ಪ್ರತಿ ಪೊಲೀಸ್ ಠಾಣೆಗೆ ಒಂದೇ ಶಬ್ದಮಾಲಿನ್ಯ ಅಳೆಯುವ ಮಾಪಕ ಸಾಕೇ?: ಹೈಕೋರ್ಟ್ ಪ್ರಶ್ನೆ

Update: 2021-07-02 17:02 GMT

ಬೆಂಗಳೂರು, ಜು.2: ಒಂದು ಪೊಲೀಸ್ ಠಾಣೆಗೆ ಒಂದೇ ಶಬ್ದಮಾಲಿನ್ಯ ಅಳೆಯುವ ಮಾಪಕ ಸಾಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸಲ್ಲಿಸಿರುವ ಪ್ರಮಾಣ ಪತ್ರಕ್ಕೆ ಹೈಕೋರ್ಟ್ ಆಕ್ಷೇಪ ಎತ್ತಿದೆ.

ಶಬ್ದಮಾಲಿನ್ಯ ತಡೆ ಕುರಿತಂತೆ ಇಂದಿರಾನಗರ ನಿವಾಸಿಗಳ ಸಂಘ ಹಾಗೂ ಇನ್ನಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಸರಕಾರದ ಪರ ವಾದ ಮಂಡಿಸಿದ ವಕೀಲ ವಿಜಯಕುಮಾರ್ ಪಾಟೀಲ್, ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಡಿಜಿಪಿ ಪ್ರವೀಣ್ ಸೂದ್ ಸಲ್ಲಿಸಿದ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಒಪ್ಪಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಹಬ್ಬದ ಋತುವಿನಲ್ಲಿ ಒಮ್ಮೆಲೆ ಹಲವು ದೂರುಗಳು ಬಂದರೆ ಹೇಗೆ ನಿಭಾಯಿಸುತ್ತಾರೆ? ಉದಾಹರಣೆಗೆ ಒಂದೇ ಠಾಣೆಗೆ ಒಟ್ಟಿಗೆ ಹತ್ತು ದೂರು ಬಂದರೆ ಆಗ ಏನು ಕತೆ? ಒಂದು ಪೊಲೀಸ್ ಠಾಣೆಗೆ ಒಂದೇ ಮಾಪಕ ಸಾಕಾ? ಒಂದು ವೇಳೆ ಒಂದು ಯಂತ್ರ ಕೆಟ್ಟು ಹೋದರೆ ಏನು ಮಾಡುವುದು? ಎಂದು ಪ್ರಶ್ನಿಸಿತು.

ಕಳೆದ ವಿಚಾರಣೆ ವೇಳೆ ನ್ಯಾಯಾಲಯ, ಶಬ್ದಮಾಲಿನ್ಯ(ನಿಯಂತ್ರಣ ನಿಯಮ) ಕಾಯಿದೆಯ ನಿಯಮಗಳ ಜಾರಿಗೆ ವಿಳಂಬ ಮಾಡುತ್ತಿರುವ ಸರಕಾರದ ಧೋರಣೆಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಶಬ್ದಮಾಲಿನ್ಯ ಕಾಯಿದೆ ಜಾರಿಯಾಗಿ 20 ವರ್ಷ ಕಳೆದಿದೆ. ಆದರೂ ನಿಯಮಗಳನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ. ಶಬ್ದಮಾಲಿನ್ಯ ಅಳೆಯಲು ಮಾಪಕಗಳನ್ನೂ ಖರೀದಿಸಿಲ್ಲ ಎಂದು ಬೇಸರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News