ಬಿ.ಎಸ್.ಪಿಯಿಂದ ದಲಿತ ಮುಖ್ಯಮಂತ್ರಿ ಸಾಧ್ಯ : ಎಂ.ಕೃಷ್ಣಮೂರ್ತಿ

Update: 2021-07-06 16:50 GMT

ಚಾಮರಾಜನಗರ: ಕಾಂಗ್ರೆಸ್ ಬಿಜೆಪಿ ಮುಂತಾದ ಮನುವಾದಿ ಪಕ್ಷಗಳಿಂದ ದಲಿತ ಮುಖ್ಯಮಂತ್ರಿ ಸಾಧ್ಯವಿಲ್ಲ, ಬಿಎಸ್ಪಿಯಿಂದ ಮಾತ್ರ ಸಾಧ್ಯ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಹೇಳಿದರು.

ಜಿಲ್ಲಾ  ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಸಿದ್ಧತೆಗಾಗಿ ಚಾಮರಾಜನಗರದ ಜಿಲ್ಲಾ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕಾಂಗ್ರೆಸ್-ಬಿಜೆಪಿ ಮುಂತಾದ ಮನುವಾದಿ ಪಕ್ಷಗಳು ದಲಿತರನ್ನು ಕೇವಲ ವೋಟ್ ಬ್ಯಾಂಕ್ ಗಾಗಿ ಮಾತ್ರ ಬಳಸಿಕೊಂಡಿವೆ.

ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಸ್ಥಾನಗಳನ್ನು ಮನುವಾದಿ ಹೈಕಮಾಂಡ್ ಗಳ ಮುಂದೆ ಭಿಕ್ಷೆ ಬೇಡಿ ಪಡೆಯಲು ಸಾಧ್ಯವಿಲ್ಲ.  ಬಿಎಸ್ಪಿಯಂತಹ ಸ್ವಂತ ಪಕ್ಷದಿಂದ ಸಮಾಜವನ್ನು ಸಂಘಟಿಸಿ ದಕ್ಕಿಸಿಕೊಳ್ಳಬಹುದು ಎಂಬುದನ್ನು ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಮಾನ್ಯವರ್ ಕಾನ್ಸಿರಾಮ್ ಜೀ ಮತ್ತು ಉತ್ತರಪ್ರದೇಶದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಅಕ್ಕ ಮಾಯಾವತಿ ಜೀ ಸಾಧಿಸಿ ತೋರಿಸಿದ್ದಾರೆ ಎಂದರು.

ಕಾಂಗ್ರೆಸ್ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಪ್ರಧಾನಿಯಾಗಲು ಬಿಡಲಿಲ್ಲ. ಇನ್ನು ಬಾಬು ಜಗಜೀವನರಾಮ್ ಕಾಂಗ್ರೆಸ್ ತೊರೆಯುವವರೆಗೆ ಉಪ ಪ್ರಧಾನಿಯಾಗಲು ಸಾಧ್ಯವಾಗಲಿಲ್ಲ. ಕರ್ನಾಟಕದಲ್ಲಿ ಬಿ. ಬಸವಲಿಂಗಪ್ಪ, ಎನ್. ರಾಚಯ್ಯ, ಕೆ. ಎಚ್. ರಂಗನಾಥ್, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ವಿ. ಶ್ರೀನಿವಾಸ್ ಪ್ರಸಾದ್, ಜಿ. ಪರಮೇಶ್ವರ್ ಅವರನ್ನು ಬಳಸಿಕೊಂಡು ಮೂಲೆಗುಂಪು ಮಾಡಿದೆ ಎಂದರು.

ಕಾಂಗ್ರೆಸ್ ಎಡ-ಬಲ ಎಂದು ದಲಿತರನ್ನು ಒಡೆದು ಹಾಕಿದ್ದರೆ, ಬಿಜೆಪಿಯು ಸ್ಪೃಶ್ಯ ಮತ್ತು ಅಸ್ಪೃಶ್ಯರನ್ನು ಬೇರ್ಪಡಿಸಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಇನ್ನು ಸ್ವಂತ ಪಕ್ಷದಿಂದ ಉಚ್ಚಾಟಿಸಿ ಕೊಂಡು ಅತಂತ್ರವಾಗಿರುವ ಜಿಲ್ಲೆಯ ಶಾಸಕರೊಬ್ಬರು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ದಲಿತ ಮುಖ್ಯಮಂತ್ರಿ ಮಾಡಬೇಕೆಂದು ಒತ್ತಾಯಿಸುತ್ತಿರುವುದು ಹಾಸ್ಯಾಸ್ಪದ ಎಂದರು.

ದಲಿತ ಮುಖ್ಯಮಂತ್ರಿ ವಿಚಾರದಲ್ಲಿ ಪ್ರಾಮಾಣಿಕವಾಗಿ ಇರುವವರು ಪಕ್ಷಾತೀತವಾಗಿ ಬಿಎಸ್ಪಿಯನ್ನು ಬೆಂಬಲಿಸಬೇಕು. ಅಂತವರಿಗೆ ಬಿಎಸ್ಪಿ ಬಾಗಿಲು ಸದಾ ತೆರೆದಿರುತ್ತದೆ ಎಂದರು.

ರಾಜ್ಯದ ಜನತೆ ಬಹುಜನ ಸಮಾಜ ಪಕ್ಷ ದಿಂದ ಕೇವಲ 20 ಶಾಸಕರನ್ನು ಆಯ್ಕೆ ಮಾಡಿದರೆ, ಖಂಡಿತವಾಗಿಯೂ  ದಲಿತ ಮುಖ್ಯಮಂತ್ರಿ ಕನಸು ನನಸು ಮಾಡುತ್ತದೆ ಎಂದು ಸವಾಲು ಹಾಕಿದರು.

ಇದಕ್ಕೂ ಮುನ್ನಾ ಸಾಂಕೇತಕ ವಾಗಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಕೇಲಸ ನಿರ್ವಹಿಸುತ್ತಿರುವ ಶಿಕ್ಷಕರನ್ನು ಬಿ ಎಸ್ ಪಿ ವತಿಯಿಂದ ಆಹಾರ ಪದಾರ್ಥದ ಕಿಟ್ ವಿತರಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಜಿಲ್ಲಾಧ್ಯಕ್ಷ ನಾಗಯ್ಯ, ಬ್ಯಾಡಮೂಡ್ಲು ಬಸವಣ್ಣ,  ಬ.ಮ. ಕೃಷ್ಣಮೂರ್ತಿ, ಪ್ರಕಾಶ್, ಸಿದ್ದಯ್ಯನಪುರ ಮಹೇಶ್, ಬಸವಣ್ಣ ಕಿಲಗೆರೆ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಣ್ಣ, ಅಲೋಕ್, ಬಾಲರಾಜ್, ಖಲೀಲ್, ಇನಾಯತ್ ಪಾಷಾ, ರವಿ, ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News