ಆ್ಯಂಬುಲೆನ್ಸ್ ನಿಯಂತ್ರಣಾ ಕೇಂದ್ರದ ಟೆಂಡರ್ ರದ್ದು: ಪ್ರಮಾಣ ಪತ್ರ ಸಲ್ಲಿಸುವಂತೆ ಸಚಿವ ಸುಧಾಕರ್ ಗೆ ಹೈಕೋರ್ಟ್ ಸೂಚನೆ

Update: 2021-07-07 16:20 GMT

ಬೆಂಗಳೂರು, ಜು.7: ಆ್ಯಂಬುಲೆನ್ಸ್ ನಿಯಂತ್ರಣಾ ಕೇಂದ್ರ ಸ್ಥಾಪನೆಗೆ ಕರೆಯಲಾಗಿದ್ದ 1,800 ಕೋಟಿ ರೂ.ಮೊತ್ತದ ಟೆಂಡರ್ ರದ್ದುಪಡಿಸಿರುವ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಹೈಕೋರ್ಟ್ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಸೂಚಿಸಿದೆ.

ಸಮರ್ಪಕ ಆ್ಯಂಬುಲೆನ್ಸ್ ಸೇವೆಗಾಗಿ ನಿಯಂತ್ರಣಾ ಕೇಂದ್ರ ಸ್ಥಾಪಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಭಾರತ ಪುನರುತ್ಥಾನ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ನ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಟೆಂಡರ್ ಬಗ್ಗೆ ಕೋರ್ಟ್ ಮೇಲ್ವಿಚಾರಣೆ ನಡೆಸುವಾಗ ನ್ಯಾಯಾಲಯದ ಗಮನಕ್ಕೆ ತರದೆ ಏಕಾಏಕಿ ನಿರ್ಧಾರ ಬದಲಿಸಲಾಗಿದೆ. ಟೆಂಡರ್ ರದ್ದು ಮಾಡಿರುವುದು ಸರಕಾರದ ನಿರ್ಧಾರವಲ್ಲ, ಬದಲಿಗೆ ಸಚಿವರ ವೈಯಕ್ತಿಕ ನಿರ್ಧಾರ ಎಂದು ಕಂಡುಬಂದಿದೆ. ಈ ರೀತಿಯ ನಿರ್ಧಾರ ಕೈಗೊಳ್ಳಲು ತಜ್ಞರ ಜೊತೆ ಚರ್ಚಿಸಲಾಗಿದೆ ಎಂದು ಹೇಳಲಾಗಿದೆ, ಆದರೆ ಅದಕ್ಕೂ ಯಾವುದೇ ದಾಖಲೆ ಸಲ್ಲಿಸಿಲ್ಲ. ಟೆಂಡರ್ ರದ್ದುಪಡಿಸಿರುವುದಕ್ಕೆ ನೀಡಿರುವ ಕಾರಣಗಳೂ ಸತ್ಯವಲ್ಲ, ಆರೋಗ್ಯ ಸಚಿವರ ಸೂಚನೆಯಂತೆ ಟೆಂಡರ್ ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಕಂಡುಬಂದಿದೆ. ಹೀಗಾಗಿ ಸಚಿವ ಸುಧಾಕರ್ ಪ್ರಮಾಣಪತ್ರ ಸಲ್ಲಿಸಲಿ ಎಂದು ಅಭಿಪ್ರಾಯಪಟ್ಟ ಪೀಠ, ವಿಚಾರಣೆಯನ್ನು ಜು.22ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News