ವಿದೇಶದಲ್ಲಿ ಉದ್ಯೋಗದ ಆಮಿಷವೊಡ್ಡಿ ಲಕ್ಷಾಂತರ ರೂ. ವಂಚನೆ: ಆರೋಪಿ ಬಂಧನ

Update: 2021-07-08 13:30 GMT

ಬೆಂಗಳೂರು, ಜು.8: ವಿದೇಶದಲ್ಲಿ ಉದ್ಯೋಗ, ಅಂತರ್‍ರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ.ಗಳ ವಂಚನೆ ಮಾಡುತ್ತಿದ್ದ ಆರೋಪ ಸಂಬಂಧ ಓರ್ವನನ್ನು ಇಲ್ಲಿನ ಇಂದಿರಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಸವನಗುಡಿಯ ಆರ್ಮುಗಂ ಸರ್ಕಲ್‍ನ ಶ್ರೀನಿವಾಸ ರಾಘವನ್ ಅಯ್ಯಂಗಾರ್(55) ಬಂಧಿತ ಆರೋಪಿಯಾಗಿದ್ದಾನೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಅವರು ತಿಳಿಸಿದ್ದಾರೆ.

ಇಂದಿರಾನಗರದ ವಿಆರ್‍ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‍ನ ಅಧ್ಯಕ್ಷನಾಗಿದ್ದ ಆರೋಪಿ ರಾಘವನ್ ಶ್ರೀನಿವಾಸ್ ಅಯ್ಯಂಗಾರ್, ಇತರೆ ಮೂವರು ಆರೋಪಿಗಳಾದ ರಾಮಕೃಷ್ಣ, ಸಂತೋಷ್ ಕುಮಾರ್, ರಾಜುರಾವ್ ಅವರನ್ನು ಕಂಪೆನಿಗೆ ಸೇರಿಸಿಕೊಂಡಿದ್ದ. ಆನಂತರ, ಕಂಪೆನಿಯಿಂದ ನಿರುದ್ಯೋಗಿಗಳಿಗೆ ಪ್ರತಿಷ್ಠಿತ ಕಂಪೆನಿಗಳಲ್ಲದೆ ದೇಶ-ವಿದೇಶಗಳಲ್ಲೂ ಉದ್ಯೋಗ ಕೊಡಿಸುವುದಾಗಿ ನಂಬಿಸಿ 2 ರಿಂದ 6 ಲಕ್ಷದವರೆಗೆ ಹಣ ವಸೂಲಿ ಮಾಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ವಂಚನೆಗೊಳಗಾದ ಅರುಣಾ ಅವರಿಂದ 9 ಲಕ್ಷದವರೆಗೆ ಹಣ ತೆಗೆದುಕೊಂಡು ಮೋಸ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿ ಕಂಪೆನಿ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಕಂಪನಿಯಿಂದ ನಕಲಿ ಇ-ಮೇಲ್ ಐಡಿಗಳನ್ನು ಸಿದ್ಧಪಡಿಸಿ ಉದ್ಯೋಗಕ್ಕೆ ಆಯ್ಕೆಯಾದಂತೆ ಮಾಹಿತಿ ಕಳುಹಿಸಿ ದಾಖಲೆಗಳನ್ನು ಪಡೆದು ವಂಚನೆ ನಡೆಸಿರುವುದು ಕಂಡು ಬಂದಿದೆ ಎಂದು ಅವರು ತಿಳಿಸಿದರು.

ಇಲ್ಲಿಯವರೆಗೆ 30 ರಿಂದ 40 ಮಂದಿ ನಿರುದ್ಯೋಗಿಗಳಿಗೆ ವಂಚನೆ ನಡೆಸಿರುವುದು ಪತ್ತೆಯಾಗಿದೆ. ಕಂಪನಿಯಿಂದ ವಂಚನೆಗೊಳಗಾಗಿರುವವರು ಇಂದಿರಾ ನಗರ ಪೊಲೀಸರಿಗೆ ದೂರು ನೀಡುವಂತೆ ಡಿಸಿಪಿ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News