ಕೇರಳದಲ್ಲಿ 'ಝಿಕಾ ವೈರಸ್': ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರದಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ

Update: 2021-07-10 12:14 GMT

ಬೆಂಗಳೂರು, ಜು. 10: ನೆರೆಯ ಕೇರಳ ರಾಜ್ಯದಲ್ಲಿ 'ಝಿಕಾ ವೈರಸ್' ಪ್ರಕರಣ ಪತ್ತೆಯಾದ ಹಿನ್ನೆಲೆ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.

ಮುಖ್ಯವಾಗಿ ಕೇರಳದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ ಜಿಲ್ಲೆಗಳಲ್ಲಿ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದು, ಸೊಳ್ಳೆಗಳಿಂದ ಹರಡುವ ಸೋಂಕು ಇದಾಗಿದ್ದು, ಆದುದರಿಂದ ಸೊಳ್ಳೆಗಳ ಸಂತತಿ ನಿಯಂತ್ರಣಕ್ಕೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ತಿಳಿಸಿದೆ.

ಏರ್ ಪೋರ್ಟ್, ಸಮುದ್ರತೀರ, ಹಳ್ಳಿಗಳು ಮತ್ತು ಬಡಾವಣೆಗಳಲ್ಲಿ ಏಡೀಸ್ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಹಾಗೂ ಜನವಸತಿ ಪ್ರದೇಶಗಳ 2 ಕಿ.ಮೀ ವ್ಯಾಪ್ತಿಯಲ್ಲಿ ಸೊಳ್ಳೆಗಳ ನಿಯಂತ್ರಣ ಕಾರ್ಯ ಮಾಡಿ ಈ ಬಗ್ಗೆ ಪ್ರತಿವಾರ ಸಿಬ್ಬಂದಿಯಿಂದ ಆರೋಗ್ಯ ಇಲಾಖೆಗೆ ವರದಿ ನೀಡಬೇಕು ಎಂದು ಸೂಚಿಸಲಾಗಿದೆ. ಗರ್ಭಿಣಿಯರು ಮತ್ತು ನವಜಾತ ಶಿಶುಗಳಿಗೆ ಈ 'ಝಿಕಾ' ವೈರಸ್ ಭಾರೀ ಅಪಾಯಕಾರಿ ಎಂದು ಸೂಚಿಸಲಾಗಿದೆ.

ಮೈಮೇಲೆ ಕೆಂಪು ರಾಶಸ್, ಜ್ವರ, ಗಂಟಲು ನೋವಿನ ಲಕ್ಷಣಗಳಿರುತ್ತವೆ. ಇಂತಹ ಲಕ್ಷಣಗಳಿದ್ದವರ ರಕ್ತದ ಮಾದರಿಯನ್ನು ಎನ್‍ಐವಿ ಯೂನಿಟ್‍ಗೆ ಕಳುಹಿಸಬೇಕು. ಗರ್ಭಿಣಿಯರ ಅಲ್ಟ್ರಾಸೌಂಡ್ ಮಾಡುವಾಗ ಮೈಕ್ರೊಸೆಫಾಲಿ (ಮಗುವಿನ ತಲೆಯ ಬೆಳವಣಿಗೆಯಲ್ಲಿ ವ್ಯತ್ಯಾಸ) ಇರುವ ಬಗ್ಗೆ ಗಮನಹರಿಸಬೇಕು. ಅಂತಹ ಪ್ರಕರಣ ಕಂಡುಬಂದರೆ ರಕ್ತದ ಮಾದರಿಯನ್ನು ಎಸ್‍ಐವಿಗೆ ಕಳಿಸಬೇಕೆಂದು ತಿಳಿಸಲಾಗಿದೆ.

ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಪ್ರತಿವಾರ ಜನಿಸುವ ಎಲ್ಲ ಶಿಶುಗಳ ವಿವರ ಪಡೆಯಬೇಕು, ಯಾವುದೇ ಮಗುವಿನಲ್ಲಿ ಮೈಕ್ರೊಸೆಫಾಲಿ ಕಂಡುಬಂದರೆ ಕೂಡಲೇ ತಾಯಿ ಮತ್ತು ಮಗು ಇಬ್ಬರ ರಕ್ತದ ಮಾದರಿಯನ್ನು ಎನ್‍ಐವಿಗೆ ಕಳುಹಿಸಬೇಕೆಂದು ಆದೇಶಿಸಲಾಗಿದೆ. ಬೆಂಗಳೂರು ನಗರ ಹಾಗೂ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.2ಕ್ಕಿಂತಲೂ ಕಡಿಮೆಯಿದೆ. ಆದರೆ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಶೇ.4 ಮತ್ತು ಶೇ.10ರಷ್ಟಿದೆ.

ಆ ರಾಜ್ಯಗಳಿಂದ ಕರ್ನಾಟಕ ಹಾಗೂ ಬೆಂಗಳೂರಿಗೆ ಸಾಕಷ್ಟು ಜನರು ಪ್ರಯಾಣ ಮಾಡುತ್ತಿದ್ದು, ಇದು ಆತಂಕ ಹೆಚ್ಚಿಸಿದೆ. ಸರಕಾರದ ಆದೇಶದಂತೆ ಪರಿಣಾಮಕಾರಿ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸಂಗ್ರಹ ಮಾಡಿದ ರಕ್ತದ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ (ಡಿಎನ್‍ಎ ಜೋಡಣೆಯ ಕ್ರಮ) ಪತ್ತೆ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ನಗರದಲ್ಲಿ ನಿತ್ಯ 500-600 ಪ್ರಕರಣಗಳು ಪತ್ತೆಯಾಗುತ್ತಿವೆ. ವಲಯವಾರು ಎಲ್ಲೆಲ್ಲಿ ಪ್ರಕರಣ ಹೆಚ್ಚಾಗುತ್ತಿವೆ ಎಂಬುದನ್ನು ಗುರುತಿಸಲಾಗುತ್ತಿದೆ. ಸೋಂಕಿತರ ಮನೆಗಳನ್ನು ಮೈಕ್ರೋ ಕಂಟೈನ್ಮೆಂಟ್ ವಲಯವಾಗಿ ಗುರುತಿಸಿ, ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News