ಕೆಆರ್ ಎಸ್ ಬಗ್ಗೆ ಮುಖ್ಯಮಂತ್ರಿಗಳು ಮೌನವಹಿಸಿರುವುದು ಏಕೆ, ಸರ್ಕಾರ ಸತ್ತು ಹೋಗಿದಿಯೇ?: ಎಚ್.ವಿಶ್ವನಾಥ್

Update: 2021-07-09 18:51 GMT

ಮೈಸೂರು,ಜು.9: ಕನ್ನಡ ನಾಡಿನ ಜನರ ಜೀವನಾಡಿ ಕನ್ನಂಬಾಡಿ ಅಣೆಕಟ್ಟೆ ಬಗ್ಗೆ ಅಪಸ್ವರಗಳು ಎದ್ದು  ಬೀದಿಗಿಳಿದು ಒಬ್ಬರಿಗೊಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದರು ಮುಖ್ಯಮಂತ್ರಿಗಳು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಸರ್ಕಾರ ಏನು ಸತ್ತು ಹೋಗಿದಿಯೇ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸದೆ ಸುಮಲತಾ ಕೆಆರ್ ಎಸ್ ಬಿರುಕು ಬಿಟ್ಟಿದೆ ಎಂದು ಹೇಳುತ್ತಿದ್ದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಿರುಕು ಬಿಟ್ಟಿಲ್ಲ ಎನ್ನುತ್ತಿದ್ದಾರೆ. ಜಲಸಂಪನ್ಮೂಲ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವ ಮುಖ್ಯಮಂತ್ರಿಗಳು ಏಕೆ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ.  ಜಿಲ್ಲಾ ಉಸ್ತುವಾರಿ ಸಚಿವರು ಮೌನವಾಗಿದ್ದಾರೆ ಇದಕ್ಕೆ ಯಾಕೆ ಬೇಕು ಮಂತ್ರಿಗಿರಿ ಎಂದು ಪ್ರಶ್ನಿಸಿದರು.

ಕೆಆರ್ ಎಸ್ ವಿಚಾರವಾಗಿ ಇಷ್ಟು ಬೆಳೆಯಲು ಮುಖ್ಯಮಂತ್ರಿಗಳು ಅವಕಾಶ ನೀಡಬಾರದಿತ್ತು. ವಿವಾದ ಎದ್ದ ಕೂಡಲೇ ಟೆಕ್ನಿಕಲ್ ಟೀಮ್, ಗಣಿ ಟೀಮ್, ನೀರಾವರಿ ಇಲಾಖೆ ಅಧಿಕಾರಿಗಳು ಬಂದು ಬೀಡು ಬಿಡಬೇಕಾಗಿತ್ತು. ಅಧಿಕಾರಿಗಳು ಏನು ಕತ್ತೆ ಕಾಯುತ್ತಿದ್ದಾರೆಯೇ, ಜವಾಬ್ದಾರಿಯುತ ಜನರು ಬೀದಿಗೆ ಬಂದಿದ್ದಾರೆ. ಇವರಿಗೆ ಯಾರು ಬುದ್ಧಿ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆ.ಆರ್.ಎಸ್ ಅನ್ನು ರಾಜಕೀಯಕ್ಕೆ ತಂದಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿಗಳು ಮಾತನಾಡುತ್ತಿಲ್ಲ, ಇಷ್ಟೆಲ್ಲಾ ಬೆಳವಣಿಗೆ ನಡೆದರೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಮಾತನಾಡುತ್ತಿಲ್ಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುಮಲತಾ ಮತ್ತು ಕುಮಾರಸ್ವಾಮಿ ನಡುವೆ ಜಗಳ ನಮಗ್ಯಾಕೆ ಎನ್ನುತ್ತಿದ್ದಾರೆ. ಇದಕ್ಕಾಗಿಯೇ ಇದು ಮೂರು ಪಕ್ಷಗಳ ಸರ್ಕಾರ ಎನ್ನುವುದು ಎಂದು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News