ಅಂಬರೀಶ್ ಮುಂದೆ ಕೈಕಟ್ಟಿ ನಿಂತಿದ್ದು ಹೌದು, ಆದರೆ ಅವರ ಗುಲಾಮ ಆಗಿದ್ನಾ: ಕುಮಾರಸ್ವಾಮಿ ಪ್ರಶ್ನೆ

Update: 2021-07-08 12:35 GMT

ಬೆಂಗಳೂರು, ಜು. 8: `ಅಂಬರೀಶ್ ಮುಂದೆ ನಾನು ಕೈಕಟ್ಟಿ ನಿಂತಿರುತ್ತಿದ್ದೆ ಹೌದು. ನಾನು ಸಾರ್ವಜನಿಕರ ಮುಂದೆಯೂ ಕೈಕಟ್ಟಿ ನಿಲ್ಲುತ್ತಿದ್ದೆ. ಆದರೆ, ಇವರು ಹೇಳುವಂತೆ ನಾನೇನು ಅಂಬರೀಶ್‍ಗೆ ಗುಲಾಮ ಆಗಿದ್ನಾ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಗುರುವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನಾನು ಸಾರ್ವಜನಿಕರ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದೆ ಎಂಬ ಸಂಸದೆ ಸುಮಲತಾ ಅವರ ಹೇಳಿಕೆಗೆ ಮಾಧ್ಯಮದವರು ಮನ್ನಣೆ ಕೊಡುವ ಅವಶ್ಯಕತೆ ಇಲ್ಲ. ನಾನು ಎರಡು ದಿನದ ಹಿಂದೆ ನೀಡಿದ್ದ ಹೇಳಿಕೆಗೆ ಮಹತ್ವ ನೀಡುವ ಅಗತ್ಯವಿಲ್ಲ' ಎಂದು ಸ್ಪಷ್ಟನೆ ನೀಡಿದರು.

ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ, ಅದರ ಬಗ್ಗೆ ಮಾಧ್ಯಮದವರು ಗಮನಹರಿಸಬೇಕು ಎಂದು ಸಲಹೆ ಮಾಡಿದ ಕುಮಾರಸ್ವಾಮಿ, ಭ್ರಷ್ಟಾಚಾರದ ವಿಷಯದಲ್ಲಿ ಕುಮಾರಸ್ವಾಮಿ ಅಂಬಾಸಿಡರ್ ಎಂದು ಹೇಳಿದ್ದಾರೆ. ಹೌದು, ನಾನು ಭ್ರಷ್ಟಾಚಾರ ಅಂಬಾಸಿಡರ್. ಅನೇಕ ವರ್ಷಗಳಿಂದ ನಾನು, ನಮ್ಮ ಕುಟುಂಬ ಭ್ರಷ್ಟಾಚಾರದ ವಿಷಯದಲ್ಲಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಭ್ರಷ್ಟ ಅಧಿಕಾರಿಗಳು, ಭ್ರಷ್ಟಾಚಾರದ ವಿರುದ್ಧ ದಾಖಲೆ ಸಮೇತ ಹೋರಾಟ ಮಾಡಿದ್ದೇವೆ. ಆ ಹೆಣ್ಣು ಮಗಳ ಬಗ್ಗೆ ಇದೀಗ ಯಾವುದೇ ಚರ್ಚೆ ಮಾಡುವುದು ಬೇಡ. ಮುಂದಿನ ಚುನಾವಣೆ ಸಂದರ್ಭದಲ್ಲಿ ನಾನು ಮಾತಾಡುತ್ತೇನೆ. ಇದೀಗ ಅವರ ಬಗ್ಗೆ ನಾನೂ ಏನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕುಮಾರಸ್ವಾಮಿ ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News