ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ರಾಜ್ಯದ ನಾಲ್ವರ ಪರಿಚಯ

Update: 2021-07-07 16:27 GMT

► ಶೋಭಾ ಕರಂದ್ಲಾಜೆ

ಸಂಸದೆ ಶೋಭಾ ಕರಂದ್ಲಾಜೆ ಅವರು ಅಕ್ಟೋಬರ್, 23, 1966ರಲ್ಲಿ ಕರಾವಳಿಯ ಪುತ್ತೂರಿನಲ್ಲಿ ಮೋನಪ್ಪಗೌಡ ಮತ್ತು ಪೂವಕ್ಕ ದಂಪತಿ ಮಗಳಾಗಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ರಾಜಕಾರಣದ ಬಗ್ಗೆ ಒಲವು ಹೊಂದಿದ್ದ ಅವರು, ರಾಷ್ಟ್ರೀಯ ಸ್ವಯಂ ಸೇವಾ ಸಂಘದಲ್ಲಿ ಸಕ್ರಿಯರಾಗಿದ್ದರು. 2004ರಲ್ಲಿ ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. 2008ರಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧಿಸಿ ಗೆಲುವು ಸಾಧಿಸಿದರು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆಯಾಗಿಯೂ ಕಾರ್ಯನಿರ್ವಹಿಸಿದರು.

2014ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ 1.81 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. 2019ರಲ್ಲಿ ನಡೆದ 17ನೇ ಲೋಕಸಭಾ ಚುನಾವಣೆಯಲ್ಲಿ ಎರಡನೇ ಬಾರಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರನ್ನು ಸೋಲಿಸಿ ಎರಡನೇ ಬಾರೀ ಸಂಸದರಾಗಿ ಆಯ್ಕೆಯಾದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವೆಯಾಗಿ ಸೇರ್ಪಡೆಗೊಂಡಿರುವ ಅವರು, ಬುಧವಾರ ಸಂಜೆ 6ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರಮಾಣವಚನ ಸ್ವೀಕರಿಸಿದ್ದಾರೆ. 

►  ಎ.ನಾರಾಯಣಸ್ವಾಮಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಮೊದಲ ಅವಧಿಯಲ್ಲೇ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಹೆಗ್ಗಳಿಕೆ ಎ.ನಾರಾಯಣಸ್ವಾಮಿ ಅವರದ್ದಾಗಿದೆ.

ಆನೇಕಲ್ ಮೂಲದ ಎ.ನಾರಾಯಣಸ್ವಾಮಿ ಮೇ 16, 1957ರಂದು ಅಬ್ಬಯ್ಯ ಮತ್ತು ತಿಮ್ಮಕ್ಕ ದಂಪತಿಯ ಪುತ್ರನಾಗಿ ಜನಿಸಿದರು.  ನಾರಾಯಣಸ್ವಾಮಿ ಅವರು ವಿಜಯಲಕ್ಷ್ಮೀ ಎಂಬವರನ್ನು ವಿವಾಹವಾಗಿದ್ದು, ದಂಪತಿಗೆ ಶೀತಲ್, ಕೌಶಲ್ಯ, ಸಿರಿಷಾ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ. ಬಿಎ ಪದವೀಧರರಾಗಿರುವ ಇವರು ಕೃಷಿ, ವ್ಯಾಪಾರ, ಸಮಾಜ ಸೇವೆ ಮತ್ತು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ನಿವಾಸಿಯಾದ ನಾರಾಯಣಸ್ವಾಮಿ 2019ರಲ್ಲಿ ಚಿತ್ರದುರ್ಗ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಧುಮುಕಿ 85 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ತಮ್ಮ ವಿದ್ಯಾರ್ಥಿ ದಿಸೆಯಿಂದಲೂ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಇವರು ಸಂಘ ಪರಿವಾರದ ನಾಯಕರಿಗೂ ಅತ್ಯಂತ ಆಪ್ತರು.

1996ರಲ್ಲಿ ಆನೇಕಲ್ ಪುರಸಭೆಗೆ ನಡೆದ ಚುನಾವಣೆಯಲ್ಲಿ ಸದಸ್ಯರಾಗಿ ಆಯ್ಕೆಯಾದರು. ಮರು ವರ್ಷವೇ 1997ರಲ್ಲಿ ಆನೇಕಲ್ ಕ್ಷೇತ್ರದ ಶಾಸಕರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. 1999, 2004 ಮತ್ತು 2008ರಲ್ಲಿ ಸತತ ನಾಲ್ಕು ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆ ಆಗಿದ್ದರು. 2010ರಲ್ಲಿ ಸಮಾಜ ಕಲ್ಯಾಣ ಹಾಗೂ ಬಂದೀಖಾನೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 

ಬಳಿಕ 2013, 2018ರಲ್ಲಿ ನಡೆದ ಚುನಾವಣೆಗಳಲ್ಲಿ ಸೋಲು ಕಂಡಿದ್ದ ಎ.ನಾರಾಯಣಸ್ವಾಮಿ ಬಳಿಕ 2019ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆ ಆಗಿದ್ದರು. ಬಿಜೆಪಿ ರಾಷ್ಟ್ರೀಯ ಎಸ್ಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ನಾರಾಯಣಸ್ವಾಮಿ ಅವರಿಗೆ ಇದೆ.

ಸಂಸದರಾದ ಬಳಿಕ ಚಿತ್ರದುರ್ಗ-ತುಮಕೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ, ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಯೋಜನೆ ಸೇರಿದಂತೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮ ತೊಡಗಿಸಿಕೊಂಡಿದ್ದರು. ಮಾದಿಗ ಸಮುದಾಯಕ್ಕೆ ಸೇರಿದ ನಾರಾಯಣಸ್ವಾಮಿ, ದಲಿತ ಸಮುದಾಯದ ಮೇಲೂ ಹಿಡಿತ ಸಾಧಿಸಿದ್ದಾರೆ. 

ಇದೀಗ ಮೋದಿ ನೇತೃತ್ವದ ಸಂಪುಟದಲ್ಲಿ ಮಂತ್ರಿ ಸ್ಥಾನ ಗಿಟ್ಟಿಸಿದ್ದಾರೆ. ರಾಜ್ಯದಲ್ಲಿ ದಲಿತ-ಲಿಂಗಾಯತ ಸಮ್ಮಿಶ್ರಣದಲ್ಲಿ ಕೇಂದ್ರ ಸಂಪುಟ ರಚಿಸಲು ಬಿಜೆಪಿ ಹೈಕಮಾಂಡ್ ಯೋಜನೆ ರೂಪಿಸಿದಂತಿದ್ದು, ದಲಿತ ಎಡಗೈ(ಮಾದಿಗ) ಸಮುದಾಯವನ್ನು ಬಿಜೆಪಿ ಹಿಡಿದಿಟ್ಟುಕೊಳ್ಳುವ ಮೂಲಕ ಮುಂಬರುವ ವಿಧಾನಸಭೆ, ಲೋಕಸಭೆ ಚುನಾವಣೆ ಗೆಲ್ಲಲು ತಂತ್ರ ರೂಪಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

► ಉದ್ಯಮಿ ರಾಜೀವ್ ಚಂದ್ರಶೇಖರ್ ಗೆ ಒಲಿದ ಕೇಂದ್ರ ಸಚಿವ ಸ್ಥಾನ
ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅವರು ಕೇಂದ್ರ ಸಚಿವ ಸಂಪುಟ ಸೇರಿದ್ದು, ಉದ್ಯಮಿ, ಮಾಧ್ಯಮ ಸಂಸ್ಥೆಗಳ ಮಾಲಕರೂ ಆಗಿರುವ ಅವರಿಗೆ ಕೇಂದ್ರ ಸಂಪುಟ ಸ್ಥಾನ ದಕ್ಕಿದೆ.

ರಾಜೀವ್ ಚಂದ್ರಶೇಖರ್ ಅವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ರಾಜ್ಯಸಭಾ ಸದಸ್ಯರಾಗಿದ್ದು, 2006ರಲ್ಲಿ ರಾಜಕೀಯ ಪ್ರವೇಶಿಸಿದ ಅವರು ಮೂರನೇ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ್ದರು. ಹಿಂದಿನ ಎರಡು ಅವಧಿಗೆ ಅವರು ಪಕ್ಷೇತರ ಸದಸ್ಯರಾಗಿದ್ದರು. ಮಾಧ್ಯಮ ಸಂಸ್ಥೆಗಳ ಮಾಲಕರೂ ಆಗಿರುವ ರಾಜೀವ್ ಚಂದ್ರಶೇಖರ್ ಹಲವು ರಾಷ್ಟ್ರೀಯ ಮಾಧ್ಯಮಗಳ ಮುಖ್ಯಸ್ಥರೊಂದಿಗೆ ಹತ್ತಿರದ ಒಡನಾಟ ಹೊಂದಿದ್ದಾರೆ.

ರಾಜೀವ್ ಚಂದ್ರಶೇಖರ್ 31 ಮೇ 1964ರಲ್ಲಿ ಜನಿಸಿದ್ದು, ಇವರು ರಾಜಕಾರಣಿ ಮತ್ತು ಉದ್ಯಮಿ, 2006ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಚುನಾಯಿತರಾದರು. ಇವರು ಎಫ್‍ಐಸಿಸಿಐ-ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಕಿರಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2012ರಲ್ಲಿ ರಾಜ್ಯಸಭೆಗೆ ಎರಡನೆ ಬಾರಿಗೆ ಮರು ಆಯ್ಕೆಯಾದರು.

ವಾಯುಪಡೆಯ ಅಧಿಕಾರಿಯ ಪುತ್ರನಾಗಿರುವ, ಅಹಮದಾಬಾದ್‍ನಲ್ಲಿ ಮಲಯಾಳಿ ಪೋಷಕರಿಗೆ ಜನಿಸಿದ ರಾಜೀವ್, ಸುಮಾರು ಮೂರು ದಶಕಗಳನ್ನು ಬೆಂಗಳೂರು ನಗರದಲ್ಲಿ ಕಳೆದಿದ್ದಾರೆ. 1981ರಲ್ಲಿ ಮಣಿಪಾಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‍ನಲ್ಲಿ ಪದವಿ, 1986ರಲ್ಲಿ ಚಿಕಾಗೋದ ಇಲಿನಾಯ್ಸ್ ಇನ್ಸ್ಟಿಟ್ಯೂಟ್‍ನಿಂದ 1986ರಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉದ್ಯಮಿಯಾಗಿ ರಾಜೀವ್ ಚಂದ್ರಶೇಖರ್ ಗಮನ ಸೆಳೆದಿದ್ದಾರೆ.

► ಧರಂ ಸಿಂಗ್ ರನ್ನು ಸೋಲಿಸಿದ್ದ ಖೂಬಾಗೆ ದಕ್ಕಿದ ಸ್ಥಾನ
ಕಾಂಗ್ರೆಸ್ ಪಕ್ಷದ ಸೋಲಿಲ್ಲದ ಸರದಾರನೆಂಬ ಖ್ಯಾತಿ ಗಳಿಸಿದ್ದ ಅತ್ಯಂತ ಪ್ರಭಾವಿ ನಾಯಕ ಧರಂ ಸಿಂಗ್ ಅವರನ್ನು 2014ರ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದ್ದ ಮತ್ತು 2019ರ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ ಬೀದರ್ ಲೋಕಸಭಾ ಕ್ಷೇತ್ರದ ಭಗವಂತ ಖೂಬಾ ಅವರಿಗೆ ಕೇಂದ್ರ ಸಂಪುಟ ಸ್ಥಾನ ಸಿಕ್ಕಿದೆ.

1968ರ ಜೂನ್ 1ರಂದು ಬೀದರ್ ನ ಔರಾದ್ ತಾಲೂಕಿನಲ್ಲಿ ಗುರುಬಸಪ್ಪಾ ಖೂಬಾ ಹಾಗೂ ಮಹಾದೇವಿ ದಂಪತಿ ಪುತ್ರರಾಗಿ ಜನಿಸಿದ ಖೂಬಾ, ಸರಕಾರಿ ಪ್ರಾಥಮಿಕ ಶಾಲೆ ಔರಾದ್‍ನಲ್ಲಿ ಪ್ರಾಥಮಿಕ ಶಿಕ್ಷಣ, ಬೀದರ್ ನ ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಬೀದರ್ ನ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿದ ಖೂಬಾ ನಂತರ ಪದವಿ ಶಿಕ್ಷಣಕ್ಕೆ ತುಮಕೂರಿಗೆ ಬಂದರು. 

1991ರಲ್ಲಿ ತುಮಕೂರಿನ ಸಿದ್ದಗಂಗಾ ಮಠದಿಂದ ನಡೆಸಲ್ಪಡುತ್ತಿದ್ದ ಸಿದ್ಧಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಅವರು ಮುಂದೆ ಗುತ್ತೆಗೆದಾರನಾಗಿ ವೃತ್ತಿ ಬದುಕು ಆರಂಭಿಸಿದರು. ದೇಶದ ಪ್ರಮುಖ ನಿರ್ಮಾಣ ಕ್ಷೇತ್ರದ ಎಲ್ ಆಂಡ್ ಟಿ, ಎಚ್‍ಸಿಸಿ ಮೊದಲಾದ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ರಸ್ತೆ ಕಾಮಗಾರಿಗಳು, ರೈಲ್ವೆ ಯೋಜನೆಗಳನ್ನು ನಿರ್ಮಿಸಿದ ಹೆಗ್ಗಳಿಕೆ ಇವರದ್ದು.

ಆ ಬಳಿಕ ರಾಜಕೀಯದತ್ತಲೂ ಚಿತ್ತ ಹರಿಸಿ ಜನಸೇವೆಗೆ ಇಳಿದ ಖೂಬಾ ಅವರಿಗೆ 2014ರಲ್ಲಿ ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಹಾಗೆ ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಮಾಜಿ ಸಿಎಂ ಧರಂ ಸಿಂಗ್‍ರನ್ನೇ ಸೋಲಿಸಿದರು. 2019ರಲ್ಲಿ ಎರಡನೆ ಬಾರಿಗೆ ಲೋಕಸಭೆ ಪ್ರವೇಶಿಸಿದ ಖೂಬಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೂ ಕಾರಣರಾಗಿದ್ದಾರೆ. ಇದೀಗ ಅವರಿಗೆ ಕೇಂದ್ರ ಸಂಪುಟ ಸ್ಥಾನ ಸಿಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News