ಸ್ಟ್ಯಾನ್ ಸ್ವಾಮಿಯ ‘ಸಾಂಸ್ಥಿಕ ಸಾವು’ ಪ್ರತಿಭಟಿಸಿ ಸಹ ಆರೋಪಿಗಳಿಂದ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ

Update: 2021-07-07 18:47 GMT

ಮುಂಬೈ: ಎಲ್ಗರ್ ಪರಿಷದ್ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದಾಗಲೇ ಮೃತಪಟ್ಟ ಸಹ ಆರೋಪಿ ಸ್ಟ್ಯಾನ್ ಸ್ವಾಮಿಯವರ ಸಾವು ಸಾಂಸ್ಥಿಕ ಕೊಲೆ ಎಂದು ವ್ಯಾಖ್ಯಾನಿಸಿರುವ ಪ್ರಕರಣದ 10 ಇತರ ಆರೋಪಿಗಳು , ಇದನ್ನು ಪ್ರತಿಭಟಿಸಿ ತಲೋಜಾ ಜೈಲಿನಲ್ಲಿ ಬುಧವಾರ 1 ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ ಎಂದು ವರದಿಯಾಗಿದೆ.

ಎಲ್ಗರ್ ಪರಿಷದ್ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಹಾಗೂ ತಲೋಜಾ ಜೈಲಿನ ಮಾಜಿ ಅಧೀಕ್ಷಕ ಕೌಸ್ತುಭ್ ಕುರ್ಲೇಕರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ರೋನಾ ವಿಲ್ಸನ್, ಸುರೇಂದ್ರ ಗಾಡ್ಗೀಳ್, ಸುಧೀರ್ ಧವಳೆ, ಮಹೇಶ್ ರಾವತ್, ಅರುಣ್ ಫೆರೇರಾ, ವೆರ್ನಾನ್ ಗೋನ್ಸಾಲ್ವಿಸ್, ಗೌತಮ್ ನವಲಖ, ಆನಂದ್ ತೇಲ್ತುಂಬ್ಡೆ, ರಮೇಶ್ ಗೈಚಾರ್ ಮತ್ತು ಸಾಗರ್ ಗೋರ್ಖೆ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಈ ಪ್ರತಿಭಟನೆಯ ಬಗ್ಗೆ ತಮ್ಮ ಕುಟುಂಬದವರಿಗೆ ಮಾಹಿತಿ ನೀಡಿದ್ದರು ಎಂದು ಮೂಲಗಳು ಹೇಳಿವೆ.

ಬಳಿಕ ಹೇಳಿಕೆ ಬಿಡುಗಡೆಗೊಳಿಸಿದ ಕುಟುಂಬದ ಸದಸ್ಯರು ‘ ಸ್ಟ್ಯಾನ್ ಸ್ವಾಮಿಯ ಸಾಂಸ್ಥಿಕ ಹತ್ಯೆಗೆ ಎನ್ಐಎ ಮತ್ತು ಕೌಸ್ತುಭ್ ಕುರ್ಲೇಕರ್ ಹೊಣೆಗಾರರು. ಜೈಲಿನಲ್ಲಿ ಪೈಶಾಚಿಕ ವಿಚಾರಣೆ, ಆಸ್ಪತ್ರೆಯಿಂದ ತ್ವರಿತವಾಗಿ ಜೈಲಿಗೆ ಮರು ಸ್ಥಳಾಂತರ, ಹೀಗೆ ಸ್ವಾಮಿಗೆ ದೌರ್ಜನ್ಯ ನೀಡುವ ಒಂದೇ ಒಂದು ಅವಕಾಶವನ್ನೂ ಕುರ್ಲೇಕರ್ ತಪ್ಪಿಸಿಕೊಳ್ಳುತ್ತಿರಲಿಲ್ಲ. ಆದ್ದರಿಂದ ಕುರ್ಲೆಕರ್ ಮತ್ತು ಎನ್ಐಎ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಲಾಗಿದೆ. ಈ ಹೇಳಿಕೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಜೈಲಿನ ಅಧೀಕ್ಷಕರ ಮೂಲಕ ರವಾನಿಸಲಾಗುವುದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News