ಅಕ್ರಮ ಗಣಿಗಾರಿಕೆ ಹಿಂದೆ ಯಾರಿದ್ದಾರೆಂಬುದು ಓಪನ್ ಸಿಕ್ರೇಟ್: ಕುಮಾರಸ್ವಾಮಿ ವಿರುದ್ಧ ಸುಮಲತಾ ವಾಗ್ದಾಳಿ

Update: 2021-07-07 17:01 GMT

ಮಂಡ್ಯ, ಜು.7: ಜಿಲ್ಲೆಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಯಾರು ಮಾಡುತ್ತಿದ್ದಾರೆ? ಇದಕ್ಕೆ ಯಾರು ಸಪೋರ್ಟ್ ಮಾಡುತ್ತಿದ್ದಾರೆ? ಯಾರಿಗೆ ಎಷ್ಟು ದುಡ್ಡು ಹೋಗುತ್ತಿದೆ? ಎಂಬುದು ಓಪನ್ ಸಿಕ್ರೇಟ್ ಎಂದು ಸಂಸದೆ ಸುಮಲತಾ ಅಂಬರೀಶ್ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಹಣ ಮಾಡುವ ಉದ್ದೇಶದಿಂದ ಸುಮಲತಾ ಅವರು ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ' ಎಂಬ ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಬುಧವಾರ ಪ್ರತಿಕ್ರಿಯಿಸಿದ ಸುಮಲತಾ, ‘ಇದು ಇದುವರೆಗೂ ಕಲ್ಲುಗಣಿಗಾರಿಕೆ ವಿಚಾರದಲ್ಲಿ ಅವರು ಏನು ಮಾಡಿಕೊಂಡು ಬಂದಿದ್ದಾರೆ ಎಂಬುದನ್ನು ತೋರಿಸುತ್ತದೆ’ ಎಂದು ತಿರುಗೇಟು ನೀಡಿದರು.

ಅಕ್ರಮ ಗಣಿಗಾರಿಕೆಯಿಂದ ಕೆಆರ್‍ಎಸ್‍ಗೆ ಅಪಾಯವಿದೆ. ಇದನ್ನು ತಪ್ಪಿಸಬೇಕಾದುದು ಸಂಸದೆಯಾಗಿ ನನ್ನ ಜವಾಬ್ಧಾರಿ. ಈ ಬಗ್ಗೆ ಧ್ವನಿ ಎತ್ತಿದರೆ ದಬ್ಬಾಳಿಕೆ, ಬ್ಲಾಕ್‍ಮೇಲ್ ಮಾಡ್ತೀರ. ನೀವೂ ಅಲ್ಲಿಗೆ ಹೋಗಲ್ಲ. ನಾನು ಹೋಗುವುದಕ್ಕೂ ಬಿಡುತ್ತಿಲ್ಲ? ಏಕೆ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಕುಮಾರಸ್ವಾಮಿ ಅವರು ತಮ್ಮ ಕಲ್ಚರ್ ಎಂತಹದ್ದೆಂದು ಪದೇ ಪದೇ ಎಕ್ಸ್ ಪೋಸ್ ಮಾಡಿಕೊಳ್ಳುತ್ತಿದ್ದು, ಅದಕ್ಕೆ ಜನರೇ ಉತ್ತರ ಕೊಡಲಿದ್ದಾರೆ. ನನ್ನ ಬಗ್ಗೆ ಆಡಿರುವ ಮಾತಿನ ಬಗ್ಗೆ ಕುಮಾರಸ್ವಾಮಿ ಅವರಿಗೆ ತಪ್ಪಿನ ಅರಿವಾಗಿದೆ ಅಂದುಕೊಂಡಿದ್ದೇನೆ. ಆದರೆ, ಅದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ ಅಷ್ಟೆ ಎಂದು ಅವರು ಹೇಳಿದರು.

ಭಾರೀ ಜಿದ್ದಾಜಿದ್ದಿಯ ಚುನಾವಣೆಯನ್ನು ಎದುರಿಸಿರುವ ನಾನು ಇಂತಹ ಯಾವುದೇ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲವೆಂದು ಹೇಳಿದ ಅವರು, ಮರುಳು ಮಾತುಗಳಿಂದ ಮಂಡ್ಯದ ಪ್ರಜ್ಞಾವಂತ ಜನರನ್ನು ಮೋಸಗೊಳಿಸಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಜವಾಬ್ಧಾರಿಯುತವಾಗಿ ನಡೆದುಕೊಳ್ಳಬೇಕು. ಬಳಸುವ ಪದಗಳ ಮೇಲೆ ಎಚ್ಚರವಿರಬೇಕು. ಮನಸ್ಸಿಗೆ ಬಂದಂತೆ ಮಾತನಾಡಿದರೆ ಆರೋಗ್ಯಕ್ಕೂ ಸಮಸ್ಯೆ. ಮುಂದೆ ಶಾಸಕರಾಗುವುದೂ ಕಷ್ಟ. ಇನ್ನೂ ಚಿಕ್ಕವರು, ತಾಳ್ಮೆಯಿಂದ ವರ್ತಿಸಬೇಕು ಎಂದು ಸುಮಲತಾ ಸಲಹೆ ನೀಡಿದರು.

ಅಕ್ರಮ ಕಲ್ಲುಗಣಿಗಾರಿಕೆಯಿಂದ ಕೆಆರ್‍ಎಸ್ ಡ್ಯಾಂಗೆ ಅಪಾಯವಿದೆ. ಸರಕಾರಕ್ಕೂ ನಷ್ಟವಾಗುತ್ತಿದೆ. ಹಾಗಾಗಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲುವವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮೈಶುಗರ್ ಆರಂಭಕ್ಕೆ ಅಡ್ಡಗಾಲು
ಕಾರ್ಖಾನೆ ಯಾವುದೇ ಕಾರಣಕ್ಕೂ ಆರಂಭವಾಗಬಾರದು ಎಂಬುದು ಮೈಶುಗರ್ ಕಾರ್ಖಾನೆ ಸರಕಾರಿ ಸ್ವಾಮ್ಯದಲ್ಲೇ ಆರಂಭವಾಗಬೇಕೆಂದು ಪಟ್ಟುಹಿಡಿದಿರುವವರ ಹಿಂದಿನ ಉದ್ದೇಶವಾಗಿದೆ ಎಂದು ಸುಮಲತಾ ಆರೋಪ ಮಾಡಿದರು.

ಸರಕಾರ ಕಾರ್ಖಾನೆ ನಡೆಸಲು ಸಾಧ್ಯವಿಲ್ಲವೆಂದು ನನಗೆ ಸ್ಪಷ್ಟಪಡಿಸಿದ್ದಾರೆ. ಹೇಗಾದರೂ ಆಗಲೀ ಕಾರ್ಖಾನೆ ಆರಂಭವಾಗಬೇಕು ಎಂಬುದು ನನ್ನ ಕಾಳಜಿ. ಆದರೆ, ಹಲವರಿಗೆ ಕಾರ್ಖಾನೆ ಆರಂಭವಾಗುವುದು ಬೇಕಿಲ್ಲ ಎಂದು ಅವರು ಆರೋಪಿಸಿದರು.

ಹೇಗಾದರೂ ಕಾರ್ಖಾನೆ ಆರಂಭಿಸಬೇಕೆಂಬುದು ಆಸೆ. ಆದರೆ, ಹಲವರು ರಾಜಕಾರಣ ಮಾಡಿಕೊಂಡು ನನ್ನ ಕೈಕಟ್ಟಿಹಾಕಿದ್ದಾರೆ ಎಂಬುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಭೇಟಿ ವೇಳೆ ಅಸಹಾಯಕತೆ ವ್ಯಕ್ತಪಡಿಸಿದರು ಎಂದು ಸುಮಲತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News