ಗದಗ ಜಿಲ್ಲೆಯಲ್ಲಿ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಜು.21ರಂದು ಸಂಕಲ್ಪ ದಿನ: ಬಡಗಲಪುರ ನಾಗೇಂದ್ರ

Update: 2021-07-07 12:27 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.7: ಕೃಷಿ ಹಾಗೂ ಪ್ರಜಾಪ್ರಭುತ್ವ ರಕ್ಷಿಸಲು ಜು.21 ರಂದು ಸಂಕಲ್ಪ ದಿನಾಚರಣೆ ಹಮ್ಮಿಕೊಂಡಿದ್ದು, ಅಂದು ರೈತ ನಾಯಕ ರಾಕೇಶ್ ಸಿಂಗ್ ಟಿಕಾಯತ್ ಭಾಗಿಯಾಗಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಬುಧವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಸಂಕಲ್ಪ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಹೋರಾಟಗಾರರಾದ ಯೋಗೇಂದ್ರ ಯಾದವ್, ದರ್ಶನ್ ಪಾಲ್, ಯುದುವೀರಸಿಂಗ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸರಕಾರ ಜಾರಿಗೆ ಮುಂದಾಗಿರುವ ಮೂರು ಕೃಷಿ ಕಾಯ್ದೆಗಳು, ದೇಶದ ರೈತರಿಗೆ ಮಾರಕವಾಗಲಿದೆ. ಜತೆಗೆ, ದೇಶದ ಆಹಾರ ಸಾರ್ವಭೌಮತೆಯನ್ನು ನಾಶ ಮಾಡಿ ಕಾರ್ಪೊರೇಟ್ ಕಂಪೆನಿಗಳ ಮುಂದೆ ಆಹಾರಕ್ಕಾಗಿ ಜನರು ಭಿಕ್ಷಾಪಾತ್ರ ಹಿಡಿದು ನಿಲ್ಲಬೇಕಾಗುವ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದು ಹೇಳಿದರು.

ಸರ್ವಾಧಿಕಾರಿ ಧೋರಣೆ ಹೊಂದಿರುವ ಕೇಂದ್ರ ಸರಕಾರ ನೀತಿಗಳನ್ನು ಖಂಡಿಸಿ ರೈತರ ಬಂಡಾಯ ದಿನವಾದ ಜು.21ರಂದು ಸಂಕಲ್ಪ ದಿನಾಚರಣೆ ಮಾಡಲಾಗುತ್ತಿದೆ ಎಂದ ಅವರು, ರಾಜ್ಯದ ಕೆಆಎರ್ ಎಸ್ ಅಣೆಕಟ್ಟು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಅಣೆಕಟ್ಟುವಿಗೆ ಅಪಾಯವಿದೆ ಎಂದು ರೈತ ನಾಯಕ, ಮಾಜಿ ಶಾಸಕ ಕೆ.ಎಸ್.ಪುಟ್ಟಣ್ಯಯ್ಯ ಅವರು ಈ ಹಿಂದೆಯೇ ಹೇಳಿದ್ದರು.
ಇದು ನಿಜವಾಗಿದ್ದು, ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಮಂಡಳಿಯೂ ವರದಿ ನೀಡಿದೆ. ಇನ್ನೂ, ಸಂಸದೆ ಸುಮಲತಾ ಅಂಬರೀಶ್ ಸಹ ಹೇಳುತ್ತಿರುವುದು ನಿಜ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ಕಾರ್ಯಾಧ್ಯಕ್ಷ ರಾಮುಚನ್ನಪಟ್ಟಣ, ಕಾರ್ಯದರ್ಶಿ ಪಿ.ಗೋಪಾಲ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News