ರಸ್ತೆ ಅಗಲೀಕರಣದಿಂದ ಮನೆ ಕಳೆದುಕೊಳ್ಳುವ ಭೀತಿ: ಸಿ.ಟಿ.ರವಿ ವಿರುದ್ಧ ಸ‍್ಥಳೀಯರಿಂದ ಪ್ರತಿಭಟನೆ

Update: 2021-07-06 17:19 GMT

ಚಿಕ್ಕಮಗಳೂರು, ಜು.6: ನಗರದ ಎಐಟಿ ವೃತ್ತದಿಂದ ಹಿರೇಮಗಳೂರು ಅಂಬೇಡ್ಕರ್ ವೃತ್ತದವರೆಗಿನ ಬೈಪಾಸ್ ರಸ್ತೆಯ ಅಗಲೀಕರಣಕ್ಕೆ ಮಂಗಳವಾರ ಶಾಸಕ ಸಿ.ಟಿ.ರವಿ ಗುದ್ದಲಿ ಪೂಜೆ ನೆರವೇರಿಸಲು ಮುಂದಾದ ವೇಳೆ ರಸ್ತೆ ಅಗಲೀಕರಣದಿಂದ ಮನೆ ಕಳೆದುಕೊಳ್ಳುವ ಭೀತಿಯಿಂದ ಸಂತ್ರಸ್ತರು ದಿಢೀರ್ ಧರಣಿ ನಡೆಸಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಘಟನೆ ನಡೆಯಿತು.

ನಗರ ಸಮೀಪದ ಚಿಕ್ಕಮಗಳೂರು-ಕಡೂರು ಸಂಪರ್ಕ ರಸ್ತೆಯಲ್ಲಿರುವ ಎಐಟಿ ವೃತ್ತದಿಂದ ಚಿಕ್ಕಮಗಳೂರು-ಹಾಸನ ಸಂಪರ್ಕ ರಸ್ತೆಯಲ್ಲಿರುವ ಅಂಬೇಡ್ಕರ್ ವೃತ್ತದವರೆಗಿನ ಕಲ್ಯಾಣ ನಗರ ಬಡಾವಣೆ ಮೂಲಕ ಹಾದು ಹೋಗಿರುವ 3.8 ಕಿಮೀ. ಉದ್ದದ ಬೈಪಾಸ್ ರಸ್ತೆಯನ್ನು 29.40 ಕೋ. ರೂ. ವೆಚ್ಚದಲ್ಲಿ ದ್ವಿಮುಖ ರಸ್ತೆಯನ್ನಾಗಿ ಅಭಿವೃದ್ಧಿ ಮಾಡಲು ಸರಕಾರ ಅನುದಾನ ಮಂಜೂರು ಮಾಡಿದೆ. ಈ ರಸ್ತೆ ಅಗಲೀಕರಣಕ್ಕೆ ಶಾಸಕ ಸಿ.ಟಿ.ರವಿ ಮಂಗಳವಾರ ಬೆಳಗ್ಗೆ ಗುದ್ದಲಿ ಪೂಜೆ ನಡೆಸುವ ಕಾರ್ಯಕ್ರಮ ನಿಗದಿಯಾಗಿತ್ತು. ಅದರಂತೆ ಮಂಗಳವಾರ ಬೆಳಗ್ಗೆ ಶಾಸಕ ಸಿ.ಟಿ.ರವಿ ತಮ್ಮ ಬೆಂಬಲಿಗರು, ಸಿಡಿಎ, ನಗರಸಭೆ ಅಧಿಕಾರಿಗಳು, ಇಂಜಿನಿಯರ್, ಗುತ್ತಿಗೆದಾರರೊಂದಿಗೆ ಗುದ್ದಲಿ ಪೂಜೆ ನೆರವೇರಿಸಲು ಎಐಟಿ ವೃತ್ತದ ಬಳಿ ಸಿದ್ಧತೆ ಕೈಗೊಂಡಿದ್ದರು. ರಸ್ತೆ ಒತ್ತುವರಿ ತೆರವಿಗೆ ಜೆಸಿಬಿ ಯಂತ್ರಗಳು ಬಂದು ನಿಂತಿದ್ದವು.

ಈ ವೇಳೆ ರಸ್ತೆ ಅಗಲೀಕರಣದಿಂದ ಮನೆ ಕಳೆದುಕೊಳ್ಳುವ ಭೀತಿಯಲ್ಲಿದ್ದ ನಾಗರಿಕರು, ಸಾರ್ವಜನಿಕರು ಏಕಾಏಕಿ ಕಾರ್ಯಕ್ರಮದ ಸ್ಥಳಕ್ಕಾಮಿಸಿ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಪರಿಹಾರ ನೀಡದೇ ತೆರವು ಕಾರ್ಯಾಚರಣೆ ಮಾಡಬಾರದು. ರಸ್ತೆ ಅಗಲೀಕರಣದಿಂದ ಮನೆ ಕಳೆದುಕೊಳ್ಳುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಲಿಖಿತ ಭರವಸೆ ನೀಡಬೇಕು. ಅಲ್ಲಿಯವರೆಗೆ ರಸ್ತೆ ಅಗಲೀಕರಣಕ್ಕೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳದಲ್ಲಿದ್ದ ಬಿಜೆಪಿ ಮುಖಂಡರು ಹಾಗೂ ನಾಗರಿಕರ ನಡುವೆ ಪರಸ್ಪರ ಮಾತಿನ ಚಕಮಕಿ, ವಾಗ್ವಾದ ಏರ್ಪಟ್ಟು ಗೊಂದಲದ ವಾತಾವರಣ ನಿರ್ಮಾಣವಾಯಿತು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಸ್ಥಳದಲ್ಲಿದ್ದ ಸಂತ್ರಸ್ತರೊಬ್ಬರು ಮಾತನಾಡಿ, ಈ ರಸ್ತೆ ಬದಿಯಲ್ಲಿ ತನ್ನ ಮನೆ ಇದೆ. ರಸ್ತೆ ಅಗಲೀಕರಣ ಸುದ್ದಿ ಕೇಳಿದಾಗಿನಿಂದ ಮನೆಯವರು ಸರಿಯಾಗಿ ನಿದ್ದೆ ಮಾಡಿಲ್ಲ. ಹುಚ್ಚರಂತಾಗಿದ್ದೇವೆ, ಅನ್ನಾಹಾರ ಸೇರುತ್ತಿಲ್ಲ, ರಸ್ತೆ ಅಗಲೀಕರಣಕ್ಕೆ ನಮ್ಮ ವಿರೋಧವಿಲ್ಲ. ಆದರೆ ರಸ್ತೆ ಅಗಲೀಕರಣದಿಂದ ನಾಶವಾಗುವ ನಮ್ಮ ವಾಸದ ಮನೆಗೆ ಎಷ್ಟು ಪರಿಹಾರ ನೀಡುತ್ತೀರಿ?, ಮನೆ ಕಟ್ಟಿಕೊಳ್ಳಲು ಎಲ್ಲಿ ಜಾಗ ನೀಡುತ್ತೀರಿ? ಎಂಬುದನ್ನು ಇದುವರೆಗೂ ಹೇಳಿಲ್ಲ. ಸಾರ್ವಜನಿಕರಿಗೆ ಮಾಹಿತಿ ನೀಡದೇ ಏಕಾಏಕಿ ರಸ್ತೆ ಅಗಲೀಕರಣಕ್ಕೆ ಮುಂದಾಗಿರುವುದು ಏಕೆ? ಎಂದು ಶಾಸಕ ಸಿ.ಟಿ.ರವಿ ಅವರನ್ನು ಪ್ರಶ್ನಿಸಿದ ಅವರು, ಮನೆ ಕಳೆದುಕೊಳ್ಳುವವರಿಗೆ ಬದಲೀ ವ್ಯವಸ್ಥೆ ಮಾಡಬೇಕು. ಪರಿಹಾರದ ಬಗ್ಗೆ ಗ್ಯಾರಂಟಿ ನೀಡಬೇಕು. ಅದನ್ನು ಲಿಖಿತವಾಗಿಯೇ ನೀಡಬೇಕು. ಅಲ್ಲಿಯವರೆಗೆ ಮನೆಗಳನ್ನು ಒಡೆಯಲು ಬಿಡಲ್ಲ ಎಂದು ಪಟ್ಟು ಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸಿ.ಟಿ.ರವಿ ಮಾತನಾಡಿ, ರಸ್ತೆ ಅಗಲೀಕರಣದಿಂದ ಎಷ್ಟು ಜನರ ಮನೆಗಳಿಗೆ ಹಾನಿಯಾಗಲಿದೆ ಎಂಬ ಬಗ್ಗೆ ಈಗಾಗಲೇ ಮಾಹಿತಿ ಸಂಗ್ರಹಿಸಲಾಗಿದ್ದು, ರಸ್ತೆ ಬದಿಯಲ್ಲಿರುವ 3 ಮನೆಗಳು ಸಂಪೂರ್ಣವಾಗಿ ನಾಶವಾಗಲಿದ್ದು, 12 ಮನೆಗಳಿಗೆ ಭಾಗಶಃ ಹಾನಿಯಾಗಲಿದೆ. ಸಂಪೂರ್ಣವಾಗಿ ಮನೆ ಕಳೆದುಕೊಳ್ಳುವವರಿಗೆ ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಲು ಈಗಾಗಲೇ ಜಿಲ್ಲಾಧಿಕಾರಿ ಬಳಿ ಚರ್ಚೆ ನಡೆಸಲಾಗಿದೆ. ಭಾಗಶಃ ಹಾನಿಯಾಗುವ ಮನೆಗಳ ಮಾಲಕರಿಗೂ ಪರಿಹಾರ ನೀಡಲು ಕ್ರಮವಹಿಸಲಾಗುವುದು. ಅಗಲೀಕರಣದ ವೇಳೆ ಭಾಗಶಃ ಮನೆ ಕಳೆದುಕೊಳ್ಳುವವರಿಗೆ ಸಿಡಿಎ ವತಿಯಿಂದ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು. ಸಂಪೂರ್ಣ ಮನೆ ಕಳೆದುಕೊಳ್ಳುವವರಿಗೆ ಜಿಲ್ಲಾಧಿಕಾರಿ ಶಾಶ್ವತ ಪರಿಹಾರ ಕಲ್ಪಿಸಲಿದ್ದಾರೆ. ಯಾರನ್ನೂ ಬೀದಿಪಾಲಾಗಲು ಬಿಡಲ್ಲ. ಪರಿಹಾರದ ಬಗ್ಗೆ ಲಿಖಿತವಾಗಿಯೇ ಭರವಸೆ ನೀಡಲಾಗುವುದು ಎಂದು ಎಂದರು.

ರಾಜ್ಯ ಹೆದ್ದಾರಿ ನಿಯಮದಂತೆ ಈ ರಸ್ತೆಯ ಎರಡೂ ಬದಿಯಲ್ಲಿ 70 ಅಡಿ ಅಗಲೀಕರಣ ಮಾಡಬೇಕಿದೆ. ಆದರೆ ಹಾಗೆ ಮಾಡಿದರೆ ಸ್ಥಳೀಯರು ಮನೆ, ಅಂಗಡಿ ಮುಂಗಟ್ಟು ಕಳೆದುಕೊಳ್ಳಲಿದ್ದಾರೆ. ಈ ಬಗ್ಗೆ ಸ್ಥಳೀಯರು ತನ್ನ ಗಮನಕ್ಕೆ ತಂದಿದ್ದರಿಂದ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ರಸ್ತೆ ಮಧ್ಯದಿಂದ ಎರಡೂ ಬದಿ 40 ಅಡಿ ಅಗಲೀಕರಣ ಮಾಡಿ, 10 ಅಡಿ ಜಾಗದಲ್ಲಿ ಫುಟ್‍ಪಾತ್, ಯುಜಿಡಿ, ಪೈಪ್ಲೈನ್‍ಗೆ ಬಿಡಲು ಸೂಚಿಸಲಾಗಿದೆ. ಒಟ್ಟಾರೆ ರಸ್ತೆ ಮಧ್ಯದಿಂದ ಎರಡೂ ಬದಿ 50 ಅಡಿ ಮಾತ್ರ ಅಗಲೀಕರಣ ಮಾಡಲಾಗುವುದು. ಇದರಿಂದ ಹಾನಿಯಾಗುವ ಮನೆಗಳಿಗೆ ಪರಿಹಾರ ನೀಡಲು ಜಿಲ್ಲಾಧಿಕಾರಿ ಬಳಿ ಚರ್ಚಿಸಲಾಗಿದೆ ಎಂದು ಭರವಸೆ ನೀಡಿದ್ದರಿಂದ ಪರಿಸ್ಥಿತಿ ತಿಳಿಯಾಯಿತು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ್, ನಗರಸಭೆ ಮಾಜಿ ಅಧ್ಯಕ್ಷ ತಮ್ಮಯ್ಯ, ಮಾಜಿ ಸದಸ್ಯ ಕವಿತಾಶೇಖರ್, ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಬಿಜೆಪಿ ಮುಖಂಡರಾದ ಮಧುಕುಮಾರ್ ರಾಜ್ ಅರಸ್, ವರಸಿದ್ದಿ ವೇಣುಗೋಪಾಲ್, ದೀಪಕ್‍ದೊಡ್ಡಯ್ಯ, ಕೇಶವ, ಪೌರಾಯುಕ್ತ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯರಿಗೆ ಯಾವುದೇ ನೋಟಿಸ್ ನೀಡದೆ ಏಕಾಏಕಿ ರಸ್ತೆ ವಿಸ್ತರಣೆ ಮಾಡಲು ಒತ್ತುವರಿ ತೆರವಿಗೆ ಮುಂದಾಗಿರುವುದು ಖಂಡನೀಯ. ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಾವಳಿಯಂತೆ 50 ಅಡಿ ಮಾತ್ರ ರಸ್ತೆ ವಿಸ್ತರಣೆಯಾಗಬೇಕು. ಅಂಗಡಿ, ಮನೆಗಳನ್ನು ಕಳೆದುಕೊಳ್ಳುವವರಿಗೆ ಶೀಘ್ರ ಪರಿಹಾರ ನೀಡಬೇಕು, ಈ ಬಗ್ಗೆ ಲಿಖಿತವಾಗಿ ಆದೇಶ ಮಾಡಬೇಕು. ಆದರೆ ಪರಿಹಾರದ ಸಂಬಂಧ ಯಾವುದೇ ನಿರ್ಣಯ ಕೈಗೊಳ್ಳದೇ ಏಕಾಏಕಿ ರಸ್ತೆ ಅಗಲೀಕರಣಕ್ಕೆ ಶಂಕುಸ್ಥಾಪನೆ ಮಾಡಿರುವುದು ಸರಿಯಲ್ಲ.

- ಚಂದ್ರೇಗೌಡ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News