'ಡ್ಯಾಂ ಗೇಟಿಗೆ ಅಡ್ಡವಾಗಿ ಮಲಗಿಸಿದರೆ ಸರಿಯಾಗುತ್ತೆ' ಎಂಬ ಎಚ್‍ ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದೆ ಸುಮಲತಾ

Update: 2021-07-05 12:44 GMT

ಬೆಂಗಳೂರು, ಜು. 5: `ಅಣೆಕಟ್ಟು ಬಾಗಿಲಿಗೆ ಅಡ್ಡ ಮಲಗಿಸಿದರೆ ಸರಿ ಹೋಗಬಹುದು' ಎಂಬ ತುಚ್ಛ ಹೇಳಿಕೆ ಮಹಿಳೆಯರ ಬಗ್ಗೆ ಅವರಿಗಿರುವ ಮನಸ್ಥಿತಿಯನ್ನು ತೋರಿಸುತ್ತದೆ. ಮಹಿಳೆಯ ಬಗ್ಗೆ ಕೀಳಾಗಿ ಮಾತನಾಡುವುದನ್ನು ಇನ್ನೂ ಬಿಟ್ಟಿಲ್ಲ. ಚುನಾವಣೆಯಲ್ಲಿ ಜನತೆ ಪಾಠ ಕಲಿಸಿದರೂ ಇನ್ನೂ ಬುದ್ಧಿ ಬಂದಂತೆ ಇಲ್ಲ' ಎಂದು ಸಂಸದೆ ಸುಮಲತಾ ಆಕ್ರೋಶ ಹೊರಹಾಕಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಮಲತಾ , `ನಾನು ಯಾರ ವಿರುದ್ಧವೂ ವೈಯಕ್ತಿಕ ದ್ವೇಷದ ಮಾತುಗಳನ್ನು ಆಡಿಲ್ಲ. ಕೆಆರ್ ಎಸ್ ಸುತ್ತಮುತ್ತ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಅದನ್ನು ರೈತರು ನನ್ನ ಗಮನಕ್ಕೆ ತಂದಿದ್ದರು. ಆ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಅಕ್ರಮ ಗಣಿಗಾರಿಕೆಯನ್ನು ಖುದ್ದಾಗಿ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಅವರೇ ಖುದ್ದು ಪರಿಶೀಲನೆ ನಡೆಸಿದ್ದಾರೆ. ಒಂದು ಅಕ್ರಮ ಗಣಿಗಾರಿಕೆಗೆ 100 ಕೋಟಿ ರೂ.ದಂಡವನ್ನು ಹಾಕಿದ್ದಾರೆ' ಎಂದು ತಿಳಿಸಿದರು.

`ಕೆಆರ್ ಎಸ್ ವ್ಯಾಪ್ತಿಯಲ್ಲಿ ಇನ್ನೂ ಹಲವು ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿದ್ದು, ಅವುಗಳಿಗೆ ದಂಡ ವಿಧಿಸಿದರೆ ಸರಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಬರುತ್ತದೆ' ಎಂದ ಸುಮಲತಾ, `ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಬೇಕು ಎಂದು ಎಲ್ಲೂ ಹೇಳಿಲ್ಲ. ಅದನ್ನು ಸರಕಾರವಾದರೂ ವಹಿಸಿಕೊಳ್ಳಲಿ ಅಥವಾ ಖಾಸಗಿಯವರಾದರೂ ವಹಿಸಿಕೊಳ್ಳಲಿ, ಒಟ್ಟಿನಲ್ಲಿ ಪುನರಾರಂಭವಾಗಬೇಕು ಅಷ್ಟೇ. ಅದರಿಂದ ಜಿಲ್ಲೆಯ ರೈತರಿಗೆ ಅನುಕೂಲವಾಗುತ್ತದೆ' ಎಂದು ಹೇಳಿದರು.

`ಮುಖ್ಯಮಂತ್ರಿ ಆಗಿದ್ದವರು ಕುಮಾರಸ್ವಾಮಿ, ಒಬ್ಬ ಮಹಿಳೆಯ ಬಗ್ಗೆ ಹೇಗೆ ಮಾತನಾಡಬೇಕೆಂಬ ಕನಿಷ್ಟ ಜ್ಞಾನವೂ ಇಲ್ಲ. ನಾನು ಅವರ ಮಟ್ಟಕ್ಕಿಳಿದು ಮಾತನಾಡಿದರೆ ನನಗೂ, ಅವರಿಗೂ ವ್ಯತ್ಯಾಸವಿರುವುದಿಲ್ಲ. ಮಂಡ್ಯದ ಜನತೆ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಅದನ್ನು ಸಹಿಸಲಾರದೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದು ಅವರ ಸಂಸ್ಕಾರವನ್ನು ತೋರಿಸುತ್ತದೆ' ಎಂದು ಸುಮಲತಾ ಕಿಡಿಕಾರಿದರು.

`ನಾನು ಮಂಡ್ಯ ಕ್ಷೇತ್ರದ ಜನರಿಗೆ ಉತ್ತರದಾಯಿ, ಕುಮಾರಸ್ವಾಮಿಗೆ ಅಲ್ಲ. ನಾನು ಮಾತನಾಡಿದಾಗಲೆಲ್ಲ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಾರೆ. ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡುವುದೇ ಅವರ ಹವ್ಯಾಸವಾಗಿಬಿಟ್ಟಿದೆ. ಇಂತಹ ಹೇಳಿಕೆಯಿಂದ ಯಾರಿಗೆ ತೊಂದರೆಯಾಗುತ್ತದೆ ಎಂಬುದರ ಬಗ್ಗೆ ಅರಿವಿರಲಿ. ಸಂಸದೆಯಾಗಿ ಪ್ರಾಮಾಣಿಕವಾಗಿ ನಾನು ಕೆಲಸ ಮಾಡುತ್ತಿದ್ದೇನೆ. ನಾನು ಯಾರೊಬ್ಬರನ್ನೂ ಮೆಚ್ಚಿಸಲು ಕೆಲಸ ಮಾಡುವುದಿಲ್ಲ. ಮಂಡ್ಯ ಕ್ಷೇತ್ರದ ಜನರು ನನ್ನ ಕೆಲಸ ಮೆಚ್ಚಿದರೆ ಸಾಕು' ಎಂದು ಸುಮಲತಾ ತಿರುಗೇಟು ನೀಡಿದರು.

`ನನ್ನಂತಹ ಸಂಸದೆಯನ್ನು ನೋಡಿಲ್ಲ, ನೋಡೋದೂ ಇಲ್ಲ' ಎಂದ ಕುಮಾರಸ್ವಾಮಿ ಹೇಳಿಕೆ ಸತ್ಯ. ನಾನು ಯಾವಾಗಲೂ ನೇರವಾಗಿಯೇ ಮಾತನಾಡುತ್ತೇನೆ. ನನ್ನ ನೇರ ನಡೆ, ನುಡಿ ಅವರಿಗೆ ಇಷ್ಟವಾಗದಿದ್ದರೆ ಏನು ಮಾಡಬೇಕು? ಕೆಆರ್ ಎಸ್ ಜಲಾಶಯ ಉಳಿಸುವುದೇ ನನ್ನ ಉದ್ದೇಶ' ಎಂದ ಸುಮಲತಾ, ಮಂಡ್ಯಕ್ಕೆ ಯಾರು ಸೂಕ್ತವೆಂದು ಅಲ್ಲಿನ ಜನರೇ ತೀರ್ಪು ನೀಡಿರುವುದು ಎಲ್ಲರಿಗೂ ಗೊತ್ತಿದೆ' ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News