ಕಾಂಗ್ರೆಸ್ ಉರಿಯುವ ಮನೆ ಎಂದು ಅಂಬೇಡ್ಕರ್ ಹೇಳಿದ್ದರು: ಸಿ.ಟಿ.ರವಿ

Update: 2021-07-05 16:20 GMT

ಚಿಕ್ಕಮಗಳೂರು, ಜು.5: ಕಾಂಗ್ರೆಸ್ ಉರಿಯುವ ಮನೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರೇ ಹೇಳಿದ್ದರು, ಕಾಂಗ್ರೆಸ್ ಪಕ್ಷಕ್ಕೆ ಸೇರುವವರನ್ನು ಅದು ಭಸ್ಮ ಮಾಡುತ್ತದೆ ಎಂಬುದು ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಪ್ರತಿಕ್ರಿಯಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಇದ್ದವರಿಗೆ ನೆಲೆ ಇಲ್ಲದಂತಾಗಿದೆ ಕಾಂಗ್ರೆಸ್‍ನವರು ಹಗಲುಗನಸು ಕಾಣುತ್ತಿದ್ದಾರೆ. ದೇಶದ ಉದ್ದಗಲಕ್ಕೂ ತುಂಬಾ ಜನ ಕಾಂಗ್ರೆಸ್ ಬಿಡುತ್ತಿದ್ದಾರೆ. ಕಾಂಗ್ರೆಸ್‍ಗೆ ಯಾರು ಸೇರುತ್ತಾರೆ ಎಂದು ಪ್ರಶ್ನಿಸಿದರು.

ರಾತ್ರಿ ಕನಸ್ಸು ಬಿದ್ದರೆ ಸ್ವಾಭಾವಿಕ ಹಗಲುಗನಸ್ಸು ಬಿದ್ರೆ ಅದು ಈಡೇರುವುದಿಲ್ಲ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಚುನಾವಣೆಗೆ 2ವರ್ಷ ಇದೆ. ಕಾಂಗ್ರೆಸ್‍ನಲ್ಲಿ ಈಗಲೇ ಸಿಎಂ ಖುರ್ಚಿಯ ಕನಸು ಕಾಣುತ್ತಿದ್ದಾರೆ. ಇಲ್ಲದಿರುವ ಸಿಎಂ ಕುರ್ಚಿಗೆ ಕಿತ್ತಾಡುವ ಸ್ಥಿತಿಯಲ್ಲಿರುವಾಗ ಯಾರು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೆ ಎಂದರು.

ರಾತ್ರಿ ಕಂಡ ಬಾವಿಗೆ ಯಾರೂ ಹಗಲು ಬೀಳುವುದಿಲ್ಲ. ಬಿಜೆಪಿಗೆ ಬಂದವರು ಕಾಂಗ್ರೆಸ್ ಬೇಡ ಎಂದು ಬಂದಿರುವರು. ಮತ್ತೆ ಹೋಗುತ್ತಾರಾ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‍ನವರು ದೇಶದ ಉದ್ದಗಲಕ್ಕೂ ನಮ್ಮ ಸಂಪರ್ಕದಲ್ಲಿದ್ದಾರೆ. ಸಮಾಜ, ಪಕ್ಷಕ್ಕೆ ಶಕ್ತಿ ತುಂಬುವ ಶಕ್ತಿ ಇರುವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News