ಸ್ವದೇಶಿ ಭಯೋತ್ಪಾದನೆ- ವಿದೇಶಿ ಭಯೋತ್ಪಾದನೆ!

Update: 2021-07-08 04:53 GMT
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತ ಭಯೋತ್ಪಾದನೆಯ ಸಂತ್ರಸ್ತ ದೇಶ. ಆದುದರಿಂದಲೇ ಎಲ್ಲ ಸರಕಾರಗಳು ಭಯೋತ್ಪಾದನೆಯ ವಿರುದ್ಧ ಕಠಿಣ ನಿಲುವನ್ನು ತಾಳುತ್ತಾ ಬಂದಿವೆ. ಸ್ವಾತಂತ್ರ ಸಿಕ್ಕಿದ ಒಂದು ವರ್ಷದ ಒಳಗೆ, ‘ಸ್ವದೇಶಿ ಭಯೋತ್ಪಾದಕ’ನೊಬ್ಬ ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯನ್ನು ಕೊಂದ. ಆತನನ್ನು ಗಲ್ಲಿಗೇರಿಸಿದ ಬಳಿಕವೂ ಆ ಭಯೋತ್ಪಾದಕ ಚಿಂತನೆಗಳ ಬೇರುಗಳು ಭಾರತಾದ್ಯಂತ ಹರಡುತ್ತಿದೆ. ಪಂಜಾಬ್‌ನಲ್ಲಿ ಖಾಲಿಸ್ತಾನ ಸಂಘಟನೆಗಳ ಉಗ್ರವಾದದ ವಿರುದ್ಧವೂ ದೇಶ ಅತ್ಯಂತ ಕಠಿಣ ನಿಲುವನ್ನು ತಾಳಿತ್ತು. ಆ ಭಯೋತ್ಪಾದನಾ ವಿರೋಧಿ ಯುದ್ಧ ಅಂತಿಮವಾಗಿ ಈ ದೇಶದ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯನ್ನು ಬಲಿ ತೆಗೆದುಕೊಂಡಿತು. ಆದರೆ ಬಳಿಕ ಪಂಜಾಬ್‌ನಲ್ಲಿ ಉಗ್ರವಾದ ಒಂದಿಷ್ಟು ತಣ್ಣಗಾಯಿತು. ಎಲ್‌ಟಿಟಿಇ ತಮಿಳು ಉಗ್ರವಾದಿಗಳ ವಿರುದ್ಧದ ಹೋರಾಟದಲ್ಲೂ ಕೈ ಜೋಡಿಸಲು ಸರಕಾರ ಹಿಂದೇಟು ಹಾಕಲಿಲ್ಲ. ಶ್ರೀಲಂಕಾದ ಎಲ್‌ಟಿಟಿಇ ಉಗ್ರವಾದಿಗಳ ವಿರುದ್ಧದ ಹೋರಾಟದಲ್ಲಿ ಭಾರತ ಇನ್ನೋರ್ವ ಧೀಮಂತ ನಾಯಕ ರಾಜೀವ್‌ಗಾಂಧಿಯನ್ನು ಕಳೆದುಕೊಳ್ಳಬೇಕಾಯಿತು. ಕಾಶ್ಮೀರದಲ್ಲಿ ಉಗ್ರವಾದಿಗಳನ್ನು ದಮನಿಸುವುದರಲ್ಲೂ ಸರಕಾರ ಸರಕಾರ ಸಾಕಷ್ಟು ಸೈನಿಕರನ್ನು ಕಳೆದುಕೊಂಡಿದೆ. ಮುಂಬೈ ದಾಳಿ, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ, ಮಾಲೆಗಾಂವ್ ಸ್ಫೋಟ, ಮುಂಬೈ ಸ್ಫೋಟ, ಸಂಸತ್ ಮೇಲಿನ ದಾಳಿ ಇವೆಲ್ಲವೂ ಭಯೋತ್ಪಾದನೆಯ ಬೇರೆ ಬೇರೆ ಮುಖಗಳೇ ಆಗಿವೆ. ಇವೆಲ್ಲವನ್ನು ಭಾರತ ಸಮರ್ಥವಾಗಿ ಎದುರಿಸಿದೆ. ಆದುದರಿಂದ ವಿಶ್ವ ಭಯೋತ್ಪಾದನೆಯ ವಿರುದ್ಧ ಮಾತನಾಡುವ ನೈತಿಕತೆಯನ್ನು ಭಾರತ ಎಂದೆಂದಿಗೂ ಉಳಿಸಿಕೊಳ್ಳುತ್ತಾ ಬಂದಿದೆ.

ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಅದಿವೇಶನದಲ್ಲಿ ಜಾಗತಿಕ ಭೀತಿವಾದ ನಿಗ್ರಹ ರಣ ನೀತಿಯ ಏಳನೇ ಪುನರ್ ಪರಿಶೀಲನೆ ಸಭೆಯಲ್ಲಿ ಭಾರತ ಭಯೋತ್ಪಾದನೆಯ ಬಗ್ಗೆ ತನ್ನ ನೀತಿಯನ್ನು ಸ್ಪಷ್ಟ ಪಡಿಸಿದೆ. ಭಯೋತ್ಪಾದನೆಯನ್ನು ಎದುರಿಸುವ ಸಂದರ್ಭದಲ್ಲಿ ದ್ವಂದ್ವ ನೀತಿಯನ್ನು ಅನುಸರಿಸಬಾರದು ಎಂದು ಸಲಹೆ ನೀಡಿದೆ. ‘ನಮ್ಮ ಭಯೋತ್ಪಾದಕರು-ನಿಮ್ಮ ಭಯೋತ್ಪಾದಕರು’ ಎನ್ನುವ ಯುಗಕ್ಕೆ ಮರಳಬೇಡಿ ಎಂದು ಕಿವಿಮಾತು ಹೇಳಿದೆ. ‘20 ವರ್ಷಗಳ ಬಳಿಕ ಜನಾಂಗೀಯ ಪ್ರೇರಿತ ಹಿಂಸಾತ್ಮಕ ಉಗ್ರವಾದ, ಹಿಂಸಾತ್ಮಕ ರಾಷ್ಟ್ರವಾದ, ಬಲಪಂಥೀಯ ಉಗ್ರವಾದ ಇತ್ಯಾದಿ ಹೊಸ ಶಬ್ದಗಳನ್ನು ಅಳವಡಿಸುವ ಮೂಲಕ ಮತ್ತೊಮ್ಮೆ ನಮ್ಮನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದೆ....’ ಎಂದೂ ಭಾರತ ಎಚ್ಚರಿಸಿದೆ. ಭಾರತ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಯ ಕುರಿತಂತೆ ಮಾತನಾಡುವಾಗ, ಅದರ ನೇರ ಗುರಿ ಪಾಕಿಸ್ತಾನವಾಗಿರುತ್ತದೆ. ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿಸುತ್ತಿರುವ ಭಯೋತ್ಪಾದನೆಯ ವಿರುದ್ಧ ಜಗತ್ತು ಮಾತನಾಡಬೇಕು ಎಂದು ಹಲವು ದಶಕಗಳಿಂದ ಭಾರತ ಒತ್ತಾಯಿಸುತ್ತಾ ಬಂದಿದೆ. ಭಯೋತ್ಪಾದನೆಯ ಪ್ರಕರಣಗಳನ್ನು ವಿಭಜಿಸುವ ಪ್ರಯತ್ನ ಬೇಡ ಎನ್ನುವ ಭಾರತದ ನಿಲುವನ್ನು ಪೂರ್ಣವಾಗಿ ಜಗತ್ತು ಒಪ್ಪುತ್ತದೆ ಎಂದು ಹೇಳುವುದು ಕಷ್ಟ. ಯಾಕೆಂದರೆ, ಇತ್ತೀಚಿನ ದಿನಗಳಲ್ಲಿ ಜಗತ್ತು, ಭಾರತದೊಳಗೆ ಬೇರೆ ಬೇರೆ ರೂಪಗಳಲ್ಲಿ ಬೆಳೆಯುತ್ತಿರುವ ಭಯೋತ್ಪಾದನೆಗಳನ್ನು ಆತಂಕದಿಂದ ನೋಡುತ್ತಿದೆ. ಪ್ರಜಾಸತ್ತಾತ್ಮಕ ಸರಕಾರದ ದಮನ ನೀತಿಗಳು ದೇಶದೊಳಗಿನ ಮಾನವ ಹಕ್ಕು ಹೋರಾಟಗಾರರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರನ್ನು ಹೇಗೆ ಬಲಿ ಹಾಕುತ್ತಿದೆ ಎನ್ನುವುದನ್ನು ಆತಂಕದಿಂದ ಜಗತ್ತು ಗಮನಿಸುತ್ತಿದೆ. ಆದುದರಿಂದ, ವಿಶ್ವ ಹೇಗೆ ಭಯೋತ್ಪಾದನೆಯ ಕುರಿತಂತೆ ದ್ವಂದ್ವ ನಿಲುವನ್ನು ಅನುಸರಿಸಬಾರದೋ, ಭಾರತವೂ ಕೂಡ ದೇಶದೊಳಗಿನ ಭಯೋತ್ಪಾದನಾ ದಮನದ ವಿಷಯದಲ್ಲಿ ತನ್ನ ತಪ್ಪುಗಳನ್ನು ತಿದ್ದುಕೊಳ್ಳಬೇಕಾದ ಅಗತ್ಯವಿದೆ.

ಭಾರತದಲ್ಲಿ ನಡೆದ ಹಲವು ಸ್ಫೋಟಗಳಲ್ಲಿ ಪಾಕಿಸ್ತಾನದ ಕೈವಾಡವಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಇದೇ ಸಂದರ್ಭದಲ್ಲಿ ಮಕ್ಕಾ ಮಸ್ಜಿದ್ ಸ್ಫೋಟ, ಮಾಲೆಗಾಂವ್ ಸ್ಫೋಟ, ಅಜ್ಮೀರ್ ಸ್ಫೋಟ, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಇವುಗಳಲ್ಲಿ ‘ಸ್ವದೇಶಿ ಭಯೋತ್ಪಾದಕರ’ ಪಾತ್ರವನ್ನು ಪೂರ್ಣ ಪ್ರಮಾಣದಲ್ಲಿ ನಿರಾಕರಿಸುವಂತಿಲ್ಲ. ಗೌರಿ ಲಂಕೇಶ್, ದಾಭೋಲ್ಕರ್ ಮೊದಲಾದ ಚಿಂತಕರನ್ನು ಕೊಂದು ಹಾಕಿರುವುದೂ ಸ್ವದೇಶಿ ಭಯೋತ್ಪಾದಕರೇ ಆಗಿದ್ದಾರೆ. ಕಳೆದ ಒಂದು ದಶಕದಲ್ಲಿ ಆ ಸ್ವದೇಶಿ ಭಯೋತ್ಪಾದಕರು ಭಾರತ ಸರಕಾರದ ನೆರಳಲ್ಲೇ ಓಡಾಡುತ್ತಿದ್ದಾರೆ. ಅಷ್ಟೇ ಯಾಕೆ ಮಾಲೆಗಾಂವ್ ಸ್ಫೋಟದ ಆರೋಪಿಗಳಲ್ಲಿ ಒಬ್ಬರಾಗಿರುವ ಪ್ರಜ್ಞಾಸಿಂಗ್‌ಗೆ ಬಿಜೆಪಿ ಚುನಾವಣೆಗೆ ಟಿಕೆಟ್ ನೀಡಿ ಸ್ಪರ್ಧಿಸಲು ಅವಕಾಶ ನೀಡಿತು. ಅಟಲ್ ಬಿಹಾರಿ ವಾಜಪೇಯಿ ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಸಂಸತ್‌ಗೆ ಉಗ್ರರು ದಾಳಿ ನಡೆಸಿದರು. ಆದರೆ ಮೋದಿ ಪ್ರಧಾನಿಯಾದ ಕಾಲದಲ್ಲಿ, ಸ್ಫೋಟ ಆರೋಪಿಯೊಬ್ಬರು ಅಧಿಕೃತವಾಗಿ ಸಂಸತ್‌ನೊಳಗೆ ಪ್ರವೇಶಿಸಿದರು. ದೇಶದಲ್ಲಿ ಕ್ರಿಮಿನಲ್ ಹಿನ್ನೆಲೆಯಿರುವ ರಾಜಕಾರಣಿಗಳ ಸಂಖ್ಯೆ ಬಹುದೊಡ್ಡದಿದೆ. ಆದರೆ ಮೊದಲ ಬಾರಿಗೆ ದೇಶದ ವಿರುದ್ಧ ಸಂಚು ನಡೆಸಿದ ಆರೋಪ ಹೊತ್ತ ಮಹಿಳೆಯನ್ನು ಸಂಸದರನ್ನಾಗಿ ಮಾಡುವ ಮೂಲಕ, ಭಯೋತ್ಪಾದನೆಯ ಕುರಿತಂತೆ ತನ್ನ ನಿಲುವು ಏನು ಎನ್ನುವುದನ್ನು ಬಿಜೆಪಿ ವಿಶ್ವಕ್ಕೆ ಜಾಹೀರು ಪಡಿಸಿತು. ಸ್ವದೇಶಿ ಭಯೋತ್ಪಾದಕರೇ ಆಗಿದ್ದ ಖಾಲಿಸ್ತಾನ್‌ನ್ನು ಮಟ್ಟ ಹಾಕಲು ಇಂದಿರಾಗಾಂಧಿ ತನ್ನ ಪ್ರಾಣವನ್ನೇ ಒತ್ತೆಯಿಟ್ಟರು.

ಅವರು ಅದರಲ್ಲಿ ಯಾವುದೇ ದ್ವಂದ್ವ ನೀತಿಯನ್ನು ಅನುಸರಿಸಲಿಲ್ಲ. ಆದರೆ ಇಂದು ಮೋದಿ ನೇತೃತ್ವದ ಸರಕಾರ ಮಡಿಲಲ್ಲಿ ಭಯೋತ್ಪಾದಕರನ್ನು ಸಾಕುತ್ತಾ ವಿಶ್ವಕ್ಕೆ ಭಯೋತ್ಪಾದನೆಯ ಬಗ್ಗೆ ಪಾಠ ಮಾಡಲು ಹೊರಟಿದೆ. ಆದುದರಿಂದಲೇ ಭಾರತದ ಮಾತುಗಳನ್ನು ಜಗತ್ತು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹೇಮಂತ್ ಕರ್ಕರೆ ತಂಡ, ಈ ದೇಶದೊಳಗೆ ಬೇರು ಬಿಟ್ಟಿರುವ ಸ್ವದೇಶಿ ಭಯೋತ್ಪಾದಕರ ಕುರಿತಂತೆ ತನಿಖೆ ನಡೆಸಿತ್ತು. ಇನ್ನೇನು ಆರೆಸ್ಸೆಸ್ ಪ್ರಮುಖರ ಹೆಸರುಗಳು ಒಂದೊಂದಾಗಿ ಹೊರ ಬರಬೇಕು ಎನ್ನುವಷ್ಟರಲ್ಲಿ ಇಡೀ ತನಿಖಾ ತಂಡವೇ ನಿಗೂಢವಾಗಿ ಕೊಲೆಗೈಯಲಟ್ಟಿತು. ಹೇಮಂತ್ ಕರ್ಕರೆಯ ತನಿಖೆಯ ಪರಿಣಾಮವಾಗಿಯೇ ಪ್ರಜ್ಞಾಸಿಂಗ್ ಜೈಲು ಸೇರಬೇಕಾಯಿತು. ಆದರೆ, ಜೈಲಿನಿಂದ ಹೊರಬಂದ ಪ್ರಜ್ಞಾಸಿಂಗ್ ಹುತಾತ್ಮ ಕರ್ಕರೆಯ ಕುರಿತಂತೆ ಹೀನಾಯವಾಗಿ ಮಾತನಾಡಿದರು. ಇಂತಹ ವಾತಾವರಣದಲ್ಲಿ ಈ ದೇಶದ ತನಿಖಾ ತಂಡ ಭಯೋತ್ಪಾದನೆಯನ್ನು ಮಟ್ಟಹಾಕುವುದಾದರೂ ಹೇಗೆ ಸಾಧ್ಯ? ಸ್ವತಂತ್ರ ಭಾರತದ ಮೊತ್ತ ಮೊದಲ ಭಯೋತ್ಪಾದಕನೆಂದು ಗುರುತಿಸಲ್ಪಟ್ಟ ನಾಥೂರಾಂಗೋಡ್ಸೆಯನ್ನು ಬಹಿರಂಗವಾಗಿ ಆರಾಧಿಸಿದರೂ, ಗಾಂಧಿಯ ಕೊಲೆಯನ್ನು ಸಮರ್ಥಿಸಿದರೂ ಅವರ ಮೇಲೆ ಸರಕಾರ ದೇಶದ್ರೋಹದ ಕಾನೂನು ಜಡಿಯದೆ ಸ್ವತಂತ್ರವಾಗಿ ಓಡಾಡಲು ಅವಕಾಶ ನೀಡುತ್ತದೆ. ಅದೇ ಸಂದರ್ಭದಲ್ಲಿ ಒಬ್ಬ ವೃದ್ಧ ಸಾಮಾಜಿಕ ಕಾರ್ಯಕರ್ತ ಸ್ಟಾನ್ ಸ್ವಾಮಿಯನ್ನು ಯುಎಪಿಎ ಕಾಯ್ದೆಯಡಿ ಬಂಧಿಸಿ ಅವರನ್ನು ಜೈಲಿನಲ್ಲೇ ಹಂತ ಹಂತವಾಗಿ ಸಾಯಿಸುತ್ತದೆ. ಕೇಸರಿ ಭಯೋತ್ಪಾದನೆ ಇಂದು ದೇಶವನ್ನು ಹಂತ ಹಂತವಾಗಿ ತನ್ನ ಕೈಗೆ ತೆಗೆದುಕೊಳ್ಳುತ್ತಿರುವಾಗ, ಭಾರತ ಅದೆಷ್ಟು ಜೋರು ದನಿಯಲ್ಲಿ ಜಾಗತಿಕ ಭಯೋತ್ಪಾದನೆಯ ಬಗ್ಗೆ ಮಾತನಾಡಿದರೂ, ಅದನ್ನು ವ್ಯಂಗ್ಯವಾಗಿಯಷ್ಟೇ ಜಗತ್ತು ಸ್ವೀಕರಿಸಬಹುದು. ಆದುದರಿಂದ, ಮೊತ್ತ ಮೊದಲು ಭಾರತ ಸರಕಾರ ದೇಶದೊಳಗೆ ಭಯೋತ್ಪಾದನೆಯ ಕುರಿತ ತನ್ನ ದ್ವಂದ್ವ ನಿಲುವುಗಳನ್ನು ತಿದ್ದಿಕೊಳ್ಳಬೇಕಾಗಿದೆ. ಆ ಮೂಲಕ ಜಗತ್ತಿಗೆ ಮಾದರಿಯಾಗಬೇಕು. ಆಗಷ್ಟೇ ನಾವು ವಿಶ್ವಕ್ಕೆ ಬುದ್ಧಿ ಹೇಳುವ ನೈತಿಕತೆಯನ್ನು ಪಡೆಯುತ್ತೇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News