ಎನ್‍ಇಪಿ ಕುರಿತು ವಿಧಾನಮಂಡಲದಲ್ಲಿ ಸಮಗ್ರ ಚರ್ಚೆಯಾಗಲಿ: ಕೆವಿಎಸ್‍ನಿಂದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮನವಿ

Update: 2021-07-03 18:28 GMT

ಬೆಂಗಳೂರು, ಜು.3: ಹೊಸ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಅನುಷ್ಠಾನಕ್ಕೆ ತರುವುದು ಬೇಡ. ಈ ನೀತಿಯ ಕುರಿತು ವಿಧಾನಸಭೆ, ವಿಧಾನಪರಿಷತ್‍ನಲ್ಲಿ ಸಮಗ್ರವಾಗಿ ಚರ್ಚೆ ಆಗಬೇಕೆಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಮನವಿ ಮಾಡಿದೆ.

ಶನಿವಾರ ನಗರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮನವಿ ಪತ್ರ ಸಲ್ಲಿಸಿದ ಕೆವಿಎಸ್ ನಾಯಕರು, ಉನ್ನತ ಶಿಕ್ಷಣವನ್ನು ಮೂರು ವರ್ಷದ ಪದವಿಯಿಂದ ನಾಲ್ಕು ವರ್ಷದ ಪದವಿಗೆ ಏರಿಕೆ ಮಾಡಬೇಕೆಂಬ ಹೊಸ ಶಿಕ್ಷಣ ನೀತಿ (ಓಇP2020)ಯ ಪ್ರಸ್ತಾಪವನ್ನು ರಾಜ್ಯ ಸರಕಾರÀ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲು ಹೊರಟಿದೆ. ಇಂತಹ ವಿದ್ಯಾರ್ಥಿ ವಿರೋಧಿ ನೀತಿಯನ್ನು ವಿರೋಧ ಪಕ್ಷಗಳು ಪ್ರಬಲವಾಗಿ ವಿರೋಧಿಸಬೇಕೆಂದು ಒತ್ತಾಯಿಸಿದೆ.

ಎನ್‍ಇಪಿ-2020ಅನ್ನು ಸಂಸತ್ತಿನಲ್ಲೂ ಹಾಗೂ ರಾಜ್ಯದ ವಿಧಾನಸಭೆಯಲ್ಲಿ ಚರ್ಚಿಸಲಿಲ್ಲ. ಶಿಕ್ಷಣವು ಶೆಡ್ಯೂಲ್-7ರ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಹೀಗಾಗಿ ಶಿಕ್ಷಣ ನೀತಿ ಕುರಿತಂತೆ ರಾಜ್ಯಗಳಿಗೆ ಸಮಾನ ಹಕ್ಕುಗಳು ಇವೆ. ಆದರೆ, ಈ ವಿಷಯದಲ್ಲಿ ರಾಜ್ಯಗಳನ್ನು ಕಡೆಗಣಿಸಿ ಏಕ ಪಕ್ಷಿಯವಾಗಿ ತರಲು ಹೊರಟಿದೆ. ಈ ಕಾರಣಕ್ಕಾಗಿ ರಾಜ್ಯದ ವಿಧಾನ ಮಂಡಲದಲ್ಲಿ ಎನ್‍ಇಪಿ-2020ರ ಸಮಗ್ರ ಚರ್ಚೆ ಆಗಬೇಕೆಂದು ಕೆವಿಎಸ್ ನಾಯಕ ಸರೋವರ್ ಬೆಂಕಿಕೆರೆ ಮನವಿ ಮಾಡಿದ್ದಾರೆ.

ದಶಕಗಳಿಂದ ಸಮಾನ ಶಿಕ್ಷಣಕ್ಕಾಗಿ, ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಸಿಗಬೇಕೆಂದು  ಸುದೀರ್ಘವಾಗಿ ಹೋರಾಟಗಳು ನಡಿಯುತ್ತಲೇ ಬಂದಿವೆ. ಬೆಳೆಯುವ ಕುಡಿಗಳಲ್ಲಿ ಅಸಮಾನತೆಯನ್ನು ಬಿತ್ತುವ ಶಿಕ್ಷಣ ವ್ಯವಸ್ಥೆಯ ಬದಲಾಗಿ ಸಮಾನತೆ ಮತ್ತು ಸೌಹಾರ್ದತೆಯ ನಿರ್ಮಾಣಕ್ಕಾಗಿ ಸಮಾನ ಶಿಕ್ಷಣದ ಕೂಗು ಇದ್ದರೂ ಇದರ ಬಗ್ಗೆ ಸರಕಾರ ಆಸಕ್ತಿ ವಹಿಸಿಲ್ಲ. ಇನ್ನು ಶಿಕ್ಷಣಕ್ಕಾಗಿ ಕೇಂದ್ರ ಸರಕಾರ ಜಿಡಿಪಿಯ ಶೇ.6 ಅಥವಾ ರಾಜ್ಯ ಬಜೆಟ್‍ನ ಶೇ.24 ಅನ್ನು ಮೀಸಲಿಡಬೇಕು ಎಂದು ಶಿಕ್ಷಣ ಆಯೋಗಗಳು, ಶಿಕ್ಷಣ ತಜ್ಞರು ಶಿಫಾರಸು ಮಾಡಿವೆ. ಈ ಬಗ್ಗೆ ಕಿಂಚಿತ್ತೂ ಯೋಚಿಸದ ಸರಕಾರ ಕೋವಿಡ್ ಸಂದರ್ಭದಲ್ಲಿ ಗಡಿಬಿಡಿಯಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡಲು ಹೊರಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಹಕ್ಕೊತ್ತಾಯಗಳು

-ರಾಜ್ಯದ ಶಿಕ್ಷಣ ಹಕ್ಕುದಾರರೊಂದಿಗೆ ಎನ್‍ಇಪಿ 2020ರ ಕುರಿತಂತೆ ಸಮಗ್ರವಾಗಿ ಚರ್ಚಿಸಬೇಕು.

-ಎಲ್ಲ ವಿಷಯಗಳು ಬಗೆಹರಿಯುವವರೆಗೂ ಎನ್‍ಇಪಿ2020 ಅನ್ನು ಜಾರಿ ಮಾಡಬಾರದು.  

-ದೇಶದ ಭವಿಷ್ಯವನ್ನೇ ರೂಪಿಸುವ ಉನ್ನತ ಶಿಕ್ಷಣದ ನೀತಿಯನ್ನು ಕೇವಲ ಹತ್ತು ದಿನದಲ್ಲಿ ವರದಿಯನ್ನು ತರಿಸಿಕೊಂಡು ಅನುಷ್ಠಾನ ಮಾಡಲು ಹೇಗೆ ಸಾಧ್ಯ? ಇದನ್ನು ಕನಿಷ್ಠ ನಾಲ್ಕು ತಿಂಗಳಿಗಾದರೂ ವಿಸ್ತರಿಸಬೇಕು.

-ಕೋವಿಡ್ ಸಂದರ್ಭದಲ್ಲಿ ಕಳೆದ ಬಾರಿ ಶೇÉ.30 ರಷ್ಟು ವಿದ್ಯಾರ್ಥಿಗಳ ಕಲಿಕೆಯೇ ಆಗಿಲ್ಲವೆಂದು ಸರಕಾರವೇ ಹೇಳುತ್ತಿರುವಾಗ ಇದರ ಪರಿಹಾರಕ್ಕೆ ಸರಕಾರ ನಿರ್ಧಾರ ತೆಗೆದುಕೊಳ್ಳದೆ ಪದವಿಯ ಅವಧಿಯನ್ನು ವಿಸ್ತರಿಸುವ ಕಾರ್ಯ ಸೂಕ್ತವೇ?

-ರಾಜ್ಯದ ಉನ್ನತ ಶಿಕ್ಷಣದ ಭವಿಷ್ಯ ನಿರ್ಮಾಣದ ನೀತಿಯು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯ ಭಾಗವಾಗಿ ಇರಬೇಕೆಂದರೆ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ತಜ್ಞರು, ಪಠ್ಯೇತರ ಚಟುವಟಿಕೆಯ ತಜ್ಞರು, ಪೋಷಕರ ಜೊತೆ ಚರ್ಚಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News