ರಾಜ್ಯಪಾಲರ ಕಚೇರಿ ಮಾಹಿತಿ ಹಕ್ಕು ವ್ಯಾಪ್ತಿಗೆ ಬರುವುದಿಲ್ಲವೇ?: ರಮೇಶ್ ಬಾಬು ಪ್ರಶ್ನೆ

Update: 2021-07-06 16:44 GMT

ಬೆಂಗಳೂರು, ಜು. 6: `ರಾಜ್ಯಪಾಲರು ಸಾರ್ವಜನಿಕ ಪ್ರಾಧಿಕಾರದ ಪರಿಭಾಷೆ ವ್ಯಾಪ್ತಿಯಲ್ಲಿ ಬರುತ್ತದೆಯೋ, ಇಲ್ಲವೋ ಎಂಬ ವಿಚಾರವಾಗಿ ಮಾಹಿತಿ ಹಕ್ಕಿನ ಆಯೋಗದಲ್ಲಿ ವಿಚಾರಣೆ ಬಾಕಿ ಇರುವುದರಿಂದ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ' ಎಂಬ ನೆಪದಲ್ಲಿ ಮಾಹಿತಿ ಅರ್ಜಿಗೆ ಮಾಹಿತಿ ನಿರಾಕರಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ವಕ್ತಾರ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಆಕ್ಷೇಪಿಸಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, `ದುರಂತ ಎಂದರೆ, ಎರಡು-ಮೂರು ವರ್ಷಗಳಲ್ಲಿ ಅವರ ಮಾಹಿತಿ ಕೇಳಿ ಅನೇಕರು ರಾಜ್ಯಪಾಲರ ಕಚೇರಿಗೆ ಅರ್ಜಿ ಹಾಕಿದ್ದು, ಮಾಹಿತಿ ಆಯೋಗದ ನೆಪವೊಡ್ಡಿ ಮಾಹಿತಿ ನೀಡುವುದನ್ನು ನಿರಾಕರಿಸುತ್ತಾ ಬಂದಿದೆ. ಇದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಸಾರ್ವಜನಿಕರ ತೆರಿಗೆ ಹಣವನ್ನು ರಾಜ್ಯಪಾಲರಿಗೆ ನೀಡುತ್ತಿದ್ದು, ಅವರು ಜನರಿಗೆ ಮಾಹಿತಿಗಳನ್ನು ನೀಡಲೇಬೇಕು ಎಂದು ಆಗ್ರಹಿಸಿದರು.

`ಮಧ್ಯಪ್ರದೇಶದ ಬಿಜೆಪಿ ಮುಖಂಡರಾದ ತಾವರಚಂದ್ ಗೆಹ್ಲೋಟ್ ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. 15 ದಿನಗಳ ಹಿಂದೆ ನಮ್ಮ ರಾಜ್ಯಪಾಲ ವಜುಭಾಯ್ ವಾಲಾ ಕುರಿತು ವಾಲಾರವರ ದರ್ಬಾರು ಎಂದು ವರದಿಯಾಗಿತ್ತು. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜಭವನ ಬಿಜೆಪಿ ಕಾರ್ಯಾಲಯವಾಗಿದೆ. ವಾಲಾರ ಅಧಿಕಾರ ಅವಧಿ 5 ವರ್ಷಕ್ಕೆ ಮುಕ್ತಾಯವಾದರೂ ಎರಡು ವರ್ಷಗಳ ಕಾಲ ಹೆಚ್ಚುವರಿಯಾಗಿ ಅಧಿಕಾರದಲ್ಲಿ ಮುಂದುವರಿದರು. ಇದಕ್ಕೆ ನಮ್ಮ ತಕರಾರಿಲ್ಲ'.

`ಆದರೆ, ಇಂದು ದೇಶದ ರಾಷ್ಟ್ರಪತಿಗಳು, ಪ್ರಧಾನಿ, ಸುಪ್ರೀಂ ಕೋರ್ಟ್ ಕಚೇರಿಗಳು ಮಾಹಿತಿ ಹಕ್ಕು ವ್ಯಾಪ್ತಿಗೆ ಬರುತ್ತದೆ. ಆದರೆ ವಾಜುಭಾಯ್ ಅವರು ರಾಜ್ಯಪಾಲರಾದ ಬಳಿಕ ಆದ ಖರ್ಚು ವೆಚ್ಚದ ಬಗ್ಗೆ ಉದ್ಭವಿಸಿದ ಅನುಮಾನಗಳ ಬಗ್ಗೆ ಪಕ್ಷದ ಪರವಾಗಿ ನಾವು ಜೂನ್ 26ರಂದು ನಾವು ಮಾಹಿತಿ ಹಕ್ಕು ಅರ್ಜಿ ಹಾಕಿ, ಅವರು ಹೇಗೆ ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಮಾಹಿತಿ ಕೇಳಲಾಯಿತು. ಈ ಬಗ್ಗೆ ನಾವು ರಾಷ್ಟ್ರಪತಿಗಳಿಗೆ ಆನ್‍ಲೈನ್‍ನಲ್ಲಿ ಅರ್ಜಿಹಾಕಿದಾಗ ಅಲ್ಲಿಂದ ನಮಗೆ ಮಾಹಿತಿ ಲಭಿಸುತ್ತದೆ. ದುರಾದೃಷ್ಟಕರ ಸಂಗತಿ ಎಂದರೆ ನಮ್ಮ ಅರ್ಜಿಗೆ ರಾಜ್ಯಪಾಲರ ಕಚೇರಿಯು ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

`ಯಾವುದೇ ಒಂದು ಪ್ರಕರಣ ವಿಲೇವಾರಿ ಮಾಡದೇ ಅದನ್ನು ಮುಂದಿಟ್ಟುಕೊಂಡು ರಾಜ್ಯಪಾಲರ ಕಚೇರಿಯನ್ನು ಮಾಹಿತಿ ಹಕ್ಕಿನ ವ್ಯಾಪ್ತಿಯಿಂದ ಹೊರಗಿಡುವ ಪ್ರಯತ್ನ ಮಾಡಬೇರದು ಎಂದು ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ಮನವಿ ಮಾಡುತ್ತೇನೆ. ಇದಕ್ಕೆ ಅವಕಾಶ ಮಾಡಿಕೊಡದಿದ್ದರೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಲಾಗುವುದು. ಈ ಬಗ್ಗೆ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗುವುದು' ಎಂದು ರಮೇಶ್ ಬಾಬು ಎಚ್ಚರಿಸಿದರು.

ಯತ್ನಾಳ್ ರಾಜಕೀಯ ನಿಲುವು ಏನು?:

`ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಾವಾಗ ಯಾರ ವಿರುದ್ಧ ಟೀಕೆ ಮಾಡುತ್ತಾರೋ ಗೊತ್ತಿಲ್ಲ. ಅವರ ರಾಜಕೀಯ ನಿಲುವು ಏನು ಎಂಬುದು ಗೊತ್ತಿಲ್ಲ. ವಿಪಕ್ಷ ಮೌನವಾಗಿದ್ದರೆ `100 ನಾಟೌಟ್', ಸೈಕಲ್ ಜಾಥ ನಡೆಯುತ್ತಿರಲಿಲ್ಲ. ಕೋವಿಡ್ ಸಮಯದಲ್ಲಿ ಸರಕಾರ ಭ್ರಷ್ಟಾಚಾರದ ವಿರುದ್ಧ ಸದನದಲ್ಲಿ ಧ್ವನಿ ಎತ್ತಿದ್ದೇವೆ.
ಸರಕಾರ ಹೇರಲಾಗಿದ್ದ ಕಾನೂನು ವ್ಯಾಪ್ತಿಯ ನಿಬರ್ಂಧದ ವ್ಯಾಪ್ತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಾವು ರಾಜ್ಯದ ಮನೆ-ಮನೆಗಳಿಗೆ ಹೋಗಿ, ಡೆತ್ ಆಡಿಟ್, ಉದ್ಯೋಗ ಕಳೆದುಕೊಂಡವರ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ವಿಪಕ್ಷ ಟೀಕಿಸಿದರೆ ಮಾತ್ರ ಸಕ್ರಿಯವಾಗಿದೆ ಎಂದು ಅಲ್ಲ. ಕಾಂಗ್ರೆಸ್ ಪಕ್ಷ ತನ್ನ ಜವಾಬ್ದಾರಿಯುತವಾಗಿ ಸಕಾರಾತ್ಮಕ ರಾಜಕೀಯ ಮಾಡುತ್ತಿದೆ. ಸರಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಿ ಆ ವಿಚಾರವನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ತಲುಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ'

-ಬಿ.ಎಲ್.ಶಂಕರ್ ಕಾಂಗ್ರೆಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News