲಸಿಕೆಯನ್ನೆಂದೂ ಹಾಕಿಸಿಕೊಳ್ಳಬಾರದು. 

*► ಫಲಾನುಭವಿಗಳು ಲಸಿಕೆ ಹಾಕಿಸಿಕೊಂಡ ಬೆನ್ನಲ್ಲೇ ಆ ಬಗ್ಗೆ ಪ್ರಮಾಣಪತ್ರವನ್ನು ನೀಡುವಂತೆ ಆಯೋಜಕರನ್ನು ಕೇಳಬೇಕು. ಲಸಿಕೆ ಪ್ರಮಾಣಪತ್ರವನ್ನು ನೀಡಲು ಕಾಲಹರಣ ಮಾಡುತ್ತಿದ್ದರೆ ಅಥವಾ ಒಂದೆರಡು ದಿನಗಳಲ್ಲಿ ಪ್ರಮಾಣಪತ್ರವನ್ನು ಒದಗಿಸುವುದಾಗಿ ಹೇಳುತ್ತಿದ್ದರೆ ಅವರ ಬಗ್ಗೆ ಅನುಮಾನ ಪಡಲೇಬೇಕಾಗುತ್ತದೆ.

*► ಕೊರೋನವೈರಸ್ ಲಸಿಕೆಯನ್ನು ಪಡೆದ ಎಲ್ಲರಲ್ಲೂ ಜ್ವರ,ಬಳಲಿಕೆ ಮತ್ತು ಮೈನೋವಿನಂತಹ ಲಸಿಕೆ ಸಂಬಂಧಿತ ಲಕ್ಷಣಗಳು ಕಂಡು ಬರುವುದಿಲ್ಲವಾದರೂ, ಹೆಚ್ಚಿನವರಲ್ಲಿ ಈ ಲಕ್ಷಣಗಳು ಗೋಚರವಾಗುತ್ತವೆ. ಫಲಾನುಭವಿಗಳು ಲಸಿಕೆ ಪಡೆದುಕೊಂಡ ಬಳಿಕ ತಮ್ಮ ಶರೀರದ ಪ್ರತಿವರ್ತನೆಯನ್ನು ಗಮನಿಸಬೇಕು ಮತ್ತು ಅದೇ ವೇಳೆ ಆ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಂಡವರನ್ನೂ ಈ ಬಗ್ಗೆ ವಿಚಾರಿಸಬೇಕು.ಲಸಿಕೆ ಹಾಕಿಸಿಕೊಂಡ ಎಲ್ಲರಲ್ಲಿಯೂ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿರದಿದ್ದರೆ ತಕ್ಷಣ ಸ್ಥಳೀಯ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಬೇಕು ಮತ್ತು ಖಾಸಗಿ ಲಸಿಕೆ ಕೇಂದ್ರದ ಪ್ರಾಮಾಣಿಕತೆಯನ್ನು ದೃಢಪಡಿಸಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News