ಹಿರಿಯ ನಟ ಅನಂತನಾಗ್ ಗೆ ಪದ್ಮ ಪ್ರಶಸ್ತಿಗೆ ಆಗ್ರಹಿಸಿ ಟ್ವಿಟರ್ ಅಭಿಯಾನ

Update: 2021-07-13 19:35 GMT

ಬೆಂಗಳೂರು, ಜು.13: ಪದ್ಮ ಪ್ರಶಸ್ತಿ ಗೆ ಸೆಪ್ಟಂಬರ್ 15ರ ಒಳಗಾಗಿ ಸಾಧಕರ ಹೆಸರು ಸೂಚಿಸುವಂತೆ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರು ಮನವಿ ಮಾಡಿಕೊಂಡಿದ್ದು, ಇದೀಗ ಹಿರಿಯ ನಟ ಅನಂತನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡುವಂತೆ ಕನ್ನಡದ ಹಲವು ನಟ, ನಟಿಯರು ಆನ್ ಲೈನ್ ನಲ್ಲಿ ಅಭಿಯಾನ ಆರಂಭಿಸಿದ್ದಾರೆ. 

ಬಹುಭಾಷಾ ನಟರಾಗಿರುವ ಅನಂತನಾಗ್ ಅವರು, 1973ರಲ್ಲಿ ಸಂಕಲ್ಪ ಎಂಬ ಚಿತ್ರದ ಮೂಲಕ ಸಿನಿ ಜಗತ್ತಿಗೆ ಪ್ರವೇಶಿಸಿ ಕನ್ನಡ ಸೇರಿದಂತೆ ಮಳಯಾಳಂ, ತಮಿಲು, ತೆಲುಗು, ಮರಾಠಿ, ಹಿಂದಿ ಭಾಷೆಗಳ 300ಕ್ಕೂ ಅಧಿಕ ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. 

ಈ ವರೆಗೆ 7 ರಾಜ್ಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅನಂತನಾಗ್ ಅವರಿಗೆ ರಾಷ್ಟ್ರದ ಅತ್ಯುನ್ನತ ಗೌರವಗಳಲ್ಲಿ ಒಂದಾಗಿರುವ ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕೆಂದು ಪ್ರಧಾನಿ ಮೋದಿಗೆ ಮನವಿ ಮಾಡಿ ಟ್ವಿಟರ್ ನಲ್ಲಿ #AnanthnagforPadma ಎಂಬ ಹ್ಯಾಶ್ ಟ್ಯಾಗ್ ಬಳಸಿ  ನಟ, ನಿರ್ದೇಶಕರಾಗಿರುವ ರಿಷಭ್ ಶೆಟ್ಟಿ ಹಾಗೂ ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಹಲವು ಮಂದಿ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ.

'ಹಿರಿಯ ನಟ ಶ್ರೀ ಅನಂತನಾಗ್ ಅವರಿಗೆ ಪದ್ಮಪ್ರಶಸ್ತಿ ನೀಡಬೇಕೆಂಬ ಈ ಪ್ರಯತ್ನದಲ್ಲಿ ನಾವೆಲ್ಲರೂ ಒಂದಾಗಿ ಕೈ ಜೋಡಿಸೋಣ. ಈ ಮಾಹಿತಿಯನ್ನು ಇಂದಿನಿಂದಲೇ ಹೆಚ್ಚೆಚ್ಚು ಜನರಿಗೆ ತಲುಪಿಸೋಣ' ಎಂದು ನಟ, ನಿರ್ದೇಶಕರ ರಿಷಭ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. 

ಇನ್ನು ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿ 'ಅಪ್ರತಿಮ ನಟನಿಗೆ ಅತ್ಯುನ್ನತ ಪ್ರಶಸ್ತಿಯೊಂದು ಗುಡಿಯ ಮೇಲೆ ಕಲಶವಿಟ್ಟಂತೆ. ಹಿರಿಯ ನಟ ಶ್ರೀ ಅನಂತನಾಗ್ ಅವರಿಗೆ ಪದ್ಮಪ್ರಶಸ್ತಿ ನೀಡಬೇಕೆಂಬುದು ನನ್ನ ಹಾಗೂ ಕನ್ನಡಿಗರ ಆಶಯ. ಈ ಪ್ರಯತ್ನಕ್ಕೆ ನಾವೆಲ್ಲರೂ ಒಂದಾಗಿ ಬೆಂಬಲ ಸೂಚಿಸೋಣ' ಎಂದು ಕೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News