ಕೇಂದ್ರ ಸಂಪುಟ ಪುನಾರಚನೆ: ಕರ್ನಾಟಕದ ನಾಲ್ವರು ಸೇರಿ 43 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ

Update: 2021-07-07 14:53 GMT
photo: ANI

ಹೊಸದಿಲ್ಲಿ: ರಾಷ್ಟ್ರಪತಿ ಭವನದಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ  ಕರ್ನಾಟಕದ ನಾಲ್ವರು ಸಂಸದರು ಸೇರಿದಂತೆ ಒಟ್ಟು 43 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೊಸ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಒಟ್ಟು 15 ಮಂದಿ ಸಂಪುಟ ದರ್ಜೆ ಸಚಿವರಾಗಿ ಹಾಗೂ ಇನ್ನೂ 28 ಸಂಸದರು ರಾಜ್ಯ ಸಚಿವರಾಗಿ (ಎಂಒಎಸ್) ಪ್ರಮಾಣವಚನ ಸ್ವೀಕರಿಸಿದರು.

ಅನುರಾಗ್ ಠಾಕೂರ್, ಜಿ.ಕೃಷ್ಣ ರೆಡ್ಡಿ, ಪುರುಷೋತ್ತಮ್ ರೂಪಾಲ, ಕಿರಣ್ ರಿಜಿಜು, ಹರ್ ದೀಪ್ ಸಿಂಗ್ ಪುರಿ, ಸಹಿತ 7 ಸಚಿವರಿಗೆ  ಭಡ್ತಿ ನೀಡಲಾಗಿದ್ದು , 36 ಮಂದಿ ಹೊಸಬರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ಕ್ಯಾಬಿನೆಟ್ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಖಾತೆಗಳನ್ನು ಇಂದು ರಾತ್ರಿ ಘೋಷಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ನಿಸಿತ್ ಪ್ರಮಾಣಿಕ್ (35 ವರ್ಷ) ದೇಶದ ಕೇಂದ್ರ ಸಂಪುಟದಲ್ಲಿ ಅತ್ಯಂತ ಕಿರಿಯ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಮಹಾರಾಷ್ಟದ ಮಾಜಿ ಮುಖ್ಯಮಂತ್ರಿ, ರಾಜ್ಯಸಭಾ ಸದಸ್ಯರಾದ ನಾರಾಯಣ ರಾಣೆ, ಅಸ್ಸಾಂ ಮಾಜಿ ಸಿಎಂ ಸರ್ಬಾನಂದ ಸೋನೊವಾಲ್, ಮಧ್ಯಪ್ರದೇಶದ ಡಾ.ವೀರೇಂದ್ರ ಕುಮಾರ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲಿಗರಾಗಿದ್ದಾರೆ.

ಬಿಜೆಪಿಯ ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂಧಿಯಾ, ಜೆಡಿಯುನ ರಾಮಚಂದ್ರ ಪ್ರಸಾದ್ ಸಿಂಗ್ , ಒಡಿಶಾದ ಅಶ್ವಿನಿ ವೈಷ್ಣವ್, ಕರ್ನಾಟಕದ ನಾಲ್ವರು ಸಂಸದರಾದ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಎ.ನಾರಾಯಣ ಸ್ವಾಮಿ ಹಾಗೂ ಭಗವಂತ್ ಖೂಬಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಕಿರಣ್ ರಿಜಿಜು, ಅನುರಾಗ್ ಠಾಕೂರ್, ಕಿಶನ್ ರೆಡ್ಡಿ ಹಾಗೂ ಆರ್.ಕೆ. ಸಿಂಗ್ ಮತ್ತಿತರರು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

2019ರ ಮೇ ನಲ್ಲಿ ನರೇಂದ್ರ ಮೋದಿ ಅವರು 2ನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿ ಕೇಂದ್ರ ಸಂಪುಟ ಪುನರ್ ರಚನೆ ಆಗಿದೆ. ಹೊಸಬರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ, ಆರೋಗ್ಯ ಸಚಿವ ಹರ್ಷವರ್ಧನ್, ಐಟಿ ಸಚಿವ ರವಿಶಂಕರ್ ಪ್ರಸಾದ್,ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಸಹಿತ 12 ಸಚಿವರು ರಾಷ್ಟ್ರಪತಿಗೆ  ರಾಜೀನಾಮೆ ನೀಡಿದ್ದು, ರಾಷ್ಟ್ರಪತಿಗಳು ಎಲ್ಲ ರಾಜೀನಾಮೆ ಅಂಗೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News