ತಪ್ಪಿಸಿಕೊಳ್ಳುವ ಅಪರಾಧಿಗಳಿಗೆ ಗುಂಡು ಹೊಡೆಯುವುದು ಮಾದರಿಯಾಗಲಿ: ಅಸ್ಸಾಂ ಸಿಎಂ

Update: 2021-07-06 03:48 GMT

ಗುವಾಹತಿ: ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಅಪರಾಧಿಗಳಿಗೆ ಗುಂಡುಹೊಡೆಯುವುದು ಮಾದರಿಯಾಗಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ಶೂಟೌಟ್ ನಡೆಯುತ್ತಿರುವುದನ್ನು ಸಮರ್ಥಿಸಿಕೊಂಡ ಅವರು, ಮಹಿಳೆಯರ ಮೇಲಿನ ಅಪರಾಧ ಕೃತ್ಯಗಳನ್ನು ಸಹಿಸಲಾಗದು ಎಂದು ಪ್ರತಿಪಾದಿಸಿದರು. ಕಾನೂನು ಪಾಲಕರನ್ನು ಸುಸಜ್ಜಿತಗೊಳಿಸುವುದು ಮತ್ತು ಆರೋಪ ಪಟ್ಟಿಯನ್ನು ಲೋಪಮುಕ್ತಗೊಳಿಸುವುದು ಅಗತ್ಯ ಎಂದು ಸಲಹೆ ಮಾಡಿದರು.

"ಪೊಲೀಸರ ಬಂದೂಕು ಕಸಿದುಕೊಂಡು ಯಾವುದೇ ಆರೋಪಿಗಳು ಪರಾರಿಯಾಗಲು ಯತ್ನಿಸಿದರೆ ಅಥವಾ ಕೇವಲ ತಪ್ಪಿಸಿಕೊಳ್ಳುವ ಯತ್ನ ಮಾಡಿದರೂ, ಅತ್ಯಾಚಾರಿಗಳಿಗೂ ಗುಂಡು ಹಾಕಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಎದೆಗಲ್ಲ; ಕಾಲಿಗೆ" ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಶೂಟೌಟ್ ಪ್ರಕರಣಗಳು ಆದರ್ಶವಾಗುತ್ತಿವೆ ಎಂದು ಕೆಲವರು ನನ್ನನ್ನು ಕೇಳಿದರೆ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವವರಿಗೆ ಅದು ಆಗಲೇಬೇಕು ಎಂದು ನಾನು ಉತ್ತರಿಸಿದ್ದೇನೆ ಎಂದು ವಿವರಿಸಿದರು.

"ಅಸ್ಸಾಂನಲ್ಲಿ ಪೊಲೀಸ್ ಗುಣಮಟ್ಟದ ಮರುವ್ಯಾಖ್ಯಾನ" ಕುರಿತಂತೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳ ಉಸ್ತುವಾರಿ ಅಧಿಕಾರಿಗಳನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು, ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ನಿಭಾಯಿಸುವಂತೆ ಸೂಚಿಸಿದರು.

ಅತ್ಯಾಚಾರ, ಕಿರುಕುಳದಂಥ ಪ್ರಕರಣಗಳಲ್ಲಿ ಸಾಧ್ಯವಾದಷ್ಟು ಬೇಗನೇ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದ ಅವರು, ತ್ವರಿತ ವಿಚಾರಣೆಗೆ ಅನುಕೂಲವಾಗುವಂತೆ ಹತ್ಯೆ, ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳ ಕಳ್ಳಸಾಗಣೆ ಪ್ರಕರಣಗಳಲ್ಲೂ ತ್ವರಿತ ವಾಗಿ ಪ್ರಕರಣ ದಾಖಲಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News