ಕೋವಿಡ್‍ನಿಂದ ರಕ್ಷಣೆಗೆ ಕನಿಷ್ಠ ಎರಡು ವರ್ಷ ಮಾಸ್ಕ್ ಕಡ್ಡಾಯ: ಡಾ.ಸಿ.ಎನ್.ಮಂಜುನಾಥ್ ಮನವಿ

Update: 2021-07-11 17:41 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.11: ಕೋವಿಡ್ ಸೋಂಕಿನ ಅಪಾಯದಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕಾದರೆ ಕನಿಷ್ಟ ಮುಂದಿನ ಎರಡು ವರ್ಷ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕಾದ ಅಗತ್ಯವಿದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಸಿ,ಎನ್.ಮಂಜುನಾಥ್ ಮನವಿ ಮಾಡಿದ್ದಾರೆ.

ರವಿವಾರ ವಸಂತ ಪ್ರಕಾಶನದ ವತಿಯಿಂದ ನಗರದ ಜಯದೇವ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಿದ್ದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಲೇಖಕರ 11 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಮ್ಮ ದೇಹ ರಕ್ಷಣೆ ನಮ್ಮ ಜವಾಬ್ದಾರಿ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಯಾವುದೇ ವ್ಯಕ್ತಿ 60 ವರ್ಷಕ್ಕಿಂತ ಕೆಳಗೆ ಸಾವನ್ನಪ್ಪಿದರೆ, ಆ ಸಾವಿಗೆ ಆತನೇ ಕಾರಣನಾಗಿರುತ್ತಾನೆ. ಹಿಂದಿನ ದಿನಗಳಲ್ಲಿ ಅಪೌಷ್ಟಿಕತೆ, ಜ್ವರ ಸೇರಿದಂತೆ ಇತರೆ ಕಾಯಿಲೆಗಳಿಂದ ಸಾವನ್ನಪ್ಪಿದರೆ ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿಯ ಕಾರಣದಿಂದಾಗಿ ಕಡಿಮೆ ವಯಸ್ಸಿಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಹೃದಯಸಂಬಂಧಿ ಖಾಯಿಲೆ, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಇವೆಲ್ಲವೂ ನಮ್ಮ ಆಲಸ್ಯ, ಸೋಮಾರಿತನದ ಕಾರಣದಿಂದಾಗಿಯೇ ಬರುವಂತಹದ್ದಾಗಿದೆ. ಹೀಗಾಗಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಂಡು ಉತ್ತಮ ಜೀವನ ಕ್ರಮದಿಂದಾಗಿ ಆರೋಗ್ಯಯುತ ಜೀವನ ನಡೆಸಬಹುದೆಂದು ಅವರು ಹೇಳಿದ್ದಾರೆ.

ಆರೋಗ್ಯದ ಕುರಿತು ಜಾಗೃತಿ ಅಗತ್ಯ: ನಮ್ಮ ಸುತ್ತಮುತ್ತ ಕಾಣಿಸಿಕೊಳ್ಳುವಂತಹ ಆರೋಗ್ಯದ ಸಮಸ್ಯೆ, ರೋಗಗಳು ಬರಲು ಕಾರಣಗಳೇನು, ರೋಗಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕನ್ನಡದಲ್ಲಿ ಹೆಚ್ಚು ಹೆಚ್ಚು ಪುಸ್ತಕಗಳು ಬರಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ತಜ್ಞರಿದ್ದಾರೆ. ಆದರೆ, ಹೆಚ್ಚಿನ ಮಂದಿಗೆ ತಮ್ಮ  ಜ್ಞಾನವನ್ನು ಜನಸಾಮಾನ್ಯರಿಗೆ ತಿಳಿಸುವಂತಹ ಬರವಣಿಗೆ ಶೈಲಿ ಇರುವುದಿಲ್ಲ. ಬರವಣಿಗೆ ಎನ್ನುವುದು ಸುಲಭದ ಕೆಲಸವಲ್ಲ. ಇದರ ನಡುವೆ ಕೆಲವರು ತಮ್ಮ ವೃತ್ತಿಯ ಜೊತೆಗೆ ಬರವಣಿಗೆಯಲ್ಲಿ ತೊಡಗಿರುವುದು ಶ್ಲಾಘನೀಯ. ಆರೋಗ್ಯ ಸಂಬಂಧಿಸಿದ ಕೃತಿಗಳು ಹೆಚ್ಚು ಜನರಿಗೆ ತಲುಪುವಂತಹ ಕೆಲಸಗಳಾಗಬೇಕೆಂದು ಅವರು ಹೇಳಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಜೀವನದಲ್ಲಿ ಹಾಸ್ಯಪ್ರಜ್ಞೆ, ಸಮಾಜಮುಖಿ ಜೀವನ ಶೈಲಿಯಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುವ ಮೂಲಕ ಆರೋಗ್ಯದ ಕುರಿತ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಹಾಗೂ ಅನುಷ್ಠಾನಕ್ಕೆ ತರಬೇಕೆಂದು ತಿಳಿಸಿದ್ದಾರೆ.  

ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಸುಂಧರಾ ಭೂಪತಿ, ಮಾಜಿ ಉಪಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್, ಹಿರಿಯ ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಹಿರಿಯ ಹೃದ್ರೋಗ ತಜ್ಞ ಡಾ.ಸುರೇಶ್ ಸಗರದ ಮತ್ತಿತರರು ಉಪಸ್ಥಿತರಿದ್ದರು.

ರೋಗಿಗಳೊಂದಿಗೆ ಕನ್ನಡದಲ್ಲಿ ವ್ಯವಹಾರ

'ಬದುಕಿನ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಸಾಹಿತ್ಯ ರಚಿಸಬೇಕು. ಅದು ಕನ್ನಡದಲ್ಲಿರಬೇಕು ಎಂಬ ಕನಸು ನನ್ನಲ್ಲಿತ್ತು. ನಮ್ಮಲ್ಲಿ 100ಕ್ಕೆ 80 ಜನ ಕನ್ನಡ ರೋಗಿಗಳು(ಕನ್ನಡದಲ್ಲಿ ವ್ಯವಹರಿಸುವವರು) ಇದ್ದಾರೆ. ಅವರಿಗೆ ಕನ್ನಡ ಮಾತನಾಡಬಲ್ಲ ವೈದ್ಯರ ಅಗತ್ಯವಿದೆ. ಅನೇಕ ವೈದ್ಯರು ಕನ್ನಡದಲ್ಲಿ ಪುಸ್ತಕಗಳನ್ನು ಬರೆಯುತ್ತಿದ್ದಾರೆ. ರೋಗಿಗಳೊಂದಿಗೂ ಮಾತೃಭಾಷೆಯಲ್ಲೇ ವ್ಯವಹರಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ'.

-ಎಚ್.ಎಸ್.ವೆಂಕಟೇಶಮೂರ್ತಿ,
ಹಿರಿಯ ಕವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News