ಮಂಡ್ಯ: ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಮಹಿಳೆಯರ ಪ್ರತಿಭಟನೆ

Update: 2021-07-06 16:21 GMT

ಮಂಡ್ಯ, ಜು.6: ಸಂಸದೆ ಸುಮಲತಾ ಅಂಬರೀಶ್ ಅವರ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ತಗ್ಗಹಳ್ಳಿ ಯಶೋಧಾಗೌಡ ಅವರ ನೇತೃತ್ವದಲ್ಲಿ ಸ್ವಾಭಿಮಾನಿ ಮಹಿಳಾತಂಡವು ಪ್ರತಿಭಟನೆ ನಡೆಸಿತು.

ನಗರದ ಬೆಂಗಳೂರು ಮೈಸೂರು ಹೆದ್ದಾರಿಯ ಮೈಶುಗರ್ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಕೆ.ಆರ್.ಎಸ್. ಬಿರುಕಿಗೆ ಸಂಬಂಧಿಸಿದಂತೆ ಸುಮಲತಾ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗದೇ ‘ಬಿರುಕು ಬಿಟ್ಟಿದ್ದರೆ ಅವರನ್ನೇ ಅಡ್ಡ ಅಡ್ಡ ಮಲಗಿಸಿ’ ಎಂದು ಹೇಳುವುದರ ಮೂಲಕ ಕುಮಾರಸ್ವಾಮಿ  ಜಿಲ್ಲೆಯ ಸ್ವಾಭಿಮಾನಿ ಮಹಿಳೆಯರಿಗೆ ಅಪಮಾನವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಗ್ಗಹಳ್ಳಿ ಯಶೋಧಾಗೌಡ ಮಾತನಾಡಿ,  ಮಾಜಿ ಪ್ರಧಾನಿ ದೇವೇಗೌಡರ ಪುತ್ರರಾಗಿ ಎರಡು ಬಾರಿ ರಾಜ್ಯ ಮುಖ್ಯಮಂತ್ರಿಯಾಗಿ ಸಮಗ್ರ ಅಭಿವೃದ್ಧಿಯ ಚಿಂತರಾಗಿರುವ ಕುಮಾರಸ್ವಾಮಿಯವರು ಮಹಿಳೆಯರ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿರುವುದು ಅವರಿಗೆ ಕಿಂಚಿತ್ತೂ ಶೋಭೆ-ಗೌರವವಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಕಿಡಿಕಾರಿದರು.

ಮಂಡ್ಯದ ಸ್ವಾಭಿಮಾನಿ ಜನ ಲೋಕಸಭೆ ಚುನಾವಣೆಯಲ್ಲಿ ಮಣ್ಣುಮುಕ್ಕಿಸಿದ್ದರೂ ಇನ್ನೂ ಇವರು ಬುದ್ಧಿ ಕಲಿತಿಲ್ಲ. ಕೂಡಲೇ ಕ್ಷಮೆಯಾಚಿಸದಿದ್ದರೆ ಇಂದು ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದು ಮುಂದೆ ಜಿಲ್ಲಾದ್ಯಂತ ಉಗ್ರರ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಮುಖಂಡರಾದ ಸರೀತಾ, ಅರ್ಪಿತಾ, ದಾಕ್ಷಾಯಿಣಿ, ಶೋಭಾ, ಸವಿತಾ, ಸುಮಾ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News