ಕಾಬೂಲ್ ನಲ್ಲಿರುವ ದೂತವಾಸ ಮುಚ್ಚುವುದಿಲ್ಲ: ಅಮೆರಿಕ

Update: 2021-07-05 16:38 GMT

ಕಾಬೂಲ್, ಜು.5: ಅಪಘಾನಿಸ್ತಾನದಿಂದ ಅಮೆರಿಕ ಪಡೆಗಳ ವಾಪಸಾತಿ ಪ್ರಕ್ರಿಯೆ ಆರಂಭಗೊಂಡ ಬಳಿಕ ಆ ದೇಶದಲ್ಲಿ ಅನಿಶ್ಚಿತತೆ ಹೆಚ್ಚುತ್ತಿದ್ದರೂ ಕಾಬೂಲ್ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಕಾರ್ಯನಿರ್ವಹಿಸಲಿದೆ ಎಂದು ಅಮೆರಿಕ ಹೇಳಿದೆ. 

ಕಾಬೂಲ್ನಲ್ಲಿರುವ ಅಮೆರಿಕ ದೂತಾವಾಸ ತೆರೆದಿದೆ ಮತ್ತು ಮುಂದೆಯೂ ತೆರೆದಿರುತ್ತದೆ. ಅಧ್ಯಕ್ಷ ಬೈಡೆನ್ ಸೂಚಿಸಿರುವಂತೆ, ಅಪಘಾನಿಸ್ತಾನದ ಸರಕಾರ ಮತ್ತು ಜನತೆಗಾಗಿ ನಾವು ಮಾಡುವ ವಿವಿಧ ಕಾರ್ಯಗಳನ್ನು ಮುಂದುವರಿಸಲು ಕಾಬೂಲ್ನಲ್ಲಿ ನಮ್ಮ ಸುದೃಢ ರಾಜತಾಂತ್ರಿಕ ಉಪಸ್ಥಿತಿ ಮುಂದುವರಿಯಲಿದೆ. ದೂತಾವಾಸವನ್ನು ಮುಚ್ಚುವ ಯಾವುದೇ ಯೋಜನೆಯಿಲ್ಲ ಎಂದು ರಾಯಭಾರಿ ಕಚೇರಿ ಸೋಮವಾರ ಟ್ವೀಟ್ ಮಾಡಿದೆ. 

ಆಕಸ್ಮಿಕ ಪ್ರಸಂಗಗಳನ್ನು ನಿರ್ವಹಿಸಲು ಮತ್ತು ನಮ್ಮ ಜನರಿಗೆ ಹಾಗೂ ಕಾರ್ಯಕ್ರಮಗಳಿಗೆ ಎದುರಾಗುವ ಅಪಾಯಗಳನ್ನು ಉಪಶಮನಗೊಳಿಸಲು ಅಮೆರಿಕದ ದೂತಾವಾಸ ನಿರಂತರ ಯೋಜನೆ ರೂಪಿಸುತ್ತಿದೆ. ಅಪಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುವಾಗ ಎದುರಾಗುವ ಭದ್ರತಾ ಸವಾಲುಗಳ ಬಗ್ಗೆ ನಮಗೆ ಅರಿವಿದೆ ಮತ್ತು ಈ ಸವಾಲುಗಳನ್ನು ಎದುರಿಸಲು ಅಗತ್ಯವಾದ ರೀತಿಯಲ್ಲಿ ನಮ್ಮ ಉಪಸ್ಥಿತಿಯನ್ನು ಹೊಂದಿಸಿಕೊಳ್ಳುತ್ತೇವೆ ಎಂದು ಟ್ವೀಟ್ನಲ್ಲಿ ವಿವರಿಸಲಾಗಿದೆ. 

ಅಪಘಾನಿಸ್ತಾನದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ , ಕಾಬೂಲ್ ನ ರಾಯಭಾರಿ ಕಚೇರಿಯನ್ನು ತೆರವುಗೊಳಿಸುವ ಯೋಜನೆಯನ್ನು ಅಮೆರಿಕದ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ ಎಂದು ‘ ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿತ್ತು. ಅಮೆರಿಕವು ಅಪಘಾನಿಸ್ತಾನದಿಂದ ಸೇನೆಯನ್ನು ವಾಪಸು ಕರೆಸಿಕೊಳ್ಳುವ ಘೋಷಣೆ ನಡೆಸಿದಂದಿನಿಂದ ಅಲ್ಲಿ ಹಿಂಸಾಚಾರ ಉಲ್ಬಣಿಸಿದೆ. ತಾಲಿಬಾನ್ ಮತ್ತು ಅಪ್ಘಾನ್ ಪಡೆಗಳ ನಡುವಿನ ಯದ್ಧದಿಂದ ಆ ದೇಶದಲ್ಲಿ ಅಂತರ್ಯುದ್ಧ ಆರಂಭವಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News