ಕೋಲಾರ ಕ್ವಾರಿಗೆ ಅಕ್ರಮ ತ್ಯಾಜ್ಯ ವಿಲೇವಾರಿ: ಪರಿಶೀಲಿಸಲು ಕೆಎಸ್‍ಪಿಸಿಬಿಗೆ ಹೈಕೋರ್ಟ್ ನಿರ್ದೇಶನ

Update: 2021-07-07 16:21 GMT

ಬೆಂಗಳೂರು, ಜು.7: ಕೋಲಾರ ಜಿಲ್ಲೆಯ ಲಕ್ಷ್ಮೀ ಸಾಗರ ಗ್ರಾಮದಲ್ಲಿರುವ ಕ್ವಾರಿಗೆ ಹೊಸಕೋಟೆ ನಗರಸಭೆ ಅಧಿಕಾರಿಗಳು ಅಕ್ರಮವಾಗಿ ತ್ಯಾಜ್ಯ ಸುರಿಯುತ್ತಿರುವ ಆರೋಪ ಸಂಬಂಧ ಸ್ಥಳ ಪರಿಶೀಲನೆ ನಡೆಸಲು ಹೈಕೋರ್ಟ್ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್‍ಪಿಸಿಬಿ)ಗೆ ನಿರ್ದೇಶಿಸಿದೆ.

ಈ ಕುರಿತು ಕರ್ನಾಟಕ ರಾಜ್ಯ ರೈತ ಮತ್ತು ಹಸಿರು ಸೇನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು.

ಈ ವೇಳೆ ಅರ್ಜಿದಾರರ ಪರ ವಕೀಲ ಪ್ರಿನ್ಸ್ ಐಸಾಕ್ ವಾದ ಮಂಡಿಸಿ, ಕೋಲಾರ ತಾಲೂಕಿನ ಲಕ್ಷ್ಮೀ ಸಾಗರ ಗ್ರಾಮದಲ್ಲಿ ಸ್ಥಗಿತಗೊಂಡಿರುವ ಕ್ವಾರಿಗೆ ಹೊಸಕೋಟೆ ನಗರಸಭೆ ಅಧಿಕಾರಿಗಳು ಅಕ್ರಮವಾಗಿ ಘನತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಇದರಿಂದ ಸುತ್ತಮುತ್ತಲಿನ ಪರಿಸರ ಮಲಿನಗೊಳ್ಳುತ್ತಿದೆ. ಹೀಗಾಗಿ ತ್ಯಾಜ್ಯ ಸುರಿಯದಂತೆ ನಿರ್ದೇಶಿಸಬೇಕು ಎಂದು ಪೀಠಕ್ಕೆ ಕೋರಿದರು.

ವಕೀಲರ ವಾದ ಆಲಿಸಿದ ಪೀಠ, ಕೆಎಸ್‍ಪಿಸಿಬಿಯ ಸಂಬಂಧಪಟ್ಟ ಪರಿಸರ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಒಂದು ವೇಳೆ ಸ್ಥಳದಲ್ಲಿ ಅಕ್ರಮವಾಗಿ ಘನತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಕಂಡುಬಂದರೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕು. ಹಾಗೆಯೇ, ಕೋಲಾರ ಜಿಲ್ಲಾಧಿಕಾರಿಯು ಹಿರಿಯ ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕು. ಅವರು ಪರಿಸರ ಅಧಿಕಾರಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಅಕ್ರಮ ಎಸಗುತ್ತಿರುವುದು ಕಂಡು ಬಂದರೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ನಿರ್ದೇಶಿಸಿತು. ಅಲ್ಲದೇ, ಆದೇಶದ ಅನುಪಾಲನಾ ವರದಿಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ಸೂಚಿಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News