ಭಾರತ, ಬ್ರಿಟನ್ ದೇಶಗಳ ಪ್ರವಾಸಿಗರ ಮೇಲಿನ ನಿಷೇಧ ತೆರವುಗೊಳಿಸಿದ ಜರ್ಮನಿ

Update: 2021-07-06 14:51 GMT

ಬರ್ಲಿನ್ (ಜರ್ಮನಿ), ಜು. 6: ಕೋವಿಡ್-19ರ ಡೆಲ್ಟಾ ಪ್ರಭೇದದ ಪ್ರಬಲ ದಾಳಿಗೆ ತುತ್ತಾಗಿರುವ ಭಾರತ, ಬ್ರಿಟನ್ ಮತ್ತು ಇತರ ಮೂರು ದೇಶಗಳಿಂದ ಬರುವ ಹೆಚ್ಚಿನ ಪ್ರವಾಸಿಗರ ಮೇಲಿನ ನಿಷೇಧವನ್ನು ತೆರವುಗೊಳಿಸುವುದಾಗಿ ಜರ್ಮನಿಯ ಆರೋಗ್ಯ ಉಸ್ತುವಾರಿ ಸಂಸ್ಥೆ ಸೋಮವಾರ ತಿಳಿಸಿದೆ.

ಈವರೆಗೆ ‘ವೈರಸ್ ಪ್ರಭೇದದ ದೇಶಗಳು’ ಎಂಬುದಾಗಿ ಗುರುತಿಸಲ್ಪಟ್ಟಿರುವ ಭಾರತ, ನೇಪಾಳ, ರಶ್ಯ, ಪೋರ್ಚುಗಲ್ ಮತ್ತು ಬ್ರಿಟನ್ ದೇಶಗಳನ್ನು ಬುಧವಾರದಿಂದ ‘‘ಅಧಿಕ ಪ್ರಕರಣಗಳಿರುವ ಪ್ರದೇಶಗಳು’ ಎಂಬುದಾಗಿ ಮರುವರ್ಗೀಕರಿಸಲಾಗುವುದು ಎಂದು ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್ (ಆರ್ಕೆಐ) ತಿಳಿಸಿದೆ.
ಈ ಬದಲಾವಣೆಯ ಹಿನ್ನೆಲೆಯಲ್ಲಿ, ಈ ದೇಶಗಳಿಂದ ಬರುವ ಜರ್ಮನಿ ನಾಗರಿಕರು ಅಥವಾ ನಿವಾಸಿಗಳು ಅಲ್ಲದ ಪ್ರವಾಸಿಗರ ಪ್ರವೇಶದ ಮೇಲಿನ ನಿಷೇಧವನ್ನು ಸಡಿಲಿಸಲಾಗುವುದು. ಅಂದರೆ, ಈ ದೇಶಗಳಿಂದ ಬರುವವರು ಕ್ವಾರಂಟೈನ್ ಮತ್ತು ಪರೀಕ್ಷಾ ನಿಯಮಗಳನ್ನು ಪಾಲಿಸಿದರೆ ಅವರಿಗೆ ಜರ್ಮನಿ ಪ್ರವೇಶಿಸಲು ಅವಕಾಶ ನೀಡಲಾಗುವುದು.

ಹೊಸ ಪ್ರಭೇದದ ಕೊರೋನ ವೈರಸ್ ಜರ್ಮನಿಗೆ ಬರುವುದನ್ನು ತಡೆಯುವ ಉದ್ದೇಶದಿಂದ ಜರ್ಮನಿಯು ಈ ದೇಶಗಳಿಂದ ಬರುವ ಪ್ರವಾಸಿಗರು ದೇಶ ಪ್ರವೇಶಿಸುವುದನ್ನು ನಿಷೇಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News